ಹನಿಮೂನ್‌ಗಾಗಿ ತೆರಳಿದ್ದ ವೇಳೆ ಪತ್ನಿಯೇ ಬಾಡಿಗೆ ಕೊಲೆಗಾರರನ್ನು ಕರೆಸಿ ಗಂಡನನ್ನೇ ಹತ್ಯೆ ಮಾಡಿದ ಪತ್ನಿ

Views: 196
ಕನ್ನಡ ಕರಾವಳಿ ಸುದ್ದಿ :ಹನಿಮೂನ್‌ಗಾಗಿ ಮೇಘಾಲಯಕ್ಕೆ ತೆರಳಿದ್ದ ಮಧ್ಯಪ್ರದೇಶದ ಇಂಧೋರ್ ಮೂಲದ ನವ ವಿವಾಹಿತ ರಾಜಾ ರಘುವಂಶಿ ಕೊಲೆ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದ್ದು ಪತ್ನಿಯೇ ಬಾಡಿಗೆ ಕೊಲೆಗಾರರನ್ನು ಕರೆಸಿ ಹತ್ಯೆ ಮಾಡಿದ ಸಂಗತಿ ಬೆಳಕಿಗೆ ಬಂದಿದೆ.
ಈ ಸಂಬಂಧ ಪತ್ನಿ ಸೋನಮ್ ಸೂರ್ಯವಂಶಿ ಸೇರಿದಂತೆ ನಾಲ್ಕು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದ್ದು, ತನಿಖೆಯ ವೇಳೆ ಬಾಡಿಗೆ ಕೊಲೆಗಾರರನ್ನು ಕರೆಸಿ ಹತ್ಯೆ ಮಾಡಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ, ಹನಿಮೂನ್‌ಗೆ ತೆರೆಳಿದ್ದ ವೇಳೆ ನವ ವಿವಾಹಿತ ಪತಿಯನ್ನು ಹತ್ಯೆ ಮಾಡಿದ ಕಾರಣ ಪತ್ತೆ ಮಾಡುವ ಕೆಲಸದಲ್ಲಿ ಪೊಲೀಸರು ನಿರತರಾಗಿದ್ದಾರೆ.
ಮೇಘಾಲಯದ ಪೂರ್ವ ಖಾಸಿ ಬೆಟ್ಟಗಳ ಲ್ಲಿರುವ ವೈಸಾವ್ಡಾಂಗ್ ಜಲಪಾತದ ಪಾರ್ಕಿಂಗ್ ಸ್ಥಳದ ಕೆಳಗಿನ ಕಮರಿಯಲ್ಲಿ ಪತಿಯ ಶವ ಪತ್ತೆಯಾದ ನಂತರ ಪತ್ನಿ ಸೋನಮ್ ರಘುವಂಶಿ ನಾಪತ್ತೆಯಾಗಿದ್ದರು. ಆಕೆಯ ಪತ್ತೆಗೆ ಮೇಘಾಲಯ ಪೊಲೀಸರು ಬೆನ್ನು ಹತ್ತಿದ್ದರು. ಅವರಿಗೆ ಸಿಕ್ಕ ಮಾಹಿತಿ ಆಧರಿಸಿ ತಲೆ ಮರೆಸಿಕೊಂಡಿದ್ದ ಸೋನಮ್ ಸೂರ್ಯವಂಶಿಯನ್ನು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರು ಪಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಜೂನ್ 2 ರಂದು ಪೂರ್ವ ಖಾಸಿ ಬೆಟ್ಟಗಳಲ್ಲಿರುವ ವೈಸಾವ್ಡಾಂಗ್ ಜಲಪಾತದ ಪಾರ್ಕಿಂಗ್ ಸ್ಥಳದ ಕೆಳಗಿನ ಕಮರಿಯಲ್ಲಿ ಪತಿಯ ಶವ ಪತ್ತೆಯಾದ ನಂತರ ಸೋನಮ್ ನಾಪತ್ತೆಯಾಗಿದ್ದರು. ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯಿಂದ ಸೋನಮ್ ನನ್ನು ಪತ್ತೆ ಮಾಡಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಡಾಲ್ಟನ್ ಪಿ ಮರಕ್ ಮಾತನಾಡಿ “ಸೋನಮ್ ಒತ್ತಡದಲ್ಲಿ ಶರಣಾಗಿದ್ದಾರೆ, ಇದರಿಂದಾಗಿ ಪ್ರಕರಣದಲ್ಲಿ ಒಟ್ಟು ಬಂಧನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ, ಒಬ್ಬ ಆರೋಪಿ ಇನ್ನೂ ನಾಪತ್ತೆಯಾಗಿದ್ದಾನೆ. ಸೋನಮ್‌ರನ್ನು ನ್ಯಾಯಾಲಯದ ವಿಚಾರಣೆಗಾಗಿ ಮೇಘಾಲಯಕ್ಕೆ ಕರೆತರಲಾಗುವುದು” ಎಂದು ಹೇಳಿದ್ದಾರೆ.
ಪೊಲೀಸರು ಇಲ್ಲಿಯವರೆಗೆ ಸೋನಮ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಇತರ ಮೂವರನ್ನು ವಿವಿಧ ರಾಜ್ಯಗಳಿಂದ ಬಂಧಿಸಲಾಗಿದೆ ಒಬ್ಬರು ಉತ್ತರ ಪ್ರದೇಶದಲ್ಲಿ ಮತ್ತು ಇಬ್ಬರು ಮಧ್ಯಪ್ರದೇಶದ ಇಂದೋರ್‌ನಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಪತ್ನಿ ಸೋನಮ್ ಬಾಡಿಗೆ ಕೊಲೆಗಾರರನ್ನು ನೇಮಿಸಿಕೊಳ್ಳುವ ಮೂಲಕ ಪತಿಯ ಹತ್ಯೆ ಮಾಡಿದ ಆರೋಪ ಹೊತ್ತಿದ್ದಾರೆ. ಈ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಲಾಗಿದ್ದು ಶಂಕಿತರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಬಹು ರಾಜ್ಯಗಳಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋನಮ್ ಫೋನ್ ಟ್ರ್ಯಾಕ್ ಮಾಡಿದಾಗ ಪೊಲೀಸರಿಗೆ ಸೋನಮ್ ಗಂಟೆಗಟ್ಟಲೆ ರಾಜು ಕುಶ್ವಾಹಾ ಜೊತೆ ಮಾತನಾಡಿರೋದು ಬೆಳಕಿಗೆ ಬಂದಿದೆ. ಮಧ್ಯಪ್ರದೇಶದಿಂದ ನಾಲ್ಕು ಮಂದಿ ಹಂತಕರನ್ನ ಮೇಘಾಲಯಕ್ಕೆ ಕರೆಸಿ ನಂತರ ಎಸ್ಕೇಪ್ ಆಗಿದ್ದಾರೆ. ನಾಪತ್ತೆಯಾಗಿದ್ದ ಪತ್ನಿಯೇ ಈ ಘಟನೆಯ ಮಾಸ್ಟರ್ ಮೈಂಡ್ ಆಗಿದ್ದು ಕೊನೆಗೆ ಪ್ಲಾನ್ ಎಲ್ಲಾ ಫೇಲ್ ಆದ ಮೇಲೆ ಪೊಲೀಸರಿಗೆ ಶರಣಾಗಿದ್ದಾರೆ.
ಸೋನಮ್ ಅವರ ಕುಟುಂಬ ಕೊಲೆ ಆರೋಪಗಳನ್ನು ಬಲವಾಗಿ ನಿರಾಕರಿಸಿದೆ. ಅವರ ತಂದೆ ದೇವಿ ಸಿಂಗ್, ತಮ್ಮ ಮಗಳು ನಿರಪರಾಧಿ ಎಂದು ಸಮರ್ಥಿಸಿಕೊಂಡಿದ್ದಾರೆ ಮತ್ತು ಕೇಂದ್ರ ತನಿಖಾ ದಳದಿಂದ ಸ್ವತಂತ್ರ ತನಿಖೆಗೆ ಒತ್ತಾಯಿಸಿದ್ದಾರೆ.