ಸಾಮಾಜಿಕ

ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ 30ನೇ ಮಹಾಧಿವೇಶನ

ಬ್ರಾಹ್ಮಣರು ಉನ್ನತಿಗೇರಿದ್ದು ಅವರ ಪ್ರತಿಭೆ - ಅನುಷ್ಠಾನಗಳಿಂದ, ಇತರರ ಭಿಕ್ಷೆಯಿಂದಲ್ಲ - ಡಾ. ಪುತ್ತೂರಾಯ 

Views: 141

ಕುಂದಾಪುರ :”ಹಿಂದೆ ರಾಜ ಮಹಾರಾಜರು ಬ್ರಾಹ್ಮಣರಿಗೆ ರಾಜಾಶ್ರಯ ನೀಡಿ ಪುರಸ್ಕರಿಸುತ್ತಿದ್ದರು. ಇಂದು ರಾಜರೇ ಇಲ್ಲದ್ದರಿಂದ ಬ್ರಾಹ್ಮಣರು ಅತಂತ್ರರಾಗಿದ್ದಾರೆ.ಒಂದು ಕಾಲದಲ್ಲಿ ವಂದನೀಯರಾಗಿದ್ದವರು ಇಂದು ನಿಂದನೀಯರೂ, ಪೂಜ್ಯರಾಗಿದ್ದವರು ತ್ಯಾಜ್ಯರೂ ಆಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂದು ದೇಶದಲ್ಲಿ ಬ್ರಾಹ್ಮಣರ ಸ್ಥಿತಿ ಸುಂದರ ಮೂಗುತಿ ಕಳಚಿ ಬಿದ್ದು ಬರೇ ತೂತು ಉಳಿದ ಮೂಗಿನಂತಾಗಿದೆ. ಬ್ರಾಹ್ಮಣರ ಹಿತಾಸಕ್ತಿಗಳಿಗೆ ವಿರುದ್ಧವಾದ ಸರ್ಕಾರಗಳು, ಹೊಸ ಕಾನೂನಿನಿಂದ ಕೈತಪ್ಪಿದ ಭೂಮಿ, ಮಂತ್ರ, ಅನುಷ್ಠಾನ ಬಾರದವನೂ ಅರ್ಚಕನಾಗಬಹುದೆಂಬ ಸರ್ಕಾರಿ ನೀತಿ ಹಾಗೂ ಮೀಸಲಾತಿಗಳಿಂದ ಬ್ರಾಹ್ಮಣರು ಇಂದು ಅಲ್ಪ ಸಂಖ್ಯಾತರಾಗಿದ್ದಾರೆ. ಆದರೆ, ಇತರ ಅಲ್ಪಸಂಖ್ಯಾತರಿಗಿರುವ ಸೌಲಭ್ಯ ಬ್ರಾಹ್ಮಣರಿಗಿಲ್ಲ! ಕೆಳಗಿದ್ದವರನ್ನು ಮೇಲೇತ್ತಬೇಕೆಂದು ಮೀಸಲಾತಿ ತಂದರೆ, ಇಂದು ಅಂಬೇಡ್ಕರರ ಆಶಯಕ್ಕೆ ವಿರುದ್ಧವಾಗಿ ಮೇಲಿದ್ದವರನ್ನೇ ಕೆಳಗೆ ತುಳಿಯಲಾಗುತ್ತಿದೆ. ಬ್ರಾಹ್ಮಣರು ಜಾತಿ ವ್ಯವಸ್ಥೆ ತಂದರು ಎಂದು ಆಪಾದಿಸಲಾಗುತ್ತಿದೆ. ಆದರೆ, ವಾಸ್ತವವಾಗಿ ಜಾತಿ ವ್ಯವಸ್ಥೆಯಿಂದ ತೊಂದರೆಗೊಳಗಾದವರು ಬ್ರಾಹ್ಮಣರು. ಅವರು ಬುದ್ಧಿಮತ್ತೆಯಲ್ಲಿ ಇಂದಿಗೂ ಬಹುಸಂಖ್ಯಾತರೇ. ಸರ್ವ ಕ್ಷೇತ್ರಗಳಲ್ಲೂ ಮುಂದಿರುವವರು ಬ್ರಾಹ್ಮಣರೇ. ಇದು ಅವರ ಅನುಷ್ಠಾನ ಮತ್ತು ಪ್ರತಿಭೆಯಿಂದಲೇ ಹೊರತು ಇತರರ ಭಿಕ್ಷೆಯಿಂದಲ್ಲ. ಆದ್ದರಿಂದ ಬ್ರಾಹ್ಮಣರು ಸ್ವಾಭಿಮಾನ, ಸಂಸ್ಕಾರ, ಜಾತ್ಯಾತೀತತೆ ಮತ್ತು ರಾಜಕೀಯ ಶಕ್ತಿಗಳನ್ನು ಗಳಿಸುವುದು ಇಂದಿನ ಅಗತ್ಯ. ಬ್ರಾಹ್ಮಣ ಎನ್ನುವುದು ಜಾತಿಯಾದರೆ ಬ್ರಾಹ್ಮಣ್ಯ ಎಂಬುದು ನೀತಿ. ಜಗತ್ತೇ ಒಂದು ಮನೆ, ಅದರ ದೇವರ ಕೋಣೆ ಭಾರತ, ಅದರ ನಂದಾದೀಪವೇ ಬ್ರಾಹ್ಮಣರು. ಅವರು ಉಳಿದು ಬೆಳೆದರೆ ಈ ದೇಶದ ಸಂಸ್ಕಾರ – ಸಂಸ್ಕೃತಿ ಉಳಿಯುತ್ತದೆ. ಇದನ್ನು ಬ್ರಾಹ್ಮಣರು ಅರಿತುಕೊಳ್ಳಬೇಕು” – ಎಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ನಿರ್ದೇಶಕ, ಅಖಿಲ ಭಾರತ ಬ್ರಾಹ್ಮಣ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷ ಡಾ. ಕೆ.ಪಿ. ಪುತ್ತೂರಾಯ ಹೇಳಿದರು.

ಕೋಟೇಶ್ವರ ಸಮೀಪದ ಕಾಳಾವರದಲ್ಲಿನ ಶ್ರೀ ಶಂಕರ ಸಭಾ ಭವನದಲ್ಲಿ ನಡೆದ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತಿನ 30ನೇ ವಾರ್ಷಿಕ ಅಧಿವೇಶನದಲ್ಲಿ ವಿಶೇಷ ಪ್ರವಚನ ನೀಡಿದ ಅವರು, ಪರಿಷತ್ ಮುಖವಾಣಿ ‘ವಿಪ್ರವಾಣಿ’ಯ ಪ್ರಧಾನ ಸಂಪಾದಕ ಪ್ರೊ. ಶಂಕರ ರಾವ್ ಕಾಳಾವರ ವಿರಚಿತ “ಕೆಸರಜ್ಜನ ತ್ರಿಪದಿಗಳು” ಎಂಬ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು.

ಅಧಿವೇಧನವನ್ನು ಉದ್ಘಾಟಿಸಿ, 103 ನೇ ವಿಪ್ರವಾಣಿ ಸಂಚಿಕೆಯನ್ನು ಅನಾವರಣಾಗೊಳಿಸಿದ ವಿಪ್ರವಾಣಿಯ ಪ್ರಧಾನ ಸಂಪಾದಕ ಪ್ರೊ. ಶಂಕರ ರಾವ್ ಕಾಳಾವರ, “ದೇಶದಾದ್ಯಂತ ಇಂದು ಬ್ರಾಹ್ಮಣ ಸಂಘಟನೆ ಬಲಗೊಳ್ಳುತ್ತಿದೆ. ಶುದ್ಧ ಸದಾಚಾರದ ಬ್ರಾಹ್ಮಣ್ಯದ ಮಹತ್ವದ ಅರಿವು ಎಲ್ಲಿರಿಗೂ ಉಂಟಾಗುತ್ತಿರುವುದು ಒಳ್ಳೆಯ ಲಕ್ಷಣ. ಕಳೆದ ಮೂವತ್ತು ವರ್ಷಗಳ ಹಿಂದೆ ಕುಂದಾಪುರದ ಶ್ರೀ ಕುಂದೇಶ್ವರ ದೇವಾಲಯದಲ್ಲಿ ಚಂದ್ರಶೇಖರ ಹೊಳ್ಳ, ಎ ಎಸ್ ಎನ್ ಹೆಬ್ಬಾರ್, ಡಾ. ನರಸಿಂಹ ಮೂರ್ತಿ ಮೊದಲಾದ ಹಿರಿಯ ವಿಪ್ರರಿಂದ ಆರಂಭಗೊಂಡ ಕುಂದಾಪುರ ತಾಲೂಕು ಬ್ರಾಹ್ಮಣ ಪರಿಷತ್ ಇಂದು ವಿವಿಧ ವಲಯಗಳ ಸೇರ್ಪಡೆಯಿಂದ ವಿಪ್ರ ಸಂಘಟನೆಯಲ್ಲಿ ಉತ್ತಮ ಕಾರ್ಯ ನಡೆಸುತ್ತಿದೆ. ಹಾಗೆಯೇ ಪರಿಷತ್ತಿನ ಪತ್ರಿಕೆ ವಿಪ್ರವಾಣಿ ಕೂಡಾ ಅವಿಚ್ಚಿನ್ನವಾಗಿ ಪ್ರಕಟಗೊಳ್ಳುತ್ತಾ ವಿಪ್ರ ಸಂಘಟನೆ, ಸಂವಹನ, ಜ್ಞಾನಾರ್ಜನೆಯಲ್ಲಿ ಮುಖ್ಯ ಪಾತ್ರ ವಹಿಸಿದೆ ಎಂದು ಹೇಳಿದರು.

ವಿಪ್ರವಾಣಿ ಸಂಚಿಕೆ ಪ್ರಾಯೋಜಕರಾದ ಡಾ. ಲಿಂಗಪ್ರಸಾದ್ – ಸ್ಮಿತಾ ದಂಪತಿಯನ್ನು ಸನ್ಮಾನಿಸಲಾಯಿತು. ಸಹ ಸಂಪಾದಕರಾದ ಹಳ್ಳಿ ಶ್ರೀನಿವಾಸ ಭಟ್ ಮತ್ತು ಅಶೋಕ್ ಹೊಳ್ಳ ಇದ್ದರು.

ಮುಖ್ಯ ಅತಿಥಿಗಳಾಗಿದ್ದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಸಮಿತಿಯ ಸದಸ್ಯ ಯು. ರಾಜೇಶ್ ಕಾರಂತ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಕೃಷ್ಣಾನಂದ ಚಾತ್ರ, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಂದೀಪ್ ಕುಮಾರ್ ಮಂಜ, ಜಿಲ್ಲಾ ಬ್ರಾಹ್ಮಣ ಮಹಾಸಭಾ ಮಹಿಳಾ ವೇದಿಕೆ ಅಧ್ಯಕ್ಷೆ ಕಾಂತಿ ರಾವ್ ಶುಭ ಹಾರೈಸಿದರು.

ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಎಚ್. ಶುಭಚಂದ್ರ ಹತ್ವಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ಗೌರವಾಧ್ಯಕ್ಷ ಬಿ. ಎಸ್. ಅನಂತಪದ್ಮನಾಭ ಬಾಯಿರಿ, ಪ್ರಧಾನ ಕಾರ್ಯದರ್ಶಿ ರತ್ನಾಕರ ಉಡುಪ, ಖಜಾಂಚಿ ರಘುರಾಮ್ ರಾವ್, ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಸಂಧ್ಯಾ ಉಡುಪ, ಯುವ ವೇದಿಕೆ ಅಧ್ಯಕ್ಷ ಅವನೀಶ್ ಹೊಳ್ಳ ಮತ್ತು ಕೋಟೇಶ್ವರ ವಲಯ ಅಧ್ಯಕ್ಷ ಬಿ. ವಾದಿರಾಜ ಹೆಬ್ಬಾರ್, ವಿಪ್ರವಾಣಿ ಪ್ರಾಯೋಜಕ ಡಾ. ಲಿಂಗ ಪ್ರಸಾದ್, ಪರಿಷತ್ ಹಾಗೂ ವಿವಿಧ ವಲಯ ಪದಾಧಿಕಾರಿಗಳು, ವಿಶೇಷ ಆಹ್ವಾನಿತರು ಉಪಸ್ಥಿತರಿದ್ದರು.

ಅಗ್ನಿಮಾನ್ ವೇದಮೂರ್ತಿ ತಲಾರಿ ವಾಮಾನ ಭಟ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಭಾಗವತ ರಾಘವೇಂದ್ರ ಮಯ್ಯ, ಔದ್ಯೋಗಿಕ ಕ್ಷೇತ್ರದಲ್ಲಿನ ಸಾಧಕ ರಾಜೇಶ್ ಕಾರಂತ, ಶ್ರೀ ಕುಂದೇಶ್ವರ ದೇವಳ ಸಮಿತಿ ಅಧ್ಯಕ್ಷ ಎಸ್. ವಾಸುದೇವ ಯಡಿಯಾಳರನ್ನು ವಿಪ್ರ ಸಮ್ಮಾನ ನೀಡಿ ಗೌರವಿಸಲಾಯಿತು. ವಿವಿಧ ವಲಯದ ಸಾಧಕರನ್ನು ಸನ್ಮಾನಿಸಲಾಯಿತು.

ವೈ ಎನ್ ವೆಂಕಟೇಶಮೂರ್ತಿ ಭಟ್, ಸುಬ್ರಹ್ಮಣ್ಯ ಐತಾಳ, ಕೆ ಜಿ ವೈದ್ಯ, ವೆಂಕಟರಮಣ ಹೊಳ್ಳ, ಗಣೇಶ್ ರಾವ್, ಶಾಂತಾ ಗಣೇಶ್, ವಾಣಿಶ್ರೀ ಹೆಬ್ಬಾರ್, ಸತೀಶ್ ಅಡಿಗ, ಶ್ರೀನಿವಾಸ ಭಟ್, ಅಶೋಕ್ ಹೊಳ್ಳ ಮತ್ತು ನಿತ್ಯಾನಂದ ವೈದ್ಯ ಗಣ್ಯರನ್ನು ಗೌರವಿಸಿದರು.

ಸುಧಾ ರಾಜಗೋಪಾಲ್ ಪ್ರಾರ್ಥಿಸಿದರು. ಕೋಟೇಶ್ವರ ವಲಯಾಧ್ಯಕ್ಷ ವಾದಿರಾಜ ಹೆಬ್ಬಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರತ್ನಾಕರ ಉಡುಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಪೂರ್ಣಿಮಾ ಭಟ್, ಸತೀಶ್ ಅಡಿಗ ಮತ್ತು ನಾಗರತ್ನ ಉಡುಪ ಕಾರ್ಯಕ್ರಮ ನಿರೂಪಿಸಿ, ಯುವ ವೇದಿಕೆ ಅಧ್ಯಕ್ಷ ಅವನೀಶ್ ಹೊಳ್ಳ ವಂದಿಸಿದರು.

ವಾರ್ಷಿಕಾಧಿವೇಶನದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು. ಅರ್ಹರಿಗೆ ವೈದ್ಯಕೀಯ ನೆರವು ವಿತರಿಸಿ, ವಲಯಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಸಭಾರಂಭದಲ್ಲಿ, ಆಗಲಿದ ಚೇತನಗಳಿಗೆ ಶೃದ್ಧಾಂಜಲಿ ಕೋರಿ ಸದ್ಗತಿಗಾಗಿ ಪ್ರಾರ್ಥಿಸಲಾಯಿತು. ಪೂರ್ಣಿಮಾ ಭಟ್, ಸತೀಶ್ ಅಡಿಗ ಮತ್ತು ನಾಗರತ್ನ ಉಡುಪ ಕಾರ್ಯಕ್ರಮ ನಿರೂಪಿಸಿ, ಯುವ ವೇದಿಕೆ ಅಧ್ಯಕ್ಷ ಅವನೀಶ್ ಹೊಳ್ಳ ವಂದಿಸಿದರು. ಮಧ್ಯಾನ್ಹ ಪರಿಷತ್ ಅಧ್ಯಕ್ಷ ಎಚ್. ಶುಭಚಂದ್ರ ಹತ್ವಾರರ ಅಧ್ಯಕ್ಷತೆಯಲ್ಲಿ ಸಮಾರೋಪ ಕಾರ್ಯಕ್ರಮ ನೆರವೇರಿತು.

Related Articles

Back to top button
error: Content is protected !!