ಸುಳ್ಯ: ಮದುವೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ತಂದೆ-ಮಗ ದಾರುಣ ದುರಂತ ಅಂತ್ಯ

Views: 113
ಕನ್ನಡ ಕರಾವಳಿ ಸುದ್ದಿ: ಬೈಕ್‌ನಲ್ಲಿ ಸಂಚರಿಸುತ್ತಿದ್ದ ತಂದೆ ಮಗ ಕೆಎಸ್ಸಾರ್ಟಿಸಿ ಬಸ್ಸಿನ ಚಾಲಕನೋರ್ವನ ನಿರ್ಲಕ್ಷ್ಯಕ್ಕೆ ಬಲಿಯಾದ ಘಟನೆ ಭಾನುವಾರ ಪುತ್ತೂರು ಸಮೀಪದ ಕಬಕದಲ್ಲಿ ಸಂಭವಿಸಿದೆ.
ಮೃತರು ಬಂಟ್ವಾಳ ತಾಲೂಕಿನ ನರಿಕೊಂಬು ಬಳಿಯ ಬೋರುಗುಡ್ಡೆ ನಿವಾಸಿ ನರಿಕೊಂಬು ಗ್ರಾಪಂ ಸದಸ್ಯ ಹಾಗೂ ಸಮಾಜಸೇವಾ ಬ್ಯಾಂಕ್ ನಿರ್ದೇಶಕರಾದ ಅರುಣ್ ಕುಲಾಲ್ (45) ಹಾಗೂ ಅವರ ಪುತ್ರ ಧ್ಯಾನ್ (15)
ಮಾಣಿ- ಮೈಸೂರು ರಾ.ಹೆದ್ದಾರಿಯ ಕಬಕ ಸಮೀಪದ ಕುವೆತ್ತಿಲ ಎಂಬಲ್ಲಿನ ತಿರುವಿನಲ್ಲಿ ಕೆಎಸ್ಸಾರ್ಟಿಸಿ ಬಸ್ಸು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿತ್ತು. ಈ ಘಟನೆಯಲ್ಲಿ ಅರುಣ್ ಕುಲಾಲ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅವರ ಪುತ್ರ ಧ್ಯಾನ್ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ.
ಸುಳ್ಯದಲ್ಲಿ ನಡೆಯುತ್ತಿದ್ದ ತನ್ನ ಸಂಬoಧಿಕರೊಬ್ಬರ ಮಗಳ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತಂದೆ ಮತ್ತು ಮಗ ಇಬ್ಬರೂ ಬೈಕ್ ನಲ್ಲಿ ಹೊರಟಿದ್ದರು. ಆದರೆ ಕುವೆತ್ತಿಲ ತಿರುವಿನಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದ ಸರ್ಕಾರಿ ಬಸ್ಸಿನ ಚಾಲಕನ ನಿರ್ಲಕ್ಷತೆ ಹಾಗೂ ಬೇಜವಾಬ್ದಾರಿಯ ವಾಹನ ಚಾಲನೆಗೆ ಇವರಿಬ್ಬರೂ ಬಲಿಯಾಗಿದ್ದಾರೆ.
10ನೇ ತರಗತಿಯಲ್ಲಿ ಓದುತ್ತಿದ್ದ ಧ್ಯಾನ್ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕೆಲ ದಿನಗಳ ಹಿಂದೆಯಷ್ಟೇ ಪ್ರಥಮ ಪಿಯುಸಿಗೆ ದಾಖಲಾಗಿದ್ದ. ಅಲ್ಲದೇ ಅರುಣ್ ಕುಲಾಲ್ ಅವರು ತಮ್ಮ ಕುಟುಂಬದ ಪೋಷಣೆಗಾಗಿ ತನ್ನ ಮನೆಯಲ್ಲಿಯೇ ಮರದ ಸಾಮಾಗ್ರಿಗಳ ರಚನಾ ಕೆಲಸ ನಿರ್ವಹಿಸುತ್ತಿದ್ದರು. ಅವರ ಪತ್ನಿ ಜಯಮಾಲಿನಿ ಬೀಡಿ ಕಟ್ಟುತ್ತಿದ್ದರು. ತಂದೆ ಮತ್ತು ಮಗ ಸುಳ್ಯದ ಮದುವೆಗಾಗಿ ಬೈಕ್‌ನಲ್ಲಿ ಹೊರಟಿದ್ದರೇ ತಾಯಿ ಜಯಮಾಲಿನಿ ಬಸ್ಸಿನಲ್ಲಿ ಅದೇ ಮದುವೆಗೆ ತೆರಳುತ್ತಿದ್ದರು.
ಈ ಬಗ್ಗೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೆಎಸ್ಸಾರ್ಟಿಸಿ ಚಾಲಕನ ಮೇಲೆ ಪ್ರಕರಣ ದಾಖಲಾಗಿದೆ.