ಮಗಳು ಆತ್ಮಹತ್ಯೆ ಅಳಿಯನ ಮನೆಗೆ ಬೆಂಕಿ ಇಟ್ಟು ಅತ್ತೆಮಾವ ಇಬ್ಬರೂ ಸಜೀವ ದಹನ

Views: 179
ಮದುವೆ ಮಾಡಿಕೊಟ್ಟ ತಮ್ಮ ಮಗಳು ಗಂಡನ ಮನೆಯಲ್ಲಿ ಸಾವಿಗೆ ಶರಣಾಗಿದ್ದು, ಇದರಿಂದ ರೊಚ್ಚಿಗೆದ್ದ ಪೋಷಕರು ಆಕೆಯ ಗಂಡನ ಮನೆಗೆ ಬೆಂಕಿ ಇಟ್ಟು ಅತ್ತೆ ಮಾವನನ್ನು ಸಜೀವವಾಗಿ ಸುಟ್ಟ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆದಿದೆ.
ಉತ್ತರ ಪ್ರದೇಶದ ಮುತ್ತಿಗಂಜ್‌ನಲ್ಲಿ ಈ ಭಯಾನಕ ಘಟನೆ ನಡೆದಿದೆ. 26 ವರ್ಷದ ಅನ್ಸಿಕಾ ಕೆಸರ್ವಾನಿ ಎಂಬ ಮಹಿಳೆ ತನ್ನ ಗಂಡನ ಕುಟುಂಬದವರು ತನ್ನನ್ನು ಕೆಟ್ಟದಾಗಿ ನಡೆಸಿಕೊಂಡರು ಎಂದು ಮನನೊಂದು ಮನೆಯಲ್ಲೇ ಸಾವಿಗೆ ಶರಣಾಗಿದ್ದಳು. ಸೊಸೆಯ ಸಾವಿನ ನಂತರ ಆಕೆಯ ಗಂಡನ ಮನೆಯವರು ಸೊಸೆಯ ಪೋಷಕರಿಗೆ ಕರೆ ಮಾಡಿ ಮಗಳ ಸಾವಿನ ಬಗ್ಗೆ ತಿಳಿಸಿದ್ದಾರೆ. ಬಳಿಕ ಸೊಸೆಯ ಪೋಷಕರು ಸಂಬಂಧಿಗಳು ನೆಂಟರಿಷ್ಟರು ಮನೆಗೆ ಬಂದಿದ್ದು, ಶವವಾಗಿ ಮಲಗಿದ್ದ ಮಗಳನ್ನು ನೋಡಿ ಸಂಬಂಧಿಗಳು ರೊಚ್ಚಿಗೆದ್ದಿದ್ದಾರೆ.
ಅಲ್ಲದೇ ಮಗಳ ಅತ್ತೆ ಮನೆಯವರಿಗೆ ಬುದ್ಧಿ ಕಲಿಸಲು ಅತ್ತೆ ಮಾವ ಮನೆಯೊಳಗೆ ಇದ್ದಾಗಲೇ ಮನೆಗೆ ಬೆಂಕಿ ಹಚ್ಚಿದ್ದಾರೆ. ಮನೆಯಲ್ಲಿದ್ದ ಉಳಿದ ಐವರನ್ನು ಪೊಲೀಸರು ರಕ್ಷಿಸಿದ್ದಾರೆ. ಮಹಿಳೆಯ ಪೋಷಕರು ತಮ್ಮ ಮಗಳ ಸಾವಿಗೆ ಆಕೆಯ ಅತ್ತೆ ಮನೆಯವರೇ ಕಾರಣ ಎಂದು ಆರೋಪಿಸಿ ಗಲಾಟೆ ಎಬ್ಬಿಸಿದ್ದು, ಈ ಗಲಾಟೆಯ ನಡುವೆಯೇ ಯಾರೋ ಮನೆಯ ನೆಲಮಹಡಿಗೆ ತೆರಳಿ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಹೀಗೆ ಹತ್ತಿಕೊಂಡ ಬೆಂಕಿ ಸ್ವಲ್ಪ ಹೊತ್ತಿನಲ್ಲೇ ಮನೆಯ ಇತರೆಡೆಗೂ ವ್ಯಾಪಿಸಿದೆ.
ಮನೆ ಬೆಂಕಿಯಿಂದ ಹೊತ್ತಿ ಉರಿಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮನೆಯಲ್ಲಿದ್ದ ಇತರ ಐವರನ್ನು ರಕ್ಷಿಸಿದ್ದಾರೆ. ಆದರೆ ಬೆಂಕಿ ನಂದಿಸಿದ ನಂತರ ಮನೆ ಒಳಗೆ ಹೋಗಿ ನೋಡಿದಾಗ ಎರಡು ಸಜೀವವಾಗಿ ದಹಿಸಲ್ಪಟ್ಟ ಮೃತದೇಹಗಳು ಸಿಕ್ಕಿವೆ. ವಿಚಾರಣೆ ನಡೆಸಿದಾಗ ಈ ಶವಗಳು ಮಹಿಳೆಯ ಅತ್ತೆ ಹಾಗೂ ಮಾವನದ್ದು ಎಂದು ತಿಳಿದು ಬಂದಿದೆ.