ನಿವೃತ್ತ ಬ್ಯಾಂಕ್ ಅಧಿಕಾರಿ ವಕ್ವಾಡಿ ಶೇಖರ ಶೆಟ್ಟಿ ನಿಧನ
Views: 110
ಕನ್ನಡ ಕರಾವಳಿ ಸುದ್ದಿ: ವಿಜಯಾ ಬ್ಯಾಂಕಿನ ನಿವೃತ್ತ ಅಧಿಕಾರಿ ವಕ್ವಾಡಿ ಶೇಖರ ಶೆಟ್ಟಿ (86) ಮಂಗಳೂರಿನ ಸ್ವಗ್ರಹದಲ್ಲಿ ಜುಲೈ 9ರಂದು ನಿಧನರಾದರು.
ಪತ್ನಿ ವಸಂತಿ ಶೆಟ್ಟಿ, ಮೂವರು ಗಂಡು ಮಕ್ಕಳು ಡಾ| ವಿದ್ಯಾಧರ್ ಶೆಟ್ಟಿ, ರೂಪೇಶ್ ಕುಮಾರ್ ಶೆಟ್ಟಿ, ಹರ್ಷಿಷ್ ಕುಮಾರ್ ಶೆಟ್ಟಿ, ಕುಟುಂಬಿಕರು ಹಾಗೂ ಅಪಾರ ಬಂಧು ಮಿತ್ರರನ್ನು ಅವರು ಅಗಲಿದ್ದಾರೆ.
ಮೂಲತಃ ಕುಂದಾಪುರ ತಾಲೂಕಿನ ವಕ್ವಾಡಿಯ ಕೃಷಿಕ ಕುಟುಂಬದಲ್ಲಿ ಜನಿಸಿದ ಶೇಖರ ಶೆಟ್ಟರು ಹಲವು ವರ್ಷಗಳಿಂದ ಮಂಗಳೂರಿನಲ್ಲಿ ನಲೆಸಿದ್ದರು. ದೇಶದ ವಿವಿಧ ಭಾಗಗಳಲ್ಲಿ ಬ್ಯಾಂಕಿಂಗ್ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಯಕ್ಷಗಾನ ಮತ್ತು ವಿವಿಧ ಸಾಂಸ್ಕೃತಿಕ, ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಕದ್ರಿಯ ಶ್ರೀಕೃಷ್ಣ ಯಕ್ಷ ಸಭಾ ಮತ್ತು ಯಕ್ಷಾಂಗಣ ಮಂಗಳೂರು ಸಂಸ್ಥೆಗಳಲ್ಲಿ ಸುದೀರ್ಘ ಕಾಲ ಸದಸ್ಯರಾಗಿದ್ದು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ಅವರು ಸಾರ್ವಜನಿಕ ರಂಗದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದರು. ಬ್ಯಾಂಕಿಂಗ್ ಮತ್ತು ಸಾಮಾಜಿಕ ಸೇವೆಗಾಗಿ ಹಲವು ಸನ್ಮಾನ – ಗೌರವಗಳಿಗೆ ಪಾತ್ರರಾಗಿದ್ದರು.
ವಕ್ವಾಡಿ ಶೇಖರ ಶೆಟ್ಟಿ ಅವರ ನಿಧನಕ್ಕೆ ಯಕ್ಷಾಂಗಣ ಮಂಗಳೂರು, ಶ್ರೀಕೃಷ್ಣ ಯಕ್ಷ ಸಭಾ, ಕಲ್ಕೂರಾ ಪ್ರತಿಷ್ಠಾನ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ಬಂಟರ ಸಂಘಗಳು ಸಂತಾಪ ವ್ಯಕ್ತಪಡಿಸಿವೆ.






