ಪಬ್ಲಿಕ್ ಪರೀಕ್ಷೆ ರದ್ದತಿ:ಹೈಕೋರ್ಟ್ ಆದೇಶದ ವಿರುದ್ದ ಮೇಲ್ಮನವಿ ಸಲ್ಲಿಸದಂತೆ ಅಭಿಯಾನ

Views: 60
ರಾಜ್ಯ ಪಠ್ಯಕ್ರಮವಿರುವ ಶಾಲೆಗಳ 5,8,9 ಮತ್ತು 11ನೇ ತರಗತಿ ಮಕ್ಕಳಿಗೆ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್ ಬುಧವಾರ ರದ್ದುಪಡಿಸಿ ಆದೇಶಿಸಿದೆ. ಈ ಆದೇಶವನ್ನು ಶಿಕ್ಷಣ ತಜ್ಞರು, ಮಕ್ಕಳ ಪೋಷಕರು ಸ್ವಾಗತಿಸಿದ್ದಾರೆ.
ಆದರೆ, ಈಗ ಹೈಕೋರ್ಟ್ ಆದೇಶದ ವಿರುದ್ಧ ಕರ್ನಾಟಕ ಸರ್ಕಾರ ಅಥವಾ ಶಿಕ್ಷಣ ಇಲಾಖೆ ಮೇಲ್ಮನವಿ ಸಲ್ಲಿಸುವ ಆತಂಕ ಎದುರಾಗಿದೆ. ವರದಿಗಳ ಪ್ರಕಾರ, ಸರ್ಕಾರ ಈಗಾಗಲೇ ಮೇಲ್ಮನವಿ ಸಲ್ಲಿಸಲು ಸಿದ್ದತೆ ನಡೆಸಿದೆ.
ಸರ್ಕಾರ ಹೈಕೋರ್ಟ್ ಆದೇಶದ ವಿರುದ್ದ ಮೇಲ್ಮನವಿ ಸಲ್ಲಿಸದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ಪ್ರಾರಂಭಿಸಿರುವ ಚಿಂತಕರು, ಶಿಕ್ಷಣ ತಜ್ಞರು ಮತ್ತು ಸಾರ್ವಜನಿಕರು, “ಮಕ್ಕಳನ್ನು ಪದೇ ಪದೇ ಪರೀಕ್ಷೆಗೆ ಗುರಿ ಪಡಿಸುವುದು ಮಕ್ಕಳ ಹಕ್ಕುಗಳ ವಿರೋಧ ಕ್ರಮವಾಗಿದೆ. ಅದನ್ನು ರದ್ದುಪಡಿಸಿ ಹೈಕೋರ್ಟ್ ಆದೇಶಿಸಿರುವುದು ಸ್ವಾಗತಾರ್ಹ. ಸರ್ಕಾರ ಮೇಲ್ಮನವಿ ಸಲ್ಲಿಸಬಾರದು ಎಂದು ಆಗ್ರಹಿಸಿದ್ದಾರೆ.
“ತಾತ್ವಿಕವಾಗಿ, ಸೈದ್ಧಾಂತಿಕವಾಗಿ ಮಕ್ಕಳನ್ನು ಈ ರೀತಿ ಪರೀಕ್ಷೆಗಳಿಗೆ ಗುರಿ ಪಡಿಸುವುದು ಮಕ್ಕಳ ಹಕ್ಕುಗಳ ವಿರೋಧ ಎನಿಸಿಕೊಳ್ಳುತ್ತದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲ, ಮೂಲಭೂತ ಸೌಕರ್ಯಗಳಿಲ್ಲ, ಸಮರ್ಪಕವಾಗಿ ಪಠ್ಯ ಪುಸ್ತಕಗಳ ವಿತರಣೆಯಾಗಿಲ್ಲ. ಈ ಕೊರತೆಗಳ ಕಾರಣದಿಂದ ಅಲ್ಲಿ ಓದುತ್ತಿರುವ ಗ್ರಾಮೀಣ ಭಾಗದ, ವಂಚಿತ ಸಮುದಾಯದ ಮಕ್ಕಳು ರಾಜ್ಯ ಮಟ್ಟದ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಲು ತರಬೇತಿ ಪಡೆದಿರುವುದಿಲ್ಲ. ಪ್ರತಿಭೆ ಇದ್ದರೂ ಇಂತಹ ಅನಾಹುತಕಾರಿ ನಿರ್ಧಾರಗಳ ಕಾರಣದಿಂದ ಶಿಕ್ಷಣದಿಂದ ವಂಚಿತರಾಗುತ್ತಾರೆ. ಸರ್ಕಾರವು ಮೊದಲು ಸರ್ಕಾರಿ ಶಾಲೆಗಳನ್ನು ಬಲಪಡಿಸಲಿ, ನಂತರ ಮುಂದಿನ ವಿಚಾರ. ಎರಡನೆಯದಾಗಿ 5,8,9 ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದು ಶಿಕ್ಷಣ ಹಕ್ಕುಗಳ ಕಾಯ್ದೆ (ಆರ್ ಟಿಇ) 2009ರ ಸೆಕ್ಷನ್ 16ರ ಉಲ್ಲಂಘನೆಯಾಗುತ್ತದೆ. ಅದರ ಪ್ರಕಾರ ಪ್ರಾಥಮಿಕ ಶಿಕ್ಷಣ ಮುಗಿಯುವವರೆಗೂ ಮಕ್ಕಳನ್ನು ಫೇಲು ಮಾಡುವಂತಿಲ್ಲ (No detention policy)” ಎಂದಿದ್ದಾರೆ.
“2019ರಲ್ಲಿ ಬಿಜೆಪಿ ಪಕ್ಷವು ತನ್ನ ಅನೀತಿಗೆ ಅನುಗುಣವಾಗುವಂತೆ ನಿಯಮಿತವಾಗಿ ಪರೀಕ್ಷೆಗಳನ್ನು ನಡೆಸಬೇಕೆಂದು ಸೆಕ್ಷನ್ 16ನ್ನು ತಿದ್ದುಪಡಿ ಮಾಡಿದೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸದೆ ಸತತವಾಗಿ ಪರೀಕ್ಷೆಗಳ ಮೂಲಕ ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಮೌಲ್ಯಮಾಪನ ಮಾಡುವುದು ಅಮಾನವೀಯವಲ್ಲವೇ? ಇದು ವಂಚಿತ ಸಮುದಾಯದ ಮಕ್ಕಳನ್ನು ಶಿಕ್ಷಣದಿಂದ ಹೊರದೂಡುತ್ತದೆ. 2023ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಹಿಂದಿನ ಬಿಜೆಪಿ ಸರ್ಕಾರ ಮಾಡಿದ ಈ ತಿದ್ದುಪಡಿಯನ್ನು ರದ್ದುಗೊಳಿಸಿ ಮೂಲದಲ್ಲಿದ್ದ ಸೆಕ್ಷನ್ 16ನ್ನು ಮರಳಿ ತರಬೇಕಿತ್ತು. ಆದರೆ ಇದನ್ನು ಮಾಡದೆ ಹಿಂದಿನ ಸರ್ಕಾರದ ಪಬ್ಲಿಕ್ ಪರೀಕ್ಷೆ ಎನ್ನುವ ಅನೀತಿಯನ್ನು ಮುಂದುವರಿಸಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಮೂರನೆಯದಾಗಿ 5,8,9 ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ವಿಧಾನಮಂಡಲದಲ್ಲಿ ಚರ್ಚೆ ನಡೆಸಲಿಲ್ಲ. ಶಿಕ್ಷಣದ ಭಾಗೀದಾರರೊಂದಿಗೆ ಸಮಾಲೋಚನೆ ಮಾಡಲಿಲ್ಲ. ಏಕಪಕ್ಷೀಯವಾಗಿ ಕೇವಲ ಅಧಿಸೂಚನೆ ಮೂಲಕ ತಿದ್ದುಪಡಿ ಮಾಡುವುದು ಸಂವಿಧಾನ ವಿರೋಧಿ ನೀತಿಯಲ್ಲವೇ? ಮುಖ್ಯವಾಗಿ ಎನ್‌ಇಪಿ 2020ಯನ್ನು ವಿರೋಧಿಸಿದ ಕಾಂಗ್ರೆಸ್ ‘ಕೇಂದ್ರ ಬಿಜೆಪಿ ಸರ್ಕಾರವು ಸಂಸತ್ತಿನಲ್ಲಿ ಚರ್ಚೆ ಮಾಡಲಿಲ್ಲ, ರಾಜ್ಯ ಬಿಜೆಪಿ ಸರ್ಕಾರವು ವಿಧಾನ ಮಂಡಲದಲ್ಲಿ ಚರ್ಚೆ ಮಾಡಲಿಲ್ಲ’ ಎಂದು ಸಕಾರಣವಾಗಿ ಪ್ರತಿಭಟಿಸಿದ್ದರು. ಈಗ ಅಧಿಕಾರಕ್ಕೆ ಬಂದ ನಂತರ ಸ್ವತಃ ತಾವೇ ಆ ರೀತಿ ನಡೆದುಕೊಳ್ಳುವುದು ಸರಿಯೇ? ಎನ್‌ಇಪಿಯನ್ನು ವಿರೋಧಿಸುವ ಕಾಂಗ್ರೆಸ್ ಸರ್ಕಾರ ಪಬ್ಲಿಕ್ ಪರೀಕ್ಷೆ ನಡೆಸಬೇಕೆಂದು ಹೇಳಿದ ಅದರ ಶಿಫಾರಸ್ಸನ್ನು ಜಾರಿಗೊಳಿಸುತ್ತಿರುವುದು ಎಂತಹಾ ವ್ಯಂಗ್ಯ ಮತ್ತು ವೈರುಧ್ಯ?” ಎಂದು ಪ್ರಶ್ನಿಸಿದ್ದಾರೆ.
ಡಾ. ಶ್ರೀನಿವಾಸ್ ಕಕ್ಕಿಲ್ಲಾಯ ಕೂಡ ಸರ್ಕಾರ ಹೈಕೋರ್ಟ್ ಆದೇಶದ ವಿರುದ್ದ ಮೇಲ್ಮನವಿ ಸಲ್ಲಿಸದಂತೆ ಆಗ್ರಹಿಸಿದ್ದಾರೆ. “5,8,9,11 ತರಗತಿಗಳಿಗೆ ಬೋರ್ಡ್ ಪರೀಕ್ಷೆ ರದ್ದು ಮಾಡಿರುವ ಹೈಕೋರ್ಟ್ ಆದೇಶ ಸರಿಯಾಗಿದೆ. ಇದನ್ನು ವಿಭಾಗೀಯ ಪೀಠದಲ್ಲಿ ಪ್ರಶ್ನಿಸುವ ನಿರ್ಧಾರ ಸರಿಯಲ್ಲ. ಕೋವಿಡ್ ಕಾಲದಲ್ಲಿ ಶೈಕ್ಷಣಿಕವಾಗಿ ನರಳಿರುವ ಮಕ್ಕಳನ್ನು ಹಿಂಸಿಸಬೇಡಿ. ಪ್ರತಿಷ್ಠೆ ಬೇಡ, ಮಕ್ಕಳ ಹಿತಾಸಕ್ತಿಯಷ್ಟೇ ಮುಖ್ಯ” ಎಂದಿದ್ದಾರೆ.
ಇದಲ್ಲದೆ ಸಾರ್ವಜನಿಕ ವಲಯದಲ್ಲೂ ಸರ್ಕಾರ ಹೈಕೋರ್ಟ್ ಆದೇಶದ ವಿರುದ್ದ ಮೇಲ್ಮನವಿ ಸಲ್ಲಿಸದಂತೆ ಆಗ್ರಹಗಳು ಕೇಳಿ ಬಂದಿವೆ.