ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹಳ್ಳಕ್ಕೆ ಬಿದ್ದು, ಸ್ನೇಹಿತನ ನಿಶ್ಚಿತಾರ್ಥಕ್ಕೆ ಹೋದ ಇಬ್ಬರ ಸಾವು
Views: 44
ಕನ್ನಡ ಕರಾವಳಿ ಸುದ್ದಿ: ವೇಗವಾಗಿ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಪಲ್ಟಿ ಹೊಡೆದು ಸ್ಥಳದಲ್ಲೇ ಇಬ್ಬರು ಯುವಕರು ಸಾವನ್ನಪ್ಪಿ ಮೂವರು ಗಾಯಗೊಂಡಿರುವ ದಾರುಣ ಘಟನೆ ಅರಸಿಕೆರೆ ತಾಲೂಕಿನ ಜಾವಗಲ್-ಹಳೇಬೀಡು ರಸ್ತೆಯಲ್ಲಿ ನಡೆದಿದೆ.
ಜಿಲಾನಿ (28) ಮತ್ತು ಮೊಸಿನ್ (25) ಮೃತಪಟ್ಟವರು, ಅಪಘಾತದಲ್ಲಿ ಕಾರಿನಲ್ಲಿದ್ದ ಇತರ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅರಸೀಕೆರೆ ಮತ್ತು ಸ್ಥಳೀಯರ ಸಹಾಯದಿಂದ ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಜಿಲಾನಿ ಆಟೋಮೊಬೈಲ್ ಉದ್ಯಮ ನಡೆಸುತ್ತಿದ್ದು, ಮೊಸಿನ್ ವೆಲ್ಡಿಂಗ್ ವೃತ್ತಿ ಮಾಡುತ್ತಿದ್ದರು.
ಸ್ನೇಹಿತನ ನಿಶ್ಚಿತಾರ್ಥಕ್ಕಾಗಿ ಐವರು ಯುವಕರು ಇನೋವಾ ಕಾರಿನಲ್ಲಿ ಅರಸೀಕೆರೆಯಿಂದ ಜಾವಗಲ್ ಮಾರ್ಗವಾಗಿ ಬೇಲೂರಿಗೆ ತೆರಳುತ್ತಿದ್ದಾಗ ಕೆ.ಬಿ.ಹಾಳ್ ಬಳಿ ತಲುಪುತ್ತಿದ್ದಂತೆ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಆಳವಾದ ಹಳ್ಳಕ್ಕೆ ಉರುಳಿ ಬಿದ್ದಿದೆ.
ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಜಿಲಾನಿ ಹಾಗೂ ಮೊಸಿನ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಜಾವಗಲ್ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ತನಿಖೆಯನ್ನು ಮುಂದುವರೆಸಿದ್ದಾರೆ.






