ಶಿಕ್ಷಣ

ಸುಪ್ರೀಂ ಕೋರ್ಟ್ ಆದೇಶದಂತೆ 5, 8, 9ನೇ ತರಗತಿ ಪರೀಕ್ಷೆ ಮತ್ತೆ ಮುಂದೂಡಿಕೆ

Views: 105

ಬೆಂಗಳೂರು, ಕರ್ನಾಟಕದಲ್ಲಿ 5, 8, 9ನೇ ತರಗತಿಯ ರಾಜ್ಯಮಟ್ಟದ ಬೋರ್ಡ್ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ. ಮಾರ್ಚ್‌ 11ರಂದು ಪರೀಕ್ಷೆ ಆರಂಭವಾಗಿದ್ದು, ಮಾರ್ಚ್ 13ರಿಂದ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಶಾಲಾ ಶಿಕ್ಷಣ ಇಲಾಖೆ, ಆಯುಕ್ತರ   ಮಂಗಳವಾರ ಆದೇಶ ಹೊರಡಿಸಿದ್ದಾರೆ. 5, 8 ಮತ್ತು 9ನೇ ತರಗತಿಗಳ SA-2 ಮೌಲ್ಯಾಂಕನವನ್ನು ಮುಂದಿನ ಆದೇಶದ ತನಕ ಮುಂದೂಡುವಂತೆ ಶಾಲೆಗಳಿಗೆ ಸೂಚಿಸಲಾಗಿದೆ ಎಂದು ಆದೇಶ ಹೇಳಿದೆ.

ಮಾರ್ಚ್.13 ಬುಧವಾರದಿಂದ ನಡೆಯಬೇಕಿದ್ದ 5, 8 ಮತ್ತು 9ನೇ ತರಗತಿಗಳ SA-2 ಮೌಲ್ಯಾಂಕನವನ್ನು ಮುಂದಿನ ಆದೇಶದ ತನಕ ಮುಂದೂಡಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಆದ್ದರಿಂದ ಇಂದು ಪರೀಕ್ಷೆಗಳು ಇರುವುದಿಲ್ಲ.

ಆದೇಶದಲ್ಲಿ ಏನಿದೆ: ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5, 8 ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳಿಗೆ 2023-24ನೇ ಸಾಲಿನ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಮೌಲ್ಯಾಂಕನ ನಡೆಸುವ ಸಂಬಂಧ ಹೈಕೋರ್ಟ್‌ನಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ 6/10/2023 ಮತ್ತು 9/10/2023ರ ಅಧಿಸೂಚನೆಗಳನ್ನು ಏಕ ಸದಸ್ಯ ಪೀಠದಲ್ಲಿ ರದ್ದು ಮಾಡಲಾಗಿರುತ್ತದೆ.

ಶಿಕ್ಷಣ ಇಲಾಖೆ ಸ್ಪಷ್ಟನೆ:ಈ ತೀರ್ಪಿನ ವಿರುದ್ಧ ಸರ್ಕಾರವು ದಿನಾಂಕ 7/3/2024 ರಂದು ಹೈಕೋರ್ಟ್‌ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಾಲಯದ ದ್ವಿಸದಸ್ಯ ಪೀಠವು ಪ್ರಕರಣವನ್ನು ಆಲಿಸಿ ಸದರಿ 5, 8 ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಮೌಲ್ಯಂಕನ ಮುಂದುವರೆಸಲು ತೀರ್ಪ ನೀಡಲಾಗಿರುತ್ತದೆ.

11/03/2024ರಿಂದ 5, 8 ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಮೌಲ್ಯಂಕನ ಕಾರ್ಯವನ್ನು ಪ್ರಾರಂಭಿಸಲಾಗಿರುತ್ತದೆ. ತದನಂತರ ಹೈಕೋರ್ಟ್ ದ್ವಿಸದಸ್ಯ ಪೀಠದ ಮಧ್ಯಂತರ ತೀರ್ಪನ್ನು ಪ್ರಶ್ನಿಸಿ, ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದ್ದು, ಕೋರ್ಟ್‌ ವಿಚಾರಣೆ ನಡೆಸಿದ್ದು, ಮಂಗಳವಾರದ ಆದೇಶದಲ್ಲಿ ಸದರಿ ಮಧ್ಯಂತರ ತೀರ್ಪನ್ನು ರದ್ದುಪಡಿಸಿರುತ್ತದೆ.

ಕೋರ್ಟ್ ಈ ಪ್ರಕರಣವನ್ನು ವಿಭಾಗೀಯ ಪೀಠಕ್ಕೆ ರವಾನಿಸಿರುತ್ತದೆ. ಈ ಹಿನ್ನೆಲೆಯಲ್ಲಿ ದಿನಾಂಕ 13/3/2024ರಿಂದ ನಡೆಯಬೇಕಾಗಿದ್ದ 5, 8 ಮತ್ತು 9ನೇ ತರಗತಿಗಳ SA-2 ಮೌಲ್ಯಾಂಕನವನ್ನು ಮುಂದಿನ ಆದೇಶದವರೆಗೆ ಮುಂದೂಡುವಂತೆ ಶಾಲೆಗಳಿಗೆ ಸೂಚಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

 

Related Articles

Back to top button