ಕುಂದಾಪುರ ಎಜುಕೇಶನ್ ಸೊಸೈಟಿ ಸುವರ್ಣ ಸಂಭ್ರಮ ಸಮಾರಂಭ:ಸಾಧಕರಿಗೆ ಸನ್ಮಾನ
Views: 225
ಕನ್ನಡ ಕರಾವಳಿ ಸುದ್ದಿ: ಶಿಕ್ಷಣ ಸಂಸ್ಥೆಯನ್ನು ನಡೆಸುವುದು ಒಂದು ಶಾಶ್ವತವಾದ ಮತ್ತು ಪವಿತ್ರವಾದ ಕೆಲಸ. ವಿದ್ಯೆ ನೀಡುವ ಮೂಲಕ ದೇಶ ಕಟ್ಟುವ ಹಾಗೂ ವಿದ್ಯಾರ್ಥಿಗಳನ್ನು ರೂಪಿಸುವ ಕೆಲಸ ಜಗತ್ತಿನ ಪರಿವರ್ತನೆಗೆ ನಾಂದಿಯಾಗುತ್ತದೆ ಎಂದು ವಿಶ್ವವಾಣಿ ದಿನ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅಭಿಪ್ರಾಯಪಟ್ಟರು.
ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ನಡೆದ ಕುಂದಾಪುರ ಎಜುಕೇಶನ್ ಸೊಸೈಟಿ ಸುವರ್ಣ ಸಂಭ್ರಮ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನದ ಶ್ರಮದ ಫಲ ಮುಂದಿನ ಐವತ್ತು ವರ್ಷಗಳ ಕಾಲ ದೊರೆಯುತ್ತದೆ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ, ಜೀವನದಲ್ಲಿ ನಾವು ಮಾಡುವ ಒಳ್ಳೆಯ ಕೆಲಸಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ. ಅಧಿಕಾರ ಮತ್ತು ಸಂಪತ್ತು ಎಂದಿಗೂ ಸ್ಥಿರವಲ್ಲ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಎಸ್. ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಹಾಗೂ ಸರಿಯಾದ ಗುರಿಯನ್ನು ಹೊಂದಿ ಅದನ್ನು ಸಾಧಿಸಿ ತೋರಿಸಬೇಕು ಎಂದು ಕರೆ ನೀಡಿದರು.
ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ, ಸಹ ಕಾರ್ಯದರ್ಶಿ ಸುಧಾಕರ ಶೆಟ್ಟಿ ಬಾಂಡ್ಯ, ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕೆ ಉಮೇಶ್ ಶೆಟ್ಟಿ, ಆರ್ ಎನ್ ಶೆಟ್ಟಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನವೀನ್ ಕುಮಾರ್ ಶೆಟ್ಟಿ, ಹೆಚ್ಎಂಎಂ ಮತ್ತು ವಿಕೆಆರ್ ಶಾಲೆಗಳ ಪ್ರಾಂಶುಪಾಲೆ ಡಾ. ಚಿಂತನಾ ರಾಜೇಶ್ ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ: ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಾಯಿ ಸ್ಪರ್ಶ ಕೆ., ಬಿ.ಪಿ. ಜಯಸೂರ್ಯ, ಭಕ್ತಿ ಶೆಟ್ಟಿ ಪ್ರಿಯಾ, ನಿರೀಕ್ಷಾ ಎನ್. ಶೆಟ್ಟಿಗಾರ್, ಸಮನ್ವಿ ಎಸ್. ಶೆಟ್ಟಿ, ಅನಿತಾ ಕೆ. ಅವರನ್ನು ಗೌರವಿಸಲಾಯಿತು. ಹಿರಿಯ ಶಿಕ್ಷಕಿ ವನಮಾಲಾ ಹಾಗೂ ಅಕ್ಷರ ದಾಸೋಹದ ಧ್ವನಿ ನೀಡಿದ ಚಿರತನ್ಮಯಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕ ಜಗದೀಶ್ ಆಚಾರ್ ಸ್ವಾಗತಿಸಿದರು.
ಶಿಕ್ಷಕಿ ಸ್ವಷ್ಟಾ ಕಾರ್ಯಕ್ರಮ ನಿರೂಪಿಸಿದರು. ಉಪ ಪ್ರಾಂಶುಪಾಲೆ ಶುಭಾ ವಂದಿಸಿದರು.






