ಈ ಭಾರಿ ಪಿಯುಸಿ ಫಲಿತಾಂಶ ಕುಸಿಯಲು ಗೊಂದಲವೇ ಕಾರಣ!

Views: 61
ಕನ್ನಡ ಕರಾವಳಿ ಸುದ್ದಿ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಭಾರಿ ಪ್ರಮಾಣದಲ್ಲಿ ಕುಸಿತವಾಗಿರುವ ಬೆನ್ನಲ್ಲೇ, ಕುಸಿತಕ್ಕೆ ‘ಪಾರದರ್ಶಕ’ ಪರೀಕ್ಷೆ ಕಾರಣವೆಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸಮರ್ಥಿಸಿಕೊಂಡಿದೆ. ಆದರೆ ಈ ಪ್ರಮಾಣದ ಕುಸಿತಕ್ಕೆ ಕಾರಣ ಕೊನೆ ಕ್ಷಣದ ಬದಲಾವಣೆಗಳೇ ಕಾರಣ ಎನ್ನುವುದು ಹಲವು ಉಪನ್ಯಾಸಕರ ಆರೋಪವಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇಕಡ 12ರಷ್ಟು ಫಲಿತಾಂಶದಲ್ಲಿ ಕುಸಿತ ಕಂಡಿತ್ತು. ರಾಜ್ಯಾದ್ಯಂತ ವೆಬ್ ಕಾಸ್ಟಿಂಗ್ ಸೇರಿದಂತೆ ಪರೀಕ್ಷಾ ಅಕ್ರಮ ತಡೆಯಲು ತೆಗೆದುಕೊಂಡ ಕ್ರಮವೇ ಫಲಿತಾಂಶ ಕುಸಿಯಲು ಕಾರಣ. ಕಠಿಣ ಕ್ರಮದಿಂದ ಕಷ್ಟಪಟ್ಟು ಓದಿರುವ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಲು ಸಾಧ್ಯವಾಗಿದೆ ಎನ್ನುವ ಮಾತುಗಳನ್ನು ಪರೀಕ್ಷಾ ಮಂಡಳಿ ಹಾಗೂ ಶಿಕ್ಷಣ ಸಚಿವರು ಹೇಳಿದ್ದರು.
ಆದರೆ ಈ ಪ್ರಮಾಣದಲ್ಲಿ ಫಲಿತಾಂಶ ಕುಸಿಯಲು ಮಾದರಿ ಪ್ರಶ್ನೆಯ ಬದಲಾವಣೆಯೇ ಪ್ರಮುಖ ಕಾರಣ ಎನ್ನುವುದು ಉಪನ್ಯಾಸಕರ ವಾದವಾಗಿದೆ.
ಕೇಂದ್ರ ಸರಕಾರದ ಪರಾಬ್ ಯೋಜನೆ ಹಾಗೂ ಅಜೀಂ ಪ್ರೇಮ್ ಜಿ ಫೌಂಡೇಷನ್ ನ ಕೆಲವು ತೀರ್ಮಾನಗಳಿಗೆ ಅನುಸಾರವಾಗಿ ಮಾದರಿ ಪ್ರಶ್ನೆ ಪತ್ರಿಕೆಯ ಸ್ವರೂಪವನ್ನು ಬದಲಿಸಲಾಗಿದೆ. ಈ ಬದಲಾವಣೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡದೇ ಹಾಗೂ ಜನವರಿ-ಫಬ್ರವರಿ ತಿಂಗಳಲ್ಲಿ ಮಾಡಿದ್ದೇ ಈ ಎಲ್ಲ ಸಮಸ್ಯೆಗೆ ಕಾರಣ. ಬದಲಾವಣೆ ಮಾಡುವುದಷ್ಟೇ ಅಲ್ಲದೇ, ಬದಲಾವಣೆಯಾಗಿರುವ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡದಿರುವುದು ಇಂದಿನ ಈ ಫಲಿತಾಂಶಕ್ಕೆ ಕಾರಣ ಎನ್ನುವುದು ಹಲವರ ಆರೋಪವಾಗಿದೆ.
ನೂತನ ಮಾದರಿ ಪ್ರಶ್ನೆಪತ್ರಿಕೆಯನ್ನು ಬಿಡುಗಡೆಗೊಳಿಸಿದ ‘ಈ ಮಾದರಿಯ ಪ್ರಶ್ನೆಗಳು ಮುಖ್ಯಪರೀಕ್ಷೆಯಲ್ಲಿ ಬಾರದಿರಬಹುದು’ ಎನ್ನುವ ಸಂದೇಶವನ್ನು ನೀಡಲಾಗಿತ್ತು. ಇದರೊಂದಿಗೆ ಮಾದರಿ ಪ್ರಶ್ನೆಪತ್ರಿಕೆಯಲ್ಲಿ ಕಠಿಣ ಮಾದರಿಯ ಪ್ರಶ್ನೆಗಳನ್ನು ಶೇ.30ಕ್ಕೆ ಏರಿಸಲಾಗಿತ್ತು. ಆದರೆ ಮುಖ್ಯ ಪರೀಕ್ಷೆಯಲ್ಲಿ ಬಂದ ಪ್ರಶ್ನೆ ಪತ್ರಿಕೆಯಲ್ಲಿ ಈ ಬದಲಾವಣೆಗಳು ಬಂದಿಲ್ಲ ಆದ್ದರಿಂದ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.
ಈ ಎಲ್ಲಕ್ಕಿಂತ ಮುಖ್ಯವಾಗಿ ಬದಲಾಗಿರುವ ಮಾದರಿಯ ಬಗ್ಗೆ ಸ್ವತಃ ಮಂಡಳಿಗೆ ಸ್ಪಷ್ಟನೆ ಇರಲಿಲ್ಲ ಸರ್ಕಾರಿ ಕಾಲೇಜು ಉಪನ್ಯಾಸಕರಿಗೆ ನೀಡಿದ ತರಬೇತಿ ವೇಳೆ ಮೌಖಿಕವಾಗಿ ಮಾಹಿತಿ ನೀಡಲಾಗಿದೆ ಹೊರತು ಅಧಿಕೃತ ಆದೇಶವನ್ನು ಮಾಡಿಲ್ಲ ಇದರಿಂದ ಅನೇಕ ಉಪನ್ಯಾಸಕರು, ಪೋಷಕರು ಬದಲಾಗಿರುವ ಅಥವಾ ಅಭ್ಯಾಸಕ್ಕೆ ನೀಡಿರುವ ಮಾದರಿ ಪ್ರಶ್ನೆ ಪತ್ರಿಕೆ ಹಾಗೂ ಮುಖ್ಯ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ವ್ಯತ್ಯಾಸ ಅರಿತಿಲ್ಲ ಇದು ವಿದ್ಯಾರ್ಥಿಗಳ ಅಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ.
ಮೌಖಿಕ ಸೂಚನೆಯೇ ಗೊಂದಲಕ್ಕೆ ಕಾರಣ
ಮಾದರಿ ಪ್ರಶ್ನೆ ಪತ್ರಿಕೆಯಲ್ಲಿನ ಬದಲಾವಣೆ ಬಗ್ಗೆ ಮೌಲ್ಯಮಾಪನ ಮಂಡಳಿಯಿಂದ ಅಧಿಕೃತ ಆದೇಶ ಬಂದಿರಲಿಲ್ಲ ಬದಲಿಗೆ ನಿರ್ದೇಶಕರು ಸಂಪನ್ಮೂಲ ವ್ಯಕ್ತಿಗಳಿಗೆ ಮಾಹಿತಿ ನೀಡಿದರು ತರಬೇತಿಯ ಸಮಯದಲ್ಲಿ ಸರಕಾರಿ ಉಪನ್ಯಾಸಕರಿಗೆ ಮಾತ್ರ ಈ ಸಂಪನ್ಮೂಲ ವ್ಯಕ್ತಿಗಳು ಸೂಚನೆ ನೀಡಿದ್ದರು. ಆದರೆ ಬದಲಾಗಿರುವ ಪದ್ಧತಿಯನ್ನು ಅನುದಾನಿತ ಹಾಗೂ ಖಾಸಗಿ ಕಾಲೇಜುಗಳ ಉಪನ್ಯಾಸಕರ ಗಮನಕ್ಕೆ ಬಂದಿರಲಿಲ್ಲ ಆದ್ದರಿಂದ ಗೊಂದಲ ಸೃಷ್ಟಿಯಾಗಿದೆ.
ಹೆಚ್ಚಿದ ಸಿಇಟಿ ಒತ್ತಡ
ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಅನೇಕ ವಿದ್ಯಾರ್ಥಿಗಳಿಗೆ ಸಿಇಟಿ ಬರೆದು ಇಂಜಿನಿಯರಿಂಗ್ ಸೀಟು ಪಡೆಯಬೇಕು ಎನ್ನುವ ಇಚ್ಛೆ ಇರುವುದಿಲ್ಲ ಆದರೆ ರಾಜ್ಯ ಸರಕಾರ ಈ ಬಾರಿ ಉಚಿತ ಸಿಇಟಿ ತರಬೇತಿ ನೀಡಲು ಮುಂದಾಗಿತ್ತು ಹಲವು ವಿದ್ಯಾರ್ಥಿಗಳಿಗೆ ಕಿರಿಕಿರಿಯಾಗಿದೆ ಎನ್ನಲಾಗುತ್ತಿದೆ. ಪ್ರಮುಖವಾಗಿ ಸಿಇಟಿ ತರಬೇತಿಗಳು ಬೆಳಿಗ್ಗೆ 9 ರಿಂದ ಇರುತ್ತಿದ್ದವು. ಇದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ತಯಾರಿ ನಡೆಸುವುದಕ್ಕೆ ಸಮಸ್ಯೆ ಆಗಿದೆ ಎನ್ನುವ ಮಾತುಗಳನ್ನು ಹಲವು ಉಪನ್ಯಾಸಕರು ಹೇಳಿದ್ದಾರೆ.