ಯುವಜನ

ಅಲ್ಪಾಯುಷಿ ಎಂದು ಜ್ಯೋತಿಷಿ ಮಾತು ನಂಬಿ, ಪ್ರೀತಿಸಿದವನ ಜತೆ ಮದುವೆಯಾಗಲು ಮುಂದಾಗಿದ್ದ ಯುವತಿ ಆತ್ಮಹತ್ಯೆ 

Views: 48

ಕನ್ನಡ ಕರಾವಳಿ ಸುದ್ದಿ: ನೀನು ಅಲ್ಪಾಯುಷಿ ಎಂದು ಹೇಳಿದ್ದ ಜ್ಯೋತಿಷಿಯೊಬ್ಬರ ಭವಿಷ್ಯವಾಣಿ ನಂಬಿ ಪ್ರೀತಿಸಿ ಮದುವೆಯಾಗಲು ಮುಂದಾಗಿದ್ದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿ ಎಂಇಐ ಲೇಔಟ್‌ನಲ್ಲಿ ನಡೆದಿದೆ. ವಿದ್ಯಾಜ್ಯೋತಿ (29) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ.

ವಿದ್ಯಾಜ್ಯೋತಿ ತಾನು ಇಷ್ಟಪಟ್ಟಿದ್ದ ಯುವಕನನ್ನು ಕೆಲವೇ ದಿನಗಳಲ್ಲಿ ಮದುವೆಯಾಗಬೇಕಿತ್ತು. ಆದರೆ ಮದುವೆಗೂ ಮುನ್ನ ಆಕೆಗೆ ಜ್ಯೋತಿಷಿಯೊಬ್ಬರು, ನೀನು ಅಲ್ಪಾಯುಷಿ ಎಂದು ಹೇಳಿದ್ದರು. ಇದರ ಪರಿಹಾರಕ್ಕಾಗಿ 9 ದಿನ ಪೂಜೆ ಮಾಡಬೇಕೆಂದು ಕೂಡಾ ಹೇಳಿದ್ದರು ಎನ್ನಲಾಗಿದೆ.

ಈ ಹಿನ್ನೆಲೆ ವಿದ್ಯಾಜ್ಯೋತಿ ಹಾಗೂ ಆಕೆಯ ಕುಟುಂಬಸ್ಥರು 9 ದಿನಗಳ ಕಾಲ ಪೂಜೆ ನೆರವೇರಿಸಿ, ಕೊನೆಯ ದಿನ ಮಾರಮ್ಮ ದೇವರಿಗೆ ತಾಳಿ ಕೊಡಲು ಮುಂದಾಗಿದ್ದರು.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆಕೆ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದುದರಿಂದ ಮನೆಯವರು ಕೆಲಸದಲ್ಲಿರಬಹುದೆಂದು ಭಾವಿಸಿದ್ದರು.

ಸಂಜೆ ವೇಳೆಗೆ ತಾಯಿ ಹಲವು ಬಾರಿ ಕರೆದರೂ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅನುಮಾನಗೊಂಡು ಕಿಟಕಿಯಿಂದ ನೋಡಿದಾಗ ಯುವತಿ ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ.

ಕೊಡಗು ಮೂಲದ ಯುವಕನನ್ನು ಆಕೆ ಪ್ರೀತಿಸುತ್ತಿದ್ದು ಆಕೆಯ ಇಷ್ಟದಂತೆ ಎರಡೂ ಮನೆಯವರು ಮದುವೆಗೆ ಒಪ್ಪಿಕೊಂಡಿದ್ದರು. ಆದರೆ ಮದುವೆಗೂ ಮುನ್ನವೇ ಯುವತಿ ದುಡುಕಿನ ನಿರ್ಧಾರ ತೆಗೆದುಕೊಂಡಿರುವುದು ಆಘಾತಕ್ಕೆ ಕಾರಣವಾಗಿದೆ.

ಘಟನೆ ಸಂಬಂಧ ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ.

Related Articles

Back to top button
error: Content is protected !!