ಜನಮನ

ಕರಾವಳಿಯಲ್ಲಿ ಬಿಸಿಗಾಳಿ ಎಚ್ಚರಿಕೆ; ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ

Views: 45

ಕನ್ನಡ ಕರಾವಳಿ ಸುದ್ದಿ:ರಾಜ್ಯದಲ್ಲಿ ಬಿಸಿಲಿನ ಪ್ರತಾಪ ದಿನದಿಂದ ದಿನಕ್ಕೆ ಏರುತ್ತಿದ್ದು, ಹವಾಮಾನ ಇಲಾಖೆಯು ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದೆ.  ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸುಡುವ ಬಿಸಿಗಾಳಿ ಮುಂದುವರಿಯಲಿದ್ದರೆ, ಅತ್ತ ಮಲೆನಾಡು ಮತ್ತು ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ವರುಣ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಕಲಬುರ್ಗಿ ಹಾಗೂ ವಿಜಯಪುರದಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ನಿರೀಕ್ಷೆಯಿದೆ. ಜತೆಗೆ ದಕ್ಷಿಣ ಒಳನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಸಿಡಿಲು ಸಹಿತ ಮಳೆಯ ಮುನ್ಸೂಚನೆ ನೀಡಲಾಗಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಭಾಗಗಳಲ್ಲಿ ಮುಂದಿನ ಎರಡು ದಿನ ತಾಪಮಾನ ಮತ್ತಷ್ಟು ಏರಿಕೆಯಾಗಲಿದೆ. ಮುಂಬರುವ ದಿನಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ಗಡಿ ದಾಟುವ ಆತಂಕವಿದ್ದು, ಜನಜೀವನ ಅಸ್ತವ್ಯಸ್ತಗೊಳ್ಳುವ ಸಾಧ್ಯತೆಯಿದೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ, 2026ರ ಏಪ್ರಿಲ್‌ನಿಂದ ಜೂನ್‌ವರೆಗೆ ದೇಶಾದ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಲಿದೆ. ಒಡಿಶಾ, ಬಂಗಾಳ ಹಾಗೂ ಕರ್ನಾಟಕದ ಹಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಶಾಖದ ಅಲೆಗಳು ಕಂಡುಬರಲಿವೆ. ಇದು ಸಾರ್ವಜನಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ, ಜಲ ಸಂಪನ್ಮೂಲ ಮತ್ತು ವಿದ್ಯುತ್ ಬೇಡಿಕೆಯ ಮೇಲೆಯೂ ತೀವ್ರ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದೆ.

ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಅನಗತ್ಯವಾಗಿ ಬಿಸಿಲಿನಲ್ಲಿ ಓಡಾಡುವುದನ್ನು ತಪ್ಪಿಸಬೇಕು. ದೇಹವನ್ನು ಹೈಡ್ರೇಟೆಡ್ ಆಗಿಡಲು ನಿಯಮಿತವಾಗಿ ನೀರು, ಎಳನೀರು ಅಥವಾ ಮಜ್ಜಿಗೆ ಸೇವಿಸಬೇಕು. ಕಾಫಿ, ಟೀ ಮತ್ತು ಸಕ್ಕರೆಯುಕ್ತ ಪಾನೀಯಗಳಿಂದ ದೂರವಿರಬೇಕು. ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಿ, ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿಯನ್ನು ಮರೆಯದೆ ಬಳಸಿ ಎಂದು ಆರೋಗ್ಯ ಇಲಾಖೆ ಸೂಚಿಸಿದೆ.ವಿಶೇಷವಾಗಿ ವೃದ್ಧರು, ಮಕ್ಕಳು ಮತ್ತು ಗರ್ಭಿಣಿಯರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

Related Articles

Back to top button
error: Content is protected !!