ಶಿಕ್ಷಣ

ಎಸ್‌ಎಸ್ಎಲ್‌ಸಿ ಪ್ರಶ್ನೆಪತ್ರಿಕೆ ನೀಡುವುದಾಗಿ 80 ಗ್ರಾಮ್ ಚಿನ್ನ ಪಡೆದ ಶಿಕ್ಷಕ: ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ

Views: 34

ಕನ್ನಡ ಕರಾವಳಿ ಸುದ್ದಿ: ಎಸ್‌ಎಸ್ಎಲ್‌ಸಿ ಪ್ರಶ್ನೆಪತ್ರಿಕೆ ನೀಡುವುದಾಗಿ ವಿದ್ಯಾರ್ಥಿಯೊಬ್ಬನಿಂದ ಬರೋಬ್ಬರಿ 80 ಗ್ರಾಮ್ ಚಿನ್ನ ಪಡೆದು ವಂಚಿಸಿರುವ  ಘಟನೆ ಧಾರವಾಡದಲ್ಲಿ ನಡೆದಿದೆ.ಈ ವಂಚನೆಯಿಂದ ಮನನೊಂದ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ

ಧಾರವಾಡದ ಪ್ರತಿಷ್ಠಿತ ಕೆ.ಇ.ಬೋರ್ಡ್ (K.E.Board) ಆಡಳಿತ ಮಂಡಳಿಯ ಅಡಿಯಲ್ಲಿ ಬರುವ ವಿದ್ಯಾರಣ್ಯ ಪ್ರೌಢಶಾಲೆಯ ಶಿಕ್ಷಕ ರಾಜಶೇಖರ್ ವಡತೇರ ಈ ಕೃತ್ಯ ಎಸಗಿದ ಆರೋಪಿ.

10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಭಿಷೇಕ್ ಶಿವಾನಂದ ಕರಕಿ ಎಂಬ ವಿದ್ಯಾರ್ಥಿಗೆ ಈತ ಗಾಳ ಹಾಕಿದ್ದನು. ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಮುಂಚಿತವಾಗಿಯೇ ಪ್ರಶ್ನೆ ಪತ್ರಿಕೆ ನೀಡುವುದಾಗಿ ನಂಬಿಸಿದ ಶಿಕ್ಷಕ, ಇದಕ್ಕಾಗಿ ಭಾರಿ ಪ್ರಮಾಣದ ಹಣ ಮತ್ತು ಚಿನ್ನಕ್ಕೆ ಬೇಡಿಕೆ ಇಟ್ಟಿದ್ದನು ಎನ್ನಲಾಗಿದೆ.

ಶಿಕ್ಷಕನ ಮಾತನ್ನು ನಂಬಿದ ವಿದ್ಯಾರ್ಥಿ ಅಭಿಷೇಕ್, ತನ್ನ ಮನೆಯಲ್ಲಿದ್ದ ಸುಮಾರು 80 ಗ್ರಾಮ್ ತೂಕದ ಚಿನ್ನದ ಆಭರಣಗಳನ್ನು ಶಿಕ್ಷಕನಿಗೆ ನೀಡಿದ್ದನು. ಆದರೆ, ಪರೀಕ್ಷೆಯ ನಂತರ ವಿದ್ಯಾರ್ಥಿ ಮರಳಿ ತನ್ನ ಚಿನ್ನವನ್ನು ಕೇಳಿದಾಗ ಶಿಕ್ಷಕ ರಾಜಶೇಖರ್ ವಡತೇರ ಅಸಲಿ ಬಣ್ಣ ತೋರಿಸಿದ್ದಾನೆ. ಚಿನ್ನ ವಾಪಸ್ ಕೊಡಲು ನಿರಾಕರಿಸಿದ್ದಲ್ಲದೆ, ‘ಪೂರಕ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡುವುದಿಲ್ಲ’ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ. ತನ್ನಿಂದ ದೊಡ್ಡ ತಪ್ಪಾಗಿದೆ ಮತ್ತು ಮನೆಯವರ ಚಿನ್ನ ಕಳೆದುಹೋಯಿತು ಎಂಬ ನೋವಿನಿಂದ ವಿದ್ಯಾರ್ಥಿ ಅಭಿಷೇಕ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಈ ಗಂಭೀರ ಪ್ರಕರಣದ ಬಗ್ಗೆ ವಿದ್ಯಾರ್ಥಿಯ ತಾಯಿ ಸರೋಜಿನಿ ಶಿವಾನಂದ ಕರಕಿ ಅವರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು. ದೂರನ್ನು ಗಂಭೀರವಾಗಿ ಪರಿಗಣಿಸಿದ ಧಾರವಾಡದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಡಿಡಿಪಿಐ), ಕೆ.ಇ.ಬೋರ್ಡ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಅಧಿಕೃತ ನೋಟಿಸ್ ಜಾರಿ ಮಾಡಿದ್ದಾರೆ.

ನೋಟಿಸ್‌ನಲ್ಲಿ ‘ಶಿಕ್ಷಕ ರಾಜಶೇಖರ ವಡತೇರ ಅವರು ಹಣದ ಬೇಡಿಕೆ ಇಟ್ಟು, ಚಿನ್ನದ ಆಭರಣಗಳನ್ನು ಪಡೆದು ವಂಚಿಸಿರುವುದು ಮತ್ತು ವಿದ್ಯಾರ್ಥಿಯ ಭವಿಷ್ಯಕ್ಕೆ ತೊಂದರೆ ನೀಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದು ಕರ್ನಾಟಕ ಶಿಕ್ಷಣ ಕಾಯ್ದೆ 1983ರ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ಸದರಿ ಶಿಕ್ಷಕನ ಮೇಲೆ ತಕ್ಷಣವೇ ವಿಚಾರಣೆ ನಡೆಸಿ, ಶಿಸ್ತು ಕ್ರಮ ಕೈಗೊಂಡು ತುರ್ತಾಗಿ ವರದಿ ಸಲ್ಲಿಸಬೇಕು’ ಎಂದು ಆದೇಶಿಸಿದ್ದಾರೆ.

ಆರೋಪಿ ಶಿಕ್ಷಕನನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಮತ್ತು ಕಾನೂನು ರೀತಿಯಲ್ಲಿ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Related Articles

Back to top button
error: Content is protected !!