ನಿಶ್ಚಿತಾರ್ಥವಾಗಿದ್ದ ಯುವತಿ ಆತ್ಮಹತ್ಯೆಗೆ ಶರಣು.. ಪಕ್ಕದ ಮನೆ ಯುವಕನ ಮೇಲೆ ದೂರು ದಾಖಲು

Views: 104
ನಿಶ್ಚಿತಾರ್ಥವಾಗಿದ್ದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಗಣಿ ಸಮೀಪದ ನಂಜಾಪುರದಲ್ಲಿ ನಡೆದಿದೆ. 19 ವರ್ಷದ ಚಂದ್ರಕಲಾ ಮೃತ ಯುವತಿ. ಚಂದ್ರಕಲಾಗೆ ನಿಶ್ಚಿತಾರ್ಥವಾಗಿದ್ದು ಪ್ರಿಯಕರನ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.
ಚಂದ್ರಕಲಾ ಪಕ್ಕದ ಮನೆಯ ಅರುಣ್ ಕುಮಾರ್ ಎಂಬಾತನನ್ನು ಪ್ರೀತಿಸುತ್ತಿದ್ದರಂತೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಮನೆಯವರು ಹುಡುಗಿಗೆ ಬುದ್ಧಿವಾದ ಹೇಳಿ ಬೇರೆ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿದ್ದಾರೆ.
ಆರೋಪಿ ಅರುಣ್ ಕುಮಾರ್ ಜೈಲಿಗೆ ಹೋಗಿ ಬಂದಿದ್ದಾನೆ. ಅವನ ನಡವಳಿಕೆ ಸರಿ ಇಲ್ಲ. ಆತನನ್ನು ಮದುವೆಯಾಗಬೇಡ ಎಂದು ಪೋಷಕರು ಹುಡುಗಿಯ ಮನವೊಲಿಸಿದ್ದರು. ಇದಕ್ಕೆ ಒಪ್ಪಿದ ಹುಡುಗಿ ಮನೆಯವರು ಹೇಳಿದ ಪರಿಚಿತ ಹುಡುಗನೊಬ್ಬನ ಜೊತೆ ಎಂಗೇಜ್ಮೆಂಟ್ ಕೂಡ ಆಗಿದ್ದರು.
ಇಷ್ಟೆಲ್ಲ ಆದ ಮೇಲೆ ಅರುಣ್ ಕುಮಾರ್ ಬೇರೆ ಮದುವೆಯಾದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಚಂದ್ರಕಲಾ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಮಗಳ ಸಾವಿಗೆ ಆತನೇ ಕಾರಣವೆಂದು ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದಾರೆ. ಚಂದ್ರಕಲಾ ಆತ್ಮಹತ್ಯೆ ಮಾಡಿಕೊಂಡ ಬಳಿಕ ಪಕ್ಕದ ಮನೆಯ ಅರುಣ್ ಕುಮಾರ್ ತಲೆ ಮರೆಸಿಕೊಂಡಿದ್ದಾನೆ.