ಯಲ್ಲಾಪುರ ಲಾರಿ- ಕ್ರೂಸರ್ ನಡುವೆ ಭೀಕರ ಅಪಘಾತ: 7 ಮಂದಿ ಸಾವು
Views: 140
ಕನ್ನಡ ಕರಾವಳಿ ಸುದ್ದಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ (ಆರತಿಬೈಲ್) ಘಟ್ಟದಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 7ಜನ ಮೃತಪಟ್ಟಿದ್ದಾರೆ.
ಧಾರವಾಡ ಹಾಗೂ ಹುಬ್ಬಳ್ಳಿ ಮೂಲದ ಒಂಬತ್ತು ಮಂದಿ ಸ್ನೇಹಿತರು ಕ್ರೂಸರ್ ವಾಹನದಲ್ಲಿ ಗೋಕರ್ಣ ಮತ್ತು ಮುರುಡೇಶ್ವರ ಪ್ರವಾಸ ಮುಗಿಸಿ, ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನಕ್ಕೆ ತೆರಳುತ್ತಿದ್ದರು. ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಎದುರಿನಿಂದ ಬಂದ ಲಾರಿಯು ಕ್ರೂಸರ್ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಆರು ಮಂದಿ ಮೃತಪಟ್ಟಿದ್ದರು. ನಂತರ ಚಿಕಿತ್ಸೆ ಪಡೆಯುತ್ತಿದ್ದ ಸಚಿನ್ ಮೃತಪಟ್ಟಿದ್ದಾರೆ.
ಮೃತರನ್ನು ಬಸವರಾಜ್ (48), ಅಭಿಷೇಕ್ ಈಶ್ವರ್ (28), ಅಕ್ಷಯ್ (26), ಅಭಿಷೇಕ್ (26), ಚಾಲಕ ಸಂಜೀವ ಅಂಗಡಿ (33), ಮಂಜುನಾಥ್ ಹಾಗೂ ಸಚಿನ್ ಹೆಬ್ಬಳ್ಳಿ ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಗಾಯಗೊಂಡಿರುವ ಶಿವರಾಜ್ ಹಾಗೂ ಮತ್ತೋರ್ವ ಯುವಕ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯದ ಮೇಲೆ ವೈದ್ಯರು ನಿಗಾ ವಹಿಸಿದ್ದಾರೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಯಲ್ಲಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.






