ಸಾಮಾಜಿಕ

ನನ್ನಾಕೆಯ ಅಂತಿಮ ಯಾತ್ರೆ…..

ಆರೋಗ್ಯವಾಗಿದ್ದಾಕೆ ಮರಣ ಹೊಂದಿದಾಗ , ಹಾರ್ಟ್ ಅಟ್ಯಾಕ್ ಎಂದೇ ತೀರ್ಮಾನಿಸಿದ್ದೆ. ಆದರೆ ಅದು ಸಹಜ ಮರಣವಾಗಿತ್ತು! ಒಬ್ಬ ವ್ಯಕ್ತಿಯ ಮರಣದ ಸಮಯ ಹತ್ತಿರದಲ್ಲಿದ್ದಾಗ, ಬಂದ ಯಮದೂತರು ಅವನಿಗೆ ಕಾಣಿಸಿಕೊಳ್ಳುತ್ತಾರೆ. ಆಗ ಬಯಭೀತರಾಗುತ್ತಾರೆ. ಕೆಲವರು ಬೊಬ್ಬೆ ಹೊಡೆಯುತ್ತಾರೆ. ಮುಂದೆ ಒಂದೊಂದೇ ಅಂಗ ತನ್ನ ಕೆಲಸ ನಿಲ್ಲಿಸುತ್ತದೆ. ಅವನು ಬಯಸಿದರೂ ಏನನ್ನೂ ಮಾತನಾಡಲು ಸಾಧ್ಯವಾಗುವುದಿಲ್ಲ. ಅವನ ಮಾತನಾಡುವ ಮತ್ತು ಕೇಳುವ ಸಾಮರ್ಥ್ಯ ಕಳೆದುಹೋಗುತ್ತದೆ. ಅವನು ಯಮದೂತರನ್ನು ಕಂಡು ತುಂಬಾ ಹೆದರುತ್ತಾನೆ. ಅವನ ಸುತ್ತಲೂ ನಿಂತಿರುವ ಸಂಬಂಧಿಕರನ್ನು ಅವನು ನೋಡುವುದಿಲ್ಲ. ದೃಷ್ಟಿಯೂ ಸ್ಥಗಿತವಾಗುತ್ತದೆ. ವ್ಯಕ್ತಿಯ ದೇಹದಿಂದ ಆತ್ಮ ಹೊರಬಂದ ನಂತರ, ಯಮದೂತರು ಅದನ್ನು ಯಮಲೋಕಕ್ಕೆ ಕೊಂಡೊಯ್ಯುತ್ತಾರೆ

Views: 700

ತಂದೆ ತಾಯಿಯ ಮರಣವು ನೋಡಲು ನನಗೆ ಸಿಕ್ಕಿರಲಿಲ್ಲ.

ಅನ್ಯರ ಮರಣದ ಸಮಯದಲ್ಲಿ ಅದನ್ನು ನೋಡುವುದು, ಆ ಕುಟಂಬದವರಿಗೆ ಸಾಂತ್ವನ ಹೇಳುವುದು ನನ್ನಿಂದಾಗದು. ಹಾಗಾಗಿ ದೂರದಲ್ಲೇ ಮೌನಿಯಾಗಿರುತ್ತಿದ್ದೆ! ಪತ್ನಿಯ ಮರಣವನ್ನು ಮಾತ್ರ ಕಣ್ಣಾರೆ ಕಂಡದ್ದು! ಆಕೆಗೆ ಆಂಜಿಯೋ ಚಿಕಿತ್ಸೆ ಆಗಿದ್ದು ,ಆರೋಗ್ಯವಾಗಿದ್ದಾಕೆ ಮರಣ ಹೊಂದಿದಾಗ , ಹಾರ್ಟ್ ಅಟ್ಯಾಕ್ ಎಂದೇ ತೀರ್ಮಾನಿಸಿದ್ದೆ. ಆದರೆ ಅದು ಸಹಜ ಮರಣವಾಗಿತ್ತು!

ಪತ್ನಿಯೊಡನೆ 50 ವರ್ಷ 2 ತಿಂಗಳು ಸಂಸಾರ ನಡೆಸಿದ್ದೆ! BPEd ತರಬೇತಿ ಸಮಯದಲ್ಲಿ 10 ತಿಂಗಳು ಮಾತ್ರ ನಾವು ಬೇರೆ ಬೇರೆ ಬದುಕಿದ್ದು. 27-5-1973 ನಮ್ಮ ವಿವಾಹ. ಅನ್ಯೋನ್ಯ ದಾಂಪತ್ಯ ಜೀವನ ನಮ್ಮದು. ಆದರೆ ಬೇರೆಯವರೊಡನೆ ಎಂದೂ ಒಬ್ಬರನ್ನೊಬ್ಬರು, ನಾನಾಗಲೀ, ಅವಳಾಗಲೀ ನಮ್ಮ ಅನ್ಯೋನ್ಯತೆ ಬಗ್ಗೆ ಹೊಗಳಿಕೊಂಡದ್ದಿಲ್ಲ! ನಡವಳಿಕೆಯಲ್ಲೂ ತೋರಿಸಿಕೊಂಡದ್ದೂ ಇಲ್ಲ! .ಒಬ್ಬರನ್ನೊಬ್ಬರು ಪ್ರೀತಿಯಿಂದ ಆಧರಿಸಿ ಬಾಳಿದ್ದೆವು. ನನಗೆ ಅನಾರೋಗ್ಯವಾದಾಗ ಆಕೆಯೂ , ಆಕೆಗೆ ಅನಾರೋಗ್ಯವಾದಾಗ ನಾನೂ ಪ್ರೀತಿಯಿಂದ ನೋಡಿಕೊಂಡಿದ್ದೆವು. ಆ ಸಮಯದಲ್ಲೇ ನಮ್ಮ ಅನ್ಯೋನ್ಯತೆ ಪ್ರಕಟವಾಗುತ್ತಿದ್ದುದು! ಹಾಗಂತ ನಾವು ಬಹಳ ದಿನ ಎಂದೂ ಆರೈಕೆ ಮಾಡಿಸಿಕೊಳ್ಳುವಂತ ಸಂದರ್ಭ ಬಂದಿರಲಿಲ್ಲ!! ನಾನು ಜ್ವರ ದಿಂದಲೂ ಒಮ್ಮೆ ನನ್ನ ತೋಳು, (ಭುಜದಲ್ಲಿ )ಜಾರಿದ ಸಮಯದಲ್ಲೂ, ಅವಳು ಆಂಜಿಯೋ ಚಿಕಿತ್ಸೆ ಮತ್ತು ಮೊಣಕಾಲು ಜೋಡಣೆ ಚಿಕಿತ್ಸೆ ಸಮಯದಲ್ಲೂ ಆಸ್ಪತ್ರೆಯಲ್ಲಿ ದಾಖಲಾಗಿ ಆರೈಕೆ ಮಾಡಿಸಿಕೊಂಡಿರೋದು. ನಾವು ಇಂತಹ ನಮ್ಮ ಸಂಕಷ್ಟ ಸಮಯದಲ್ಲಿ ಮಕ್ಕಳ ಹೊರತಾಗಿ ಯಾರಿಗೂ ನಮ್ಮ ಸಂಕಷ್ಟವನ್ನು ತಿಳಿಸುವ ಗೋಜಿಗೆ ಹೋಗುತ್ತಿರಲಿಲ್ಲ.

ಆಕೆಯ ಮಂಡಿ ಜೋಡಣೆ ಸಮಯದಲ್ಲಿ ಊಟವನ್ನು ಬಾಯಿಗೆ ಕೊಡಬೇಕಿತ್ತು! ಆ ಸಮಯದಲ್ಲಿ ನನ್ನಿಂದ ಊಟ ಸ್ವೀಕರಿಸುತ್ತಾ , ಇದು ನನ್ನ ಪುಣ್ಯ ಎಂದು ಆಕೆ ಉದ್ಘರಿಸಿದ್ದಳು!! ಇಂತಹ ಎಲ್ಲ ಸಮಯದಲ್ಲೂ ಅನಾರೋಗ್ಯದ ವಿಷಯವನ್ನೂ, ಆಸ್ಪತ್ರೆಯ ಜವಾಬ್ದಾರಿಗಳನ್ನು ನಾವೇ ನಿರ್ವಹಿಸಿದ್ದೆವು.

ನಮ್ಮ ದಾಂಪತ್ಯ ಜೀವನದಲ್ಲಿ ಸರಸ ವಿರಸ ಇರಲಿಲ್ಲ ಎಂದಲ್ಲ! ಇದ್ದದ್ದೇ!! ಆದರೆ ಕೆಲವೇ ಸಮಯದ ನಂತರ ಸರಿ ಮಾಡಿಕೊಳ್ಳುತ್ತಿದ್ದೆವು!

ಗಮನಿಸಬೇಕಾದ ಘಟನೆ 1:- ನಮ್ಮ ಮದುವೆ ಆಗಿ ತಿಂಗಳಲ್ಲೇ ನಾನು ಉದ್ಯೋಗ ಮಾಡುತ್ತಿದ್ದಲ್ಲಿ ಮನೆ ಮಾಡಿದ್ದೆ.( ನಾನು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷನಾಗಿ ಉದ್ಯೋಗ ಆರಂಭಿಸಿ, ಉಪನಿರ್ಧೇಶಕರ ಕಛೇರಿಯಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕನಾಗಿ 40 ವರ್ಷ ಸೇಯನಂತರ ನಿವೃತ್ತನಾದವನು) ಹೀಗೆ ಸಂಸಾರ ಆರಂಭಿಸಿದ ಒಂದೆರಡು ತಿಂಗಳ ಅವಧಿಯ ಒಂದು ಸಂಜೆ ಇದ್ದಕ್ಕಿದ್ದ ಹಾಗೆ ದೀರ್ಘವಾದ, ಉಸಿರಾಟ ಆ ಉಸಿರಾಟದಲ್ಲಿ ಸಣ್ಣದಾದ ನರಳುವಿಕೆ, ಬಹಳ ಹೊತ್ತ, ಆಕೆಯಲ್ಲುಂಟಾಯಿತು! ಯಾಕೆ ಹೀಗೆ ಎಂದು ಚಿಂತನೆ ನಡೆಸಿದೆ. ಆ ಚಿಂತನೆಯಿಂದ ,ಬಹುಷಃ ನಮ್ಮ ಪೂರ್ವಜರು ಇವಳ ಕೈಯಲ್ಲಿ ತಯಾರಾದ ಊಟ ಬಯಸಿರಬೇಕು! ಅದರಿಂದ ಹೀಗಾಗುತ್ತಿದೆ ಎಂದು ನನಗನಿಸಿತು! ” ಯಾರು ಈ ಆಲೋಚನೆಯಲ್ಲಿದ್ದೀರೋ , ಮುಂದಿನ ಭಾನುವಾರ ನಿಮಗೆಲ್ಲರಿಗೂ ಅವಳಿಂದಲೇ ತಯಾರಾದ ಊಟ ಬಡಿಸಲಾಗುವುದು.ಅದುವೇ ಆದಲ್ಲಿ, ತಕ್ಷಣ ಇದನ್ನು ನಿಲ್ಲಿಸಿ” ಎಂದು ಪ್ರಾರ್ಥಿಸಿಕೊಂಡೆ” ಇದಾದ ಕೆಲವೇ ಸಮಯದಲ್ಲಿ ಏನೂ ಆಗದವಳಂತೆ ಮಾಮೂಲಾದಳು!!

ನಂತರದ ಭಾನುವಾರ ಅಡುಗೆ ಮಾಡಿ ಬಡಿಸಿ ,ಸ್ವೀಕರಿಸುವಂತೆ ಪ್ರಾರ್ಥಿಸಿದ್ದೆವು. ಇದೇರೀತಿ ಇನ್ನೊಮ್ಮೆ ದೈವಾರಾಧನೆಯ ವಿಷಯದಲ್ಲೂ ಹೀಗೆ ಆಗಿತ್ತು!

ಆಕೆಯ ಆರೋಗ್ಯದ ಹಿನ್ನೆಲೆ: ಥೈರಾಯಿಡ್, ಬಿಪಿ ಮತ್ತು ಶುಗರ್ ಸಮಸ್ಯೆಯ ಜೊತೆಗೆ ಆಂಜಿಯೋ ಚಿಕಿತ್ಸೆಗೆ ಒಳಗಾಗಿದ್ದು, ಮೇಲಿನ ಎಲ್ಲ ಕಾಯಿಲೆಗಳಿಗೂ ದಿನ ಬೆಳಿಗ್ಗೆ- ರಾತ್ರಿ ಒಟ್ಟು 6-7 ಮಾತ್ರೆಗಳನ್ನು ನಿಯಮಿತವಾಗಿ ತೆಗೆದು ಕೊಳ್ಳುತ್ತಿದ್ದಳು. ಹಾಗಾಗಿ ಈ ಸಮಸ್ಯೆಗಳಿಂದ ಅವಳ ಆರೋಗ್ಯದಲ್ಲಿ ಯಾವುದೇ ಏರುಪೇರುಗಳಿರಲಿಲ್ಲ ಮತ್ತು ಚೆನ್ನಾಗಿದ್ದಳು. 

ಧಾರ್ಮಿಕ ವಿಚಾರ:-ಎಲ್ಲಾ ವಿಷಯಗಳಲ್ಲೂ ಶ್ರದ್ಧಾ ಭಕ್ತಿಯ ನಿರ್ವಹಣೆ ಆಕೆಯದಾಗಿತ್ತು. ದೇವರ ಮುಂದೆ ಘಂಟೆಗಟ್ಟಳೆ ಕುಳಿತು ಆಡಂಬರ ಮಾಡುತ್ತಿರಲಿಲ್ಲ. ಮದುವೆಯಾದ ಮೇಲೆ ನೌಕರಿಯ ಎಲ್ಲ ದಿನಗಳಲ್ಲೂ ಬ್ರಾಹ್ಮಣರ ಸಾಂಗತ್ಯದಲ್ಲೇ ಬದುಕಿದವರು ನಾವು. ಹಾಗಾಗಿ ಸಸ್ಯಾಹಾರವೇ ಪ್ರಧಾನ್ಯ. ಹಲವು ಧಾರ್ಮಿಕ ಶಿಸ್ತು ಮತ್ತು, ಅಡುಗೆ ,ಕಲೆ ಬ್ರಾಹ್ಮಣರಿಂದ ಕಲಿತಿದ್ದಳು. ಬೆಳಿಗ್ಗೆ ಶ್ರದ್ಧೆಯಿಂದ ಹೊಸ್ತಿಲ ಪೂಜೆಯಿಂದ ಆರಂಭಿಸಿ ದೇವರ ಪೂಜೆ , ಸಂಜೆ 6 ರೊಳಗೆ ದೇವರಿಗೆ ದೀಪ ಇಡೋದರಲ್ಲಿ ಶ್ರದ್ಧೆಯಿತ್ತು.

ಬಾರಕೂರಿನ ಕುಲದೇವಸ್ಥಾನದಲ್ಲಿ ನಾನು ಶ್ರದ್ಧಾಭಕ್ತಿಯಿಂದ ಓಡಾಡುತ್ತಿದ್ದಾಗ, ಒಮ್ಮೆ ನೀವೊಬ್ಬರೇ ಯಾಕೆ ಓಡಾಡೋದು ಬೇರಾರೂ ಇಲ್ಲವೇ ಎಂದಿದ್ದಳು . ತಿಳಿಹೇಳಿದ ಮೇಲೆ , ಅರ್ಥೈಸಿಕೊಂಡಿದ್ದಳು. ಜೀರ್ಣೋದ್ಧಾರ ಪೂರ್ವ ಮತ್ತು ಜೀರ್ಣೋದ್ಧಾರದ ನಂತರ ಒಟ್ಟು 10 ವರ್ಷ ನಾನು ಮೊಕ್ತೇಸರನಾಗಿದ್ದೆ. ಆಗ ಎಲ್ಲಾ ಪೂಜಾ ಕಾರ್ಯದಲ್ಲೂ ನನ್ನೊಂದಿಗೆ ಅವಳೂ ಭಾಗಿಯಾಗಬೇಕಿತ್ತು. ಅದರಿಂದ ಅವಳಲ್ಲಿ ದೈವ ಭಕ್ತಿ ಹೆಚ್ಚಾಯಿತು. ಇತ್ತೀಚೆಗೆ ಮಂಡಿ, ನೋವು ಇಳಿ ವಯಸ್ಸು , ಹೀಗೆ ಬಸ್ಸಲ್ಲಿ ಓಡಾಡುವುದು ಕಷ್ಟವಾದ ಕಾರಣ ಮತ್ತು ಬಹಳ ಬೇಗ ಮನೆಯಿಂದ ಹೊರಟು ತಡವಾಗಿ ಮನೆಗೆ ಬರಬೇಕಾದ ಕಾರಣ ತಾನು ಮನೆಯಲ್ಲೇ ಇದ್ದು ನನಗೆ ತಯಾರಿ ಮಾಡಿ, ತೊಂದರೆಯಾಗದಂತೆ ನನ್ನನ್ನು ಕಳುಹಿಸಿ ಕೊಡುತ್ತಿದ್ದಳು

ಕಳೆದ 2-3 ವರ್ಷದಿಂದ ಹೊರಗಡೆ ಎಲ್ಲೂ ಹೋಗುವುದಾಗಲಿ, ಊಟೋಪಚಾರದ ವಿಷಯದಲ್ಲೂ ಹೆಚ್ಚುಆಸಕ್ತಿ ತೋರುತ್ತಿರಲಿಲ್ಲ. ಭಾಗವಹಿಸಲೇ ಬೇಕಾಗಿದ್ದ ,ಒಂದೇ ದಿನದ 2-3 ಕಾರ್ಯಕ್ರಮವಿದ್ದಾಗಲೂ ಅಕ್ಕಪಕ್ಕದಲ್ಲಿ ನಡೆಯುವ ಕಾರ್ಯಕ್ರಮಕ್ಕೂ ಅವಳು ಹೋಗಲೊಪ್ಪುತ್ತಿರಲಿಲ್ಲ!!!

ನಮ್ಮ ಮಗ ಮೂರನೆಯವನು. ಅವನು ಅಮೇರಿಕದಲ್ಲಿದ್ದಾನೆ. ಇಬ್ಬರು ಪುತ್ರಿಯರ ಕುಟಂಬ ಅವನದ್ದು. ಇಬ್ಬರು ಮೊಮ್ಮಕ್ಕಳ ಜನನ ಸಮಯದಲ್ಲೂ ಆರು ತಿಂಗಳಿಗೊಮ್ಮೆ ಒಬ್ಬರಾದ ಮೇಲೆ ಇನ್ನೊಬ್ಬರಂತೆ, ನಾವು ಮತ್ತು ನಮ್ಮ ಬೀಗರೂ ನಾಲ್ಕುಸಾರಿ ಅಲ್ಲಿಗೆ ಹೋಗಿ ಮೊಮ್ಮಕ್ಕಳನ್ನು ಆರೈಕೆ ಮಾಡಿ ಬಂದಿದ್ದೆವು.

ಈ ವರ್ಷ (2023) ಅಲ್ಲಿ ಸ್ವಂತ ಮನೆ ಮಾಡಿದ ಮಗ ನಮ್ಮನ್ನು ಅಲ್ಲಿಗೆ ಬರುವಂತೆ ಕರೆದಿದ್ದ. ಕೆಲಸವಿಲ್ಲದೆ ತಿರುಗುವ ಆಸಕ್ತಿ ಇಲ್ಲದ ನಾನು, ಅವರನ್ನೇ ಇಲ್ಲಿಗೆ ಬರ ಹೇಳಿದ್ದೆ.ಈ ಸಮಯ ನಾನೊಂದು ಸಂದೇಶ ಕಳುಹಿಸಿ , “ನೀನು ಊರಿಗೆ ಬಾರದೆ ಹತ್ತು ವರ್ಷಕಳೆದಿದೆ. ವೀಸಾ ಸಮಸ್ಯೆ ಇದ್ದುದು ಈಗ ಸರಿಯಾಗಿದೆಯಲ್ಲ. ನಮಗೀಗ ವಯಸ್ಸಾಯಿತು, ( ನನಗೆ 75 ಪತ್ನಿಗೆ 72) ಇನ್ನೆಷ್ಟು ದಿನ ಇರುವೆವೋ ತಿಳಿಯದು. ನೀನು ಕುಟುಂಬ ಸಹಿತ ಇಲ್ಲಿಗೆ ಬಾ, ಹಾಗೆ ಬಂದದ್ದೇ ಆದರೆ ಅಕ್ಕಂದಿರನ್ನೂ ಅವರ ಮಕ್ಕಳು ಮತ್ತು ಬಂಧು ಬಳಗವನ್ನೆಲ್ಲ ನೋಡಬಹುದು. ಕುಲದೇವರ ಮತ್ತು ಆರಾಧ್ಯ ದೈವಗಳ ಸೇವೆಯನ್ನೂ ನೆರವೇರಿಸಬಹುದು. ಈ ಎರಡೂ ಕೆಲಸ ಆಗಾಗ್ಗೆ ತಪ್ಪದೆ ಮಾಡಬೇಕು ಎಂದು ತಿಳಿಸಿದ್ದೆ.” ಈ ನನ್ನ ಸಲಹೆ ಅರ್ಥಮಾಡಿಕೊಂಡು, ಅವನು, ಮಕ್ಕಳ ಶಾಲಾ ರಜೆ ಸಮಯದಲ್ಲಿ ಒಂದೂವರೆ ತಿಂಗಳ ರಜೆ ಮಾಡಿ , ಇದರಲ್ಲಿ ಕೊನೆಯ 15 ದಿನ ಮನೆಯಲ್ಲೇ ಕೆಲಸ ಮಾಡುವ ಆಧಾರದಲ್ಲಿ 28-6-23 ರಂದು ಊರಿಗೆ ಬಂದಿದ್ದ. ಊರಿಗೆ ಬಂದವರು, ಸೂರತ್ ನ ಮಾವನ ಮನೆಗೆ, ಮುಂಬೈಯಲ್ಲಿರು ಬಾವನ ಮನೆ, ದೆಹಲಿ ಆಗ್ರ , ಗೋವ ಹೀಗೆ ಮಕ್ಕಳನ್ನೆಲ್ಲ ಸುತ್ತಾಡಿಸಿ ಸುರತ್ಕಲ್ ಗೆ ಹಿಂದಿರುಗಿದ್ದರು. ಒಂದು ವಾರ ಮನೆಯಲ್ಲೇ ಕೆಲಸ ನಿರ್ವಹಿಸಿ, ಶನಿವಾರ ಸಾಲಿಕೇರಿಯಲ್ಲಿಯ ದೊಡ್ಡ ಅಕ್ಕನ ಮನೆ, ಮಂದರ್ತಿ ಸಮೀಪದ ದೈವ ಮತ್ತು ಬಾರಕೂರಿನ ಕುಲದೇವಸ್ಥಾನಗಳಿಗೆ ಹೋಗಿ ಆರಾಧನೆ ನೆರವೇರಿಸಿ ಬಂದಿದ್ದರು.

ಮತ್ತೊಂದು ಶನಿವಾರ, ಶಿರಸಿಯಲ್ಲಿಯ ಎರಡನೆ ಅಕ್ಕನ ಬೇಟಿಗೆ ಕಾರ್ ಗೊತ್ತು ಮಾಡಿ , ಶುಕ್ರವಾರ 28-7-23 ಎಲ್ಲ ಅಗತ್ಯ ವಸ್ತು ಜೋಡಿಸಿ ಮಲಗುವಾಗ 10 ಘಂಟೆ ಕಳೆದಿದೆ. ನಾನು ಒಂದು ಫೋನ್ ಕರೆ ಆಲಿಸಿ ಮಲಗುವಾಗ 11 ಕಳೆದಿದೆ. ನನಗೆ ಘಾಡ ನಿದ್ದೆ, ಸುಮಾರು 11-25 ರ ಸಮಯ ಸೊಸೆ ಬಂದು , ಅತ್ತೆಗೆ ಹುಷಾರಿಲ್ಲ ಎಂದು ನನ್ನನು ಎಬ್ಬಿಸಿದಳು.

28-7-23 ರಂದು ರಾತ್ರಿ 11-25 ರ ಸಾಮಾರಿಗೆ ನಿದ್ರೆಯಲ್ಲಿದ್ದ ಪತ್ನಿ ,ಎದ್ದು ಟಾಯ್ ಲೆಟ್ ಗೆ ಹೋಗಿ ಹೊರ ಬಂದವಳು, ಮಗ ಸೊಸೆ ಅಂದಿನ ತಮ್ಮ ಕಛೇರಿ ಕೆಲಸ ಮುಗಿಸಿ ಮೊಬೈಲ್ ನೋಡುತ್ತಿದ್ದುದನ್ನು ಗಮನಿಸಿ ಮಗನಿಗೆ  “ಮಹೇಶ,ನನಗೆ ತುಂಬಾ ಸುಸ್ತಾಗುತ್ತಿದೆ”(ಇದು ಆಕೆಯ ಕೊನೆಯ ಮಾತು) ಎಂದು ಮಗನಿಗೆ ಹೇಳಿ , ಹಾಲ್ ಗೆ ಬಂದಳಂತೆ. ಮಗ ಬಂದು ಲೈಟ್ ಹಾಕಿದಾಗ ಅಲ್ಲೇ ಖುರ್ಚಿಯಲ್ಲಿ ಕುಳಿತಳು. ಮಗ ಕುಡಿಯಲು ನೀರು ಕೊಟ್ಟಿದ್ದಾನೆ (ಮರಣಿಸಿದ ಮೇಲೆ ನೀರು ಬಿಡುವ ಕ್ರಮವಿದೆ. ಆದರೆ ಅದು ಕುಡಿಯಲಾಗದು.ಇಲ್ಲಿ ‘ಮಗ ಮತ್ತು ತಾಯಿಯ ಸೌಭಾಗ್ಯ’ ಅಂತಿಮ ಯಾತ್ರೆಯಲ್ಲಿರುವ ತಾಯಿಗೆ ನೀರು ಕೊಟ್ಟಿದ್ದಾನೆ ) ಮುಂಬಾಗಿಲು ತೆರೆದು, ಹೊರಗಡೆ ಗಾಳಿ ಇದೆ , ಅಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದಾನೆ. ನಂತರ ಮಗ ವೈದ್ಯರಲ್ಲಿ ಹೋಗಲು ಅಂಬುಲೇನ್ಸ್ ಗಾಗಿ ಫೋನ್ ಮಾಡತೊಡಗಿದ್ದ. ಸೊಸೆ ಯೂ ಗಾಬರಿಯಿಂದ ಫೋನ್ ಮಾಡುತ್ತಿದ್ದಳಂತೆ. ಆಗ ನಾನು ಅಲ್ಲಿರದುದನ್ನು ಗಮನಿಸಿದ ಪತ್ನಿ , ನಮ್ಮ ಮಲಗುವ ಕೊಠಡಿ ಕಡೆ ಇಣುಕಿ ನೋಡಿದ್ದಾಳೆ. ಇದನ್ನು ಗಮನಿಸಿದ ಸೊಸೆ, ಬಂದು ನನ್ನನ್ನು ಎಬ್ಬಿಸಿದಳು. ನಾನು ಬಂದದ್ದು ನೋಡಿ ಹೊರಗಿದ್ದವಳು ಮನೆಯೊಳಗೆ ಬಂದು ಖುರ್ಚಿಯಲ್ಲಿ ಕುಳಿತಳು. ಅವಳು ಕಳಿತ ಕುರ್ಚಿಯ ಮುಂದೆ ಮಗ, ಸೊಸೆ ಮತ್ತು ನಾನು ಮೂರು ಜನ ಇದ್ದೇವೆ. ಆ ಸಮಯ ತನ್ನೆರಡೂ ಕೈಗಳನ್ನು ಮೇಲೆ- ಕೆಳಗೆ 3-4 ಸಾರಿ ಬೀಸಿದಳು. ಅವಳ ದೃಷ್ಟಿ ಎತ್ತಲೋ ಇದ್ದುದನ್ನು ಗಮನಿಸಿದೆ. ಮುಖದಲ್ಲಿ ಯಾವುದೇ ನೋವು ಅನುಭವಿಸುತ್ತಿರುವಂತೆ ಕಾಣುತ್ತಿರಲಿಲ್ಲ, ಪ್ರಶಾಂತವಾಗಿದ್ದಂತೆ ಕಂಡಿತು. ಈ ರೀತಿ 3-4 ಸಾರಿ ಕೈ ಬೀಸಿ, ನಮ್ಮ ಪ್ರತಿಕ್ರಿಯೆಯಲ್ಲದ್ದನ್ನು ಗಮನಿಸಿದ ಆಕೆ, ಮುಂದೆ ಇದ್ದ ಸ್ಟೂಲ್ ವರೆಗೆ ತಲೆ ಭಾಗಿಸಿ ನಂತರ ನೇರವಾಗಿ ಕುಳಿತಳು  ತಲೆ ಎಡಭಾಗಕ್ಕೆ ವಾಲಿತು! ನಾಲಿಗೆ ಹೊರಚಾಚಿತು. ಹಾಗೂ ಪ್ರಾಣ ಪ್ರಯಾಣ ಬೆಳೆಸಿತು!.

ಆರಂಭದಲ್ಲಿ ಇವಳ ಈ ನಡೆ ಗಮನಿಸಿದ ನಾನು, ಮೇಲೆ ತಿಳಿಸಿದ ” ಘಟನೆ ” ಸಂದರ್ಭದ ಕಡೆ ನನ್ನ ಚಿಂತನೆ ನಡೆದಿದ್ದು ಯಾಕಾಗಿ ಈ ರೀತಿ ಮಾಡುತ್ತಿರಬಹುದು ಎಂದು ಯೋಚಿಸುತ್ತಿದ್ದೆ. ನಾಲಿಗೆ ಹೊರಚಾಚಿದ ತಕ್ಷಣ, ನಾನು ವಾಸ್ತವಕ್ಕೆ ಬಂದು ಗಾಬರಿಯಿಂದ ಅವಳ ಎದೆಯನ್ನು 4-5 ಸಾರಿ ಒತ್ತಿ ಪ್ರಥಮ ಚಿಕಿತ್ಸೆಗೆ ಪ್ರಯತ್ನಿಸಿದೆ. ಆದರೆ ಉಸಿರಾಟ ನಿಂತಂತೆ ಕಾಣಿಸಿತು!! ನಾಡಿ ನೋಡಿದರೆ ಅದರ ಚಲನೆಯೂ ಗುರುತಿಸಲಾಗಲಿಲ್ಲ!!!

ಕಾರಣವೇನೋ ಊಹಿಸಲಾಗದು!! ಅವಳು ನಿದ್ರೆಯಿಂದೆದ್ದು ಟಾಯ್ಲೆಟ್ ಗೆ ( ಬಯದ ಸಮಯದಲ್ಲಿ ಹೀಗೆ ಹೋಗುತ್ತಿದ್ದಳು) ಹೋಗಿದ್ದಾಳೆ. ಎಚ್ಚರವಿದ್ದ ಮಗನಿಗೆ ತನ್ನ ತೊಂದರೆ ಹೇಳಿದವಳು ಹಾಲ್ ನಲ್ಲಿ ಕುಳಿತಳು ಹಾಗೂ ಗಾಳಿ ಹಾಕಿಕೊಳ್ಳತೊಡಗಿದಳಂತೆ. ಆಗ ಮಗ ಕುಡಿಯಲು ನೀರು ಕೊಟ್ಟಿದ್ದಾನೆ. ಹೊರಗಡೆ ಗಾಳಿ ಇದೆ ಎಂದು ,ಮುಂದಿನ ಭಾಗಿಲು ತೆಗೆದು , ಸಿಟ್ ಔಟ್ ಗೆ ಹೋಗಿ ಕುಳಿತುಕೊಳ್ಳಲು ಹೇಳಿದ್ದಾನೆ. ಅಲ್ಲಿ ಕುಳಿತವಳು ನನ್ನನ್ನು ನಿರೀಕ್ಷಿಸಿ ನಮ್ಮ ಕೊಠಡಿ ಕಡೆ ಬಗ್ಗಿ ನೋಡಿದ್ದಾಳೆ. ಆ ವೇಳೆ ಅವಳು ಮಾತನಾಡುವ ಮತ್ತು ಗ್ರಹಣ ಶಕ್ತಿ ಕಳಕೊಂಡಿದ್ದಾಳೆ . ನಾನು ಬಂದದ್ದನು ನೋಡಿ ಮುಂಭಾಗದ ರೂಂ, ಒಳಗೆ ಬಂದು ಕುಳಿತವಳು ಎರಡೂ ಕೈಗಳನ್ನು ಮೇಲೆ ಕೆಳಗೆ , 4-5 ಸಾರಿ ಬೀಸಿದ್ದಾಳೆ! ಆಗ ಅವಳ ದೃಷ್ಟಿ ಸಹ ಹೋಗಿದೆ (ಸ್ಥಗಿತಗೊಂಡಿದೆ). ನಾವು ( ಮಗ ಸೊಸೆ ಮತ್ತು ನಾನು) ಹತ್ತಿರ ಬರುವಂತೆ ಆ ರೀತಿ ಮಾಡಿ, ಆಲಂಗಿಸಲು ಕರೆದಿರಬೇಕು! ಆ ಕರೆಗೆ ಅರ್ಥೈಸಿಕೊಳ್ಳದ ನಾವು ಹತ್ತಿರ ಹೋಗದುದನ್ನು ಗಮನಿಸಿ, ಕೊನೆಯಲ್ಲಿ ದೇಹ ಭಾಗಿಸಿರೋದು, ತನ್ನ ಅಂತಿಮ ನಮನ ತಿಳಿಸಲು!! ಆನಂತರ ಸರಿಯಾಗಿ ಕುಳಿತವಳು ನಾಲಿಗೆ ಹೊರಚಾಚಿ, “ಆತ್ಮ” ದೇಹದಿಂದ ಬೇರ್ಪಟ್ಟು ಪರಮಾತ್ಮ ನೊಂದಿಗೆ ಸೇರಲು ಪ್ರಯಾಣ ಬೆಳೆಸಿದೆ!! 

ಈ ರೀತಿ ತನ್ನ ಜೀವನ ಪ್ರಯಾಣವನ್ನು 72 ವರ್ಷ 6 ದಿನಗಳಲ್ಲೇ ಪೂರೈಸಿ ಅನಾಯಸೇನ ಮರಣಂ ಎಂಬಂತೆ 4-5 ನಿಮಿಷದಲ್ಲಿ ತನ್ನ ಆಯುಷ್ಯ ಯಾತ್ರೆಯ ಹೋರಾಟ ಪೂರೈಸಿದ ಅದೃಷ್ಟವಂತೆ!. ಬಿನಾ ದೈನ್ಯೇನ ಜೀವನಂ ಎನ್ನುವಂತೆ, ಬದುಕಿದ್ದವಳು. ಎಂದೂ ನನ್ನ ಊಟಕ್ಕೇನು? ಎಂಬ ಚಿಂತೆಯಿಲ್ಲದಂತೆ ನೆರವೇರಿಸಿ ಕೊಟ್ಟಿದ್ದಾಳೆ. ಹಾಗಾಗಿ ನಾನೆಂದೂ ಒಲೆ ಹಚ್ಚುವ ಕಾಯಕ ಮಾಡಿಲ್ಲ! ಅವಳು, ತನ್ನ ಮಕ್ಕಳಿಂದಲೂ ಎಂದೂ ಆರೈಕೆ ಮಾಡಿಸಿಕೊಂಡಿಲ್ಲ!! ” ಬಿನಾ ದೈನ್ಯೇನ ಜೀವನಂ ” ಎಂದರೆ ಇದಲ್ಲವೇ ?.

ಉಳಿದಿರೋದು “ದೇಹಾಂತ ತವ ಸಾನಿಧ್ಯಂ” ಈ ಬೇಡಿಕೆಗಾಗಿಯೇ ಗೋಕರ್ಣದಲ್ಲಿ ನಾಲ್ಕುದಿನ ವಿದ್ದು , ಅಸ್ತಿಯನ್ನು ಕೋಟಿ ತೀರ್ಥದಲ್ಲಿ ಶುಧ್ದೀಕರಿಸಿ, ಪಿಂಡದಾನ ಮಾಡಿ ಮಹಾಬಲೇಶ್ವರ ವಠಾರದಲ್ಲಿಯ ಭದ್ರಕಾಳಿ ಎದುರಿನ ತಾಮ್ರ ಪರ್ಣಿಯಲ್ಲಿ ವಿಸರ್ಜಿಸಿ ಅಂತ್ಯವಿಧಿಗಳನ್ನು, ಮಗ ಶ್ರದ್ಧಾ ಭಕ್ತಿಯಿಂದ ನೆರವೇರಿಸಿಕೊಟ್ಟಿದ್ದಾನೆ.

ವಿವಾಹ ಪೂರ್ವದಲ್ಲಿ ತನ್ನ ತಂದೆ ತಾಯಿ, ಮೂವರು ಸಹೋದರಿಯರ , ಸಂಸಾರ ತೂಗಿಸಲು, ತನ್ನ ವಿದ್ಯಾಭ್ಯಾಸವನ್ನು ತ್ಯಾಗಮಾಡಿ, ಅಣ್ಣನೊಂದಿಗೆ ಕೈ ಜೋಡಿಸಿ ಹಗಲು ರಾತ್ರಿಯೆನ್ನದೇ ದುಡಿದಿದ್ದಾಳೆ. ಆ ವಿಷಯವನ್ನೊಮ್ಮೆ ಬಾವ ಪದ್ಮನಾಭ ರವರು ನನ್ನಲ್ಲಿ ವ್ಯಕ್ತಪಡಿಸಿದ್ದರು. ಅವರಿಂದ ನಾನು, ಅವರಿಂದ ನಿವೇಶನ ಪಡೆವಾಗ, ಅದಕ್ಕಾಗಿಯೇ ತಾನು ಅನ್ಯರಿಂದ ಪಡೆದ ಮೌಲ್ಯದ ಅರ್ಧ ಬೆಲೆ ಮಾತ್ರ ನನ್ನಿಂದ ಪಡೆದಿರೋದು. ಸಹೋದರಿಯ ಹಿಂದಿನ ಸಹಕಾರಕ್ಕಾಗಿ. ಈ ರೀತಿಯ ಬದುಕು ಆಕೆಯದಾಗಿತ್ತು. ಇದರಿಂದ ತಾನು ಪ್ರಾಥಮಿಕ ಶಿಕ್ಷಣವಷ್ಟೇ ಪೂರೈಸಿ ,ತನ್ನ ಮೂವರು ಸಹೋದರಿಯರೂ ಹೆಚ್ಚು ವಿದ್ಯಾವಂತರಾಗಲು ನೆರವಾಗಿದ್ದಳು.

ಸಜ್ಜನರ ಸಂಘವದು ಹೆಜ್ಜೇನ ಸವಿದಂತೆ”ಎಂಬ ಕವಿವಾಣಿಯಂತೆ ನನ್ನ ಜೀವನಕ್ಕೆ ಮೆರಗು ಕೊಟ್ಟವಳು . ಎರಡು ಕಂದಮ್ಮಗಳನ್ನು ಪಡೆದು ಕನ್ಯಾದಾನದ ಪುಣ್ಯದ ಜೊತೆಗೆ ಇನ್ನೆರಡು ಅನ್ಯ- ಕನ್ಯಾದಾನ ಮಾಡಿರೋದು ನಮ್ಮ ಜೀವನದ ಸೌಭಾಗ್ಯವೇ ಸರಿ.

ಮತ್ತೈದೆಯಾಗಿ ಜೀವನ ಯಾತ್ರೆ ಪೂರೈಸಿದಳು. ಆ ಯಾತ್ರೆಯ ನೆನಪೇ ಈಗ ನನ್ನ ಜೀವನದ ಉಸಿರಾಗಿದೆ. ಆದರೆ ಆಕೆಯ ಅಂತಿಮ ಕ್ಷಣ ನೆನೆಸಿಕೊಂಡಾಗ, ಆಕೆಯ ಕೊನೆಯ ಸಮಯದಲ್ಲಿ ,ಆಕೆಯ ಚಲನೆಯನ್ನು ಅರ್ಥಮಾಡಿಕೊಳ್ಳಲಾಗಲಿಲ್ಲವಲ್ಲ! ಎಂದು ಭಾವುಕನಾಗುವ ಸ್ಥಿತಿ ಇದೀಗ ನನ್ನದಾಗಿದೆ. ನೆನಪಾದಾಗ ಕೆಲವೊಮ್ಮೆ ಇದನ್ನು ನಿಯಂತ್ತಿಸಲೂ ಆಗುತ್ತಿಲ್ಲ!!

ನೋವಿಲ್ಲದ ಅಂತಿಮ ಯಾತ್ರೆ ಪೂರೈಸಿದ ಅವಳ ದಿವ್ಯಾತ್ಮವು ಸದ್ಗತಿ ಪಡೆಯಲಿ ಎಂಬ ಹಾರೈಕೆ ಬಿಟ್ಟು ,ನಾನು ಈಗ ಬೇರೇನು ಹೇಳಲು ಸಾದ್ಯ!!!

(ಈ ಲೇಖನ ಬರೆದ ನಂತರ ಮರು ಪರಿಶೀಲನೆಯ ಸಮಯ ,  ಸಹಜ ಮರಣ ಹೇಗಾಗುತ್ತದೆ  ಎಂದು google ನಲ್ಲಿ ಹುಡಾಕಾಡಿದೆ. ಗರುಡ ಪುರಾಣದಲ್ಲಿಯ ಈ ಮುಂದಿನ ಮಾಹಿತಿ ದೊರೆಯಿತು! ವಾಚಕರ ಅವಗಾಹನೆಗಾಗಿ:- ಗರುಡ ಪುರಾಣದ (Garuda Purana) ಪ್ರಕಾರ, ಒಬ್ಬ ವ್ಯಕ್ತಿಯ ಮರಣದ ಸಮಯ ಹತ್ತಿರದಲ್ಲಿದ್ದಾಗ, ಬಂದ ಯಮದೂತರು ಅವನಿಗೆ ಕಾಣಿಸಿಕೊಳ್ಳುತ್ತಾರೆ. ಆಗ ಬಯಭೀತರಾಗುತ್ತಾರೆ. ಕೆಲವರು ಬೊಬ್ಬೆ ಹೊಡೆಯುತ್ತಾರೆ. ಮುಂದೆ ಒಂದೊಂದೇ ಅಂಗ ತನ್ನ ಕೆಲಸ ನಿಲ್ಲಿಸುತ್ತದೆ. ಅವನು ಬಯಸಿದರೂ ಏನನ್ನೂ ಮಾತನಾಡಲು ಸಾಧ್ಯವಾಗುವುದಿಲ್ಲ. ಅವನ ಮಾತನಾಡುವ ಮತ್ತು ಕೇಳುವ ಸಾಮರ್ಥ್ಯ ಕಳೆದುಹೋಗುತ್ತದೆ. ಅವನು ಯಮದೂತರನ್ನು ಕಂಡು ತುಂಬಾ ಹೆದರುತ್ತಾನೆ. ಅವನ ಸುತ್ತಲೂ ನಿಂತಿರುವ ಸಂಬಂಧಿಕರನ್ನು ಅವನು ನೋಡುವುದಿಲ್ಲ. ದೃಷ್ಟಿಯೂ ಸ್ಥಗಿತವಾಗುತ್ತದೆ. ವ್ಯಕ್ತಿಯ ದೇಹದಿಂದ ಆತ್ಮ ಹೊರಬಂದ ನಂತರ, ಯಮದೂತರು ಅದನ್ನು ಯಮಲೋಕಕ್ಕೆ ಕೊಂಡೊಯ್ಯುತ್ತಾರೆ.

ಸಹಜ ಮರಣದಲ್ಲಿ ವೈವಿದ್ಯತೆಯಿರಬಹುದು. ನೋಡಿದವರು- ತಿಳಿದವರು ಈ ಪತ್ರಿಕೆಯಲ್ಲೇ ತಿಳಿಸಲಿ ಎಂದು ಆಶಿಸುತ್ತೇನೆ.

ಗೋಪಾಲ ಎಚ್.ಎ.ಸುರತ್ಕಲ್,   9845800180

 

Related Articles

Back to top button