ವಕ್ವಾಡಿ ಗುರುಕುಲ ವಿದ್ಯಾ ಸಂಸ್ಥೆ: ಸುದೀರ್ಘ ಅಂಚೆಪಾಲಕರಾಗಿ ನಿವೃತ್ತರಾಗಲಿರುವ ಶ್ರೀಮತಿ ಶರಾವತಿಯವರಿಗೆ ಸನ್ಮಾನ

Views: 651
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ವಕ್ವಾಡಿ ಗುರುಕುಲ ವಿದ್ಯಾ ಸಂಸ್ಥೆಯಲ್ಲಿ ಸಾಧನ ಸನ್ಮಾನ ಕಾರ್ಯಕ್ರಮವನ್ನು ಮೇ 30ರಂದು ಹಮ್ಮಿಕೊಳ್ಳಲಾಗಿತ್ತು.
ವಕ್ವಾಡಿ ಸ್ಥಳೀಯ ಅಂಚೆ ಕಛೇರಿಯಲ್ಲಿ ಸುಮಾರು 42 ವರ್ಷಗಳ ಸುದೀರ್ಘಕಾಲ ಅಂಚೆಪಾಲಕರಾಗಿ ಸೇವೆ ಸಲ್ಲಿಸಿ ದಿನಾಂಕ 31-5-25 ರಂದು ನಿವೃತ್ತರಾಗಲಿರುವ ಶ್ರೀಮತಿ. ಶರಾವತಿಯವರ ಕಾರ್ಯವೈಖರಿಯನ್ನು ಗುರುತಿಸಿ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಅವರನ್ನು ಪ್ರೀತಿ ಗೌರವದಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಶ್ರೀಮತಿ ಶರಾವತಿಯವರು ಮಾತನಾಡುತ್ತಾ, ಹಳ್ಳಿಯ ಸಣ್ಣ ಅಧಿಕಾರಿಯನ್ನು ಈ ರೀತಿಯಲ್ಲಿ ಗುರುತಿಸಿ ಸನ್ಮಾನಿಸಿರುವುದು ನಿಜಕ್ಕೂ ಆಶ್ಚರ್ಯ ಮತ್ತು ಅತೀ ಸಂತೋಷವನ್ನುಂಟುಮಾಡಿದೆ. ಶಿಸ್ತು ಮತ್ತು ಶಿಕ್ಷಣದ ಮೌಲ್ಯಕ್ಕೆ ಪ್ರಾಧಾನ್ಯತೆ ನೀಡುತ್ತಿರುವ ಗುರುಕುಲ ವಿದ್ಯಾಸಂಸ್ಥೆಯು ಸಮಸ್ತ ಸಮಾಜಕ್ಕೆ ಮಾದರಿಯಾಗಲಿ ಎಂದು ಹಾರೈಸಿದರು.
ಸಭಾಧ್ಯಕ್ಷತೆಯನ್ನು ವಹಿಸಿರುವ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಮತಿ ಅನುಪಮಾ ಎಸ್ ಶೆಟ್ಟಿಯವರು ಮಾತನಾಡುತ್ತಾ ,ನಮ್ಮ ಬಾಲ್ಯದಲ್ಲಿ ಅಂಚೆ ಬೆಸೆದ ಬದುಕು ನೆನಪಾಗುತ್ತೆ, ಅಂಚೆಗಾಗಿ ಕಾದ ಆ ದಿನಗಳು ಅತ್ಯಂತ ಶ್ರೇಷ್ಠ ದಿನಗಳಾಗಿ ಪರಿಣಮಿಸಿದೆ .ಶ್ರೀಮತಿ ಶರಾವತಿಯವರು ಇಡೀ ಊರಿನ ಪ್ರೀತಿ ಗಳಿಸಿರುವುದು ಮಾತ್ರವಲ್ಲ, ನಮ್ಮ ಸಂಸ್ಥೆಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು. ಈ ಸಂದರ್ಭದಲ್ಲಿ ಅವರನ್ನು ಗೌರವಿಸುವುದಕ್ಕೆ ಹೆಮ್ಮೆ ಅನಿಸುತ್ತಿದೆ ಎಂದರು .
ಗುರುಕುಲ ಪಬ್ಲಿಕ್ ಸ್ಕೂಲ್ ನ ಪ್ರಾಚಾರ್ಯರಾದ ಡಾ. ರೂಪಾ ಶೆಣೈ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕನ್ನಡ ಭಾಷಾ ಉಪನ್ಯಾಸಕ ಡಾ. ಕೃಷ್ಣರಾಜ ಕರಬ ಕಾರ್ಯಕ್ರಮವನ್ನು ನಿರ್ವಹಿಸಿ, ಸರ್ವರನ್ನು ವಂದಿಸಿದರು.