ಕುಂದಾಪುರ: ಶಂಕರನಾರಾಯಣ ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್ ವಿದ್ಯಾರ್ಥಿ ಪ್ರೀತಮ್ ಪೂಜಾರಿ ರಾಜ್ಯಕ್ಕೆ ಟಾಪರ್, ಉಡುಪಿ ಜಿಲ್ಲೆಗೆ ಪ್ರಥಮ
Views: 7
ಕನ್ನಡ ಕರಾವಳಿ ಸುದ್ದಿ: ಎಸೆಸೆಲ್ಸಿ ಪರೀಕ್ಷೆಯಲ್ಲಿ ಶಂಕರನಾರಾಯಣ ಮದರ್ ತೆರೆಸಾ ಮೆಮೋರಿಯಲ್ ಪ್ರೌಢಶಾಲೆಯ ವಿದ್ಯಾರ್ಥಿ ಪ್ರೀತಮ್ ಜಿ. ಪೂಜಾರಿ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಗಳಲ್ಲಿ ಒಬ್ಬರಾಗಿದ್ದರೆ, ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.
ಪ್ರೀತಮ್ ಪೂಜಾರಿ ಸೇರಿ ಒಟ್ಟು ಏಳು ಮಂದಿ ಗರಿಷ್ಠ 625 ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ
ಪ್ರೀತಮ್ ಬಿದ್ಕಲ್ ಕಟ್ಟೆ ಕಟ್ಟೆ ನಿವಾಸಿ ಗಣಪತಿ ಪೂಜಾರಿ-ನಾಗರತ್ನಾ ದಂಪತಿಯ ಇಬ್ಬರ ಮಕ್ಕಳ ಪೈಕಿ ಹಿರಿಯ ಪುತ್ರ. ತಂದೆ ಗಣಪತಿಯವರು ಶ್ರೀ ಲಕ್ಷ್ಮೀ ಎಕ್ಸೆಸ್ ಖಾಸಗಿ ಬಸ್ಸಿನಲ್ಲಿ ಕಂಡಕ್ಟರ್. ತಾಯಿ ನಾಗರತ್ನಾ ಗೃಹಿಣಿ. ಎಲ್.ಕೆ.ಜಿ.ಯಿಂದಲೂ ಈತ ಮದರ್ ಥೆರೆಸಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದ.
ಸಾಧಕ ವಿದ್ಯಾರ್ಥಿ ಅನಿಸಿಕೆ
ಸಾಧಕ ವಿದ್ಯಾರ್ಥಿ ಪ್ರೀತಮ್ ಪೂಜಾರಿ ಮಾತನಾಡಿ ” 625 ಕ್ಕೆ 625 ಸಿಕ್ಕ ವಿಚಾರ ತಿಳಿದು ತುಂಬಾ ಸಂತೋಷ ಪಟ್ಟೆ. ಮನೆಯಲ್ಲಿ ತಂದೆ ಮತ್ತು ತಾಯಿ ಮತ್ತು ಶಾಲೆಯಲ್ಲಿ ಶಿಕ್ಷಕರು ತುಂಬಾ ಸಹಕಾರ ನೀಡಿದ್ದಾರೆ. ನನಗೆ ಕೈಬರಹದ ಬಗ್ಗೆಯೇ ಅನುಮಾನವಿತ್ತು. ನನ್ನ ಕನ್ನಡ ಶಿಕ್ಷಕಿ ವೈಶಾಲಿ ಅವರು ನನ್ನನ್ನು ತಿದ್ದಿ ತೀಡಿ ಬದಲಾವಣೆ ತರಲು ನೆರವಾಗಿದ್ದಾರೆ. ಬಾಲ್ಯದಿಂದಲೂ ತಂದೆ ತಾಯಿಗೆ ನಾನು ರಾಜ್ಯಕ್ಕೆ ಪ್ರಥಮ ಬರಬೇಕೆಂಬ ಅಸೆ ಇತ್ತು ಅದು ಇಂದು ಈಡೇರಿದೆ” ಎಂದು ಪ್ರೀತಮ್ ಹೇಳಿದರು.
“620 ಕ್ಕಿಂತ ಹೆಚ್ಚಿನ ಅಂಕ ಪಡೆಯುವ ನಿರೀಕ್ಷೆ ಇತ್ತು. ಪ್ರತಿದಿನವೂ ತಯಾರಿ ನಡೆಸುತ್ತಿದ್ದೆ ಮತ್ತು ನಾನು ಉತ್ತಮ ಅಂಕಗಳನ್ನು ಗಳಿಸುತ್ತಿದ್ದೆ. ಪ್ರತಿದಿನವೂ ಗುರಿಯನ್ನು ಹೊಂದಿಸಲು ಮತ್ತು ಯೋಜನೆಗೆ ಬದ್ಧನಾಗಿರುತ್ತಿದ್ದೆ. ಎಲ್ಲರಿಗೂ ನಿರೀಕ್ಷೆಗಳಿದ್ದವು. ನನ್ನ ಶಿಕ್ಷಕರು ಸಂತೋಷ ಪಟ್ಟಿದ್ದಾರೆ” ಎಂದರು.
ಸಾಧಕ ವಿದ್ಯಾರ್ಥಿ ಪ್ರೀತಮ್ ಜಿ. ಪೂಜಾರಿ, ಅಂದಿನ ಪಾಠವನ್ನು ಅಂದೇ ಕಣ್ಣುಹಾಯಿಸುತ್ತಿದ್ದೆ. ಪಠ್ಯವನ್ನು ಓದಿ ಮುಗಿಸಲು ತಿಂಗಳ ಗುರಿಯನ್ನು ಇಟ್ಟುಕೊಂಡಿದ್ದೆ. ಪೋಷಕರು ಹಾಗೂ ವಿದ್ಯಾಸಂಸ್ಥೆಯವರ ಪ್ರೋತ್ಸಾಹ, ಮಾರ್ಗದರ್ಶನ ಸಾಧನೆಗೆ ಪ್ರೇರಣೆ. ಮುಂದೆ ವಿಜ್ಞಾನ ವಿಭಾಗದಲ್ಲಿ ಪಿಸಿಎಂಸಿಎಸ್ ಓದಿ ಜೆಇಇ ಪರೀಕ್ಷೆ ಬರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಸಾಧನೆಗೆ ವಿದ್ಯಾ ಸಂಸ್ಥೆ ಸಂತಸ
ಶಂಕರನಾರಾಯಣ ಮದರ್ ಥೆರೆಸಾ ಮೆಮೋರಿಯಲ್ ಶಾಲೆಯ ಸಂಸ್ಥಾಪಕರಾದ ಶಮಿತಾ ರಾವ್ ಹಾಗೂ ರೇನಿಟಾ ಲೋಬೋ ಮಾತನಾಡಿ, ವಿದ್ಯಾರ್ಥಿ ಪ್ರೀತಮ್ ಪೂಜಾರಿ ಸಾಧನೆ ಸಂತಸ ತಂದಿದೆ. ಆತ ವಿದ್ಯಾಭ್ಯಾಸ ಹಾಗೂ ಇತರ ಚಟುವಟಿಕೆಯಲ್ಲಿ ಸದಾ ಚುರುಕಾಗಿದ್ದ, 625 ಅಂಕ ಪಡೆಯುವ ನಿರೀಕ್ಷೆಯೂ ನಮಗೆ ಇತ್ತು. ಆತನ ಪರಿಶ್ರಮದ ಜೊತೆಗೆ ಗುರುಹಿರಿಯರ ಜೊತೆ ವಿನಮ್ರತೆ ಹೊಂದಿದ್ದ. ಈ ಬಾರಿ ರಾಜ್ಯಮಟ್ಟದ ಕ್ವಿಝ್ ನಲ್ಲಿ ಎರಡನೇ ಸ್ಥಾನಿಯಾಗಿದ್ದ ಎಂದರು.
“620 ಕ್ಕಿಂತ ಹೆಚ್ಚಿನ ಅಂಕ ಪಡೆಯುವ ನಿರೀಕ್ಷೆ ಇತ್ತು. ಪ್ರತಿದಿನವೂ ತಯಾರಿ ನಡೆಸುತ್ತಿದ್ದೆ ಮತ್ತು ನಾನು ಉತ್ತಮ ಅಂಕಗಳನ್ನು ಗಳಿಸುತ್ತಿದ್ದೆ. ಪ್ರತಿದಿನವೂ ಗುರಿಯನ್ನು ಹೊಂದಿಸಲು ಮತ್ತು ಯೋಜನೆಗೆ ಬದ್ಧನಾಗಿರುತ್ತಿದ್ದೆ. ಎಲ್ಲರಿಗೂ ನಿರೀಕ್ಷೆಗಳಿದ್ದವು. ನನ್ನ ಶಿಕ್ಷಕರು ಸಂತೋಷ ಪಟ್ಟಿದ್ದಾರೆ” ಎಂದರು.






