ಊಟದ ಬಳಿಕ ಮಾವಿನ ಹಣ್ಣು ತಿಂದು ಅಕ್ಕ-ತಂಗಿಯರು ಅನುಮಾನಾಸ್ಪದ ಸಾವು!
Views: 23
ಕನ್ನಡ ಕರಾವಳಿ ಸುದ್ದಿ: ಊಟದ ಬಳಿಕ ಮಾವಿನ ಹಣ್ಣು ಸೇವಿಸಿದ ಬೆನ್ನಲ್ಲೇ ಆರೋಗ್ಯದಲ್ಲಿ ಏರುಪೇರಾಗಿ ಬೀದರ್ ಮೂಲದ ಇಬ್ಬರು ಸಹೋದರಿಯರು ಹೈದರಾಬಾದ್‌ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಶೆಂಬೆಳ್ಳಿ ಗ್ರಾಮದ ವೈಜಿನಾಥ ಮೇತ್ರೆ ಎಂಬುವವರ ಕುಟುಂಬ ಕೆಲಸದ ನಿಮಿತ್ತ ಹೈದರಾಬಾದ್‌ನಲ್ಲಿ ನೆಲೆಸಿತ್ತು. ಮನೆಯಲ್ಲಿ ಊಟ ಮುಗಿಸಿದ ನಂತರ ತಾಯಿ ಇಂದುಮತಿ ಹಾಗೂ ಅವರ ಐವರು ಹೆಣ್ಣು ಮಕ್ಕಳು ಮಾವಿನ ಹಣ್ಣನ್ನು ಸೇವಿಸಿದ್ದಾರೆ. ಮಾವು ತಿಂದ ಕೆಲವೇ ಹೊತ್ತಿನಲ್ಲಿ ಎಲ್ಲರಿಗೂ ವಾಂತಿ ಹಾಗೂ ಭೇದಿ ಕಾಣಿಸಿಕೊಂಡು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.
ಅಸ್ವಸ್ಥಗೊಂಡ ಕುಟುಂಬದ ಸದಸ್ಯರನ್ನು ತಕ್ಷಣವೇ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಭವಾನಿ ವೈಜಿನಾಥ ಮೇತ್ರ (17) ಹಾಗೂ ಸಂಧ್ಯಾರಾಣಿ ಮೇತ್ರೆ (14) ಎಂಬ ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ.
ಮತ್ತೊಬ್ಬಳ ಸ್ಥಿತಿ ಗಂಭೀರ ಇದೇ ಘಟನೆಯಲ್ಲಿ ಮತ್ತೊಬ್ಬ ಸಹೋದರಿ ವಿಜಯಶ್ರೀ (19) ಅವರ ಸ್ಥಿತಿ ಗಂಭೀರವಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ತಾಯಿ ಇಂದುಮತಿ ಹಾಗೂ ಮತ್ತೊಬ್ಬ ಪುತ್ರಿ ಚಿಕಿತ್ಸೆಗೆ ಸ್ಪಂದಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮಾವಿನ ಹಣ್ಣು ಸೇವಿಸಿದ ನಂತರವೇ ಈ ದುರಂತ ಸಂಭವಿಸಿರುವುದರಿಂದ, ಹಣ್ಣಿನಲ್ಲಿ ವಿಷಕಾರಿ ಅಂಶವಿತ್ತೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೈದರಾಬಾದ್‌ನ ನಾರಾಯಣಗುಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಯರ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿಗೆ ನಿಖರ ಕಾರಣವೇನು ಎಂಬುದು ತಿಳಿದುಬರಬೇಕಿದೆ.






