ಉಪಮುಖ್ಯಮಂತ್ರಿ ಹುದ್ದೆ ಚರ್ಚೆ ಮತ್ತೆ ಮುನ್ನೆಲೆಗೆ; ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟವರು ಯಾರು?

Views: 78
ಬೆಂಗಳೂರು: ಕಾಂಗ್ರೆಸ್ ಪಾಳಯದಲ್ಲಿ ಡಿಸಿಎಂ ಹುದ್ದೆಯ ತಿಕ್ಕಾಟ ಮತ್ತೆ ಜೋರಾಗಿದೆ. ಸದ್ಯ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಸರ್ಕಾರದಲ್ಲಿ ಏಕ ಮಾತ್ರ ಡಿಸಿಎಂ ಎಂಬ ನಿಯಮವಿದೆ. ಆದರೆ ಕೆ.ಎನ್. ರಾಜಣ್ಣ ಅವರು ಡಿಸಿಎಂ ಹುದ್ದೆ ಸೃಷ್ಟಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಹಾಗೆಯೇ ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್ ಬಹಿರಂಗವಾಗಿ ಮತ್ತು ಪರೋಕ್ಷವಾಗಿ ಬ್ಯಾಟ್ ಬೀಸುತ್ತಿದ್ದಾರೆ.
ಕೆಲವರು ಮೂರು ಡಿಸಿಎಂ ಹುದ್ದೆ ಸೃಷ್ಟಿ ಬೇಡಿಕೆ ಇಡುತ್ತಿದ್ದರೆ, ಇನ್ನೂ ಕೆಲವರು ಐದು ಡಿಸಿಎಂ ಹುದ್ದೆ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಮೂಲಕ ಎಲ್ಲ ಸಮುದಾಯಗಳು ಕಾಂಗ್ರೆಸ್ ಪರ ವಾಲಲಿವೆ ಎಂಬುದು ಅವರ ಅಭಿಪ್ರಾಯವಾಗಿದೆ. ಮುಂದಿನ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲೂ ಇದು ಪಕ್ಷಕ್ಕೆ ಅನುಕೂಲವಾಗಲಿದೆ. ಜೊತೆಗೆ ಪ್ರಾದೇಶಿಕವಾರು ಡಿಸಿಎಂ ಹುದ್ದೆ ಸೃಷ್ಟಿಸಿದರೆ ಪಕ್ಷ ಸಂಘಟನೆಗೆ ಶಕ್ತಿ ಬರಲಿದೆ ಎಂಬುದು ಕೆಲವರ ವಾದವಾಗಿದೆ.
ಡಿಸಿಎಂ ಹುದ್ದೆ ಆಕಾಂಕ್ಷಿಗಳು ಯಾರು?
ಕೆಲ ಹಿರಿಯ ಸಚಿವರು ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಆಕಾಂಕ್ಷಿಗಳ ಪೈಕಿ ದಲಿತ ಸಮುದಾಯದ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಮುಂಚೂಣಿಯಲ್ಲಿದ್ದಾರೆ. ಇವರು ಪರೋಕ್ಷವಾಗಿ ಆಗಾಗ ತಮ್ಮ ಡಿಸಿಎಂ ಕನಸನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ಸಚಿವ ಕೆ.ಎನ್. ರಾಜಣ್ಣ ಬಹಿರಂಗವಾಗಿ ತಮ್ಮ ಡಿಸಿಎಂ ಹುದ್ದೆಯ ಆಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು, ಹಿಂದುಳಿದ ವರ್ಗದ ನಾಯಕರಾದ ಸಚಿವ ಸತೀಶ್ ಜಾರಕಿಹೊಳಿ ಡಿಸಿಎಂ ಹುದ್ದೆ ಮೇಲೆ ಬಹು ದಿನಗಳಿಂದ ಕಣ್ಣಿಟ್ಟಿದ್ದಾರೆ. ಈ ಸಂಬಂಧ ಬಹಿರಂಗವಾಗಿ ಈ ಮುಂಚೆ ತಮ್ಮ ಆಸೆಯನ್ನು ಹೊರಗೆಡವಿದ್ದಾರೆ. ಇವರ ಜೊತೆಗೆ ಲಿಂಗಾಯತ ಸಮುದಾಯದ ಸಚಿವ ಎಂ.ಬಿ. ಪಾಟೀಲ್ ಕೂಡ ಡಿಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿರುವುದು ಗೌಪ್ಯವಾಗಿ ಉಳಿದಿಲ್ಲ. ಇತ್ತ ಅಲ್ಪಸಂಖ್ಯಾತ ಸಚಿವ ಜಮೀರ್ ಅಹಮದ್ ಖಾನ್ ಕೂಡ ಆಕಾಂಕ್ಷಿಯಾಗಿದ್ದಾರೆ.






