ಇತರೆ

ಖಾಸಗಿ ಕ್ಷಣದ ವಿಡಿಯೊ ರೆಕಾರ್ಡ್ ಮಾಡಿ ಉಪನ್ಯಾಸಕನ ಸೋಗಿನಲ್ಲಿ ಒಂಟಿ ಮಹಿಳೆಗೆ ಲೈಂಗಿಕ ಕಿರುಕುಳ: ಸೆರೆ

Views: 145

ಕನ್ನಡ ಕರಾವಳಿ ಸುದ್ದಿ: ಪತಿಯಿಂದ ದೂರವಾಗಿದ್ದ ಮಹಿಳೆಗೆ ತಾನು ಉಪನ್ಯಾಸಕ ಎಂದು ಪರಿಚಯಿಸಿಕೊಂಡು ಕಾಲಕ್ರಮೇಣ ದೈಹಿಕ ಸಂಬಂಧ ಬೆಳೆಸಿ, ರಹಸ್ಯವಾಗಿ ವಿಡಿಯೊ ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪದಡಿ ಓರ್ವನನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

43 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಹನಿಯೂರಿನ ಚಂದ್ರೇಗೌಡ ಎಂಬಾತನನ್ನು ಬಂಧಿಸಲಾಗಿದೆ. ಈತ ರಾಮನಗರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರು: ನಾನು ವೃತ್ತಿಯಲ್ಲಿ ಮೇಕಪ್ ಕಲಾವಿದೆ. ನನಗೆ ಓರ್ವ ಮಗಳಿದ್ದಾಳೆ. ವೈಯಕ್ತಿಕ ಕಾರಣಕ್ಕಾಗಿ ಪತಿಯಿಂದ ದೂರವಾಗಿದ್ದೇನೆ. 2021ರಲ್ಲಿ ಪರಿಚಯವಾಗಿದ್ದ ಆರೋಪಿ, ತಾನು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಮೇಕಪ್ ಕೆಲಸವಿದ್ದರೆ ನಿಮ್ಮನ್ನು ಸಂಪರ್ಕಿಸುವುದಾಗಿ ನನ್ನ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ಕಾಲಕ್ರಮೇಣ ನನ್ನ ಮನೆಗೆ ಬಂದು ಹೋಗುತ್ತಿದ್ದ. ನಾನು ಉಪನ್ಯಾಸಕನಾಗಿದ್ದು ಕೈ ತುಂಬಾ ಸಂಬಳ ಬರುತ್ತಿದೆ. ಅಲ್ಲದೆ ನಾನೂ ಸಹ ಮದುವೆಯಾಗಿ ವಿಚ್ಚೇದನ ಪಡೆದಿದ್ದೇನೆ ಎಂದು ನಂಬಿಸಿ ನನ್ನನ್ನು ವಿವಾಹವಾಗುವಂತೆ ನಿವೇದಿಸಿಕೊಂಡಿದ್ದ. ಆಗಾಗ ನನ್ನ ಮನೆಗೆ ಬಂದು ಹೋಗುತ್ತಿದ್ದ. ನನ್ನೊಂದಿಗೆ ದೈಹಿಕ ಸಂಪರ್ಕವನ್ನೂ ಹೊಂದಿದ್ದ. ಬಳಿಕ ನಿನ್ನೊಂದಿಗೆ ಕಳೆದಿರುವ ಖಾಸಗಿ ಕ್ಷಣಗಳನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಹೇಳಿದಂತೆ ಕೇಳದಿದ್ದರೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಲು ಶುರು ಮಾಡಿದ್ದಾನೆ.

ಆರೋಪಿಯ ಮೊಬೈಲ್ ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಲಾಗಿದೆ. ಮೊಬೈಲ್‌ನಲ್ಲಿ 20ಕ್ಕೂ ಹೆಚ್ಚು ಮಹಿಳೆಯರ ಫೋಟೊಗಳು-ವಿಡಿಯೊ ಸಿಕ್ಕಿವೆ. ಕೆಲವು ಧಾರಾವಾಹಿಗಳಲ್ಲೂ ಚಂದ್ರೇಗೌಡ ನಟಿಸಿದ್ದರು. ಅಲ್ಲದೇ ಪತ್ರಕರ್ತ, ಉಪನ್ಯಾಸಕ, ಜಾನಪದ, ಬುಡಕಟ್ಟು ಸಂಶೋಧಕನಾಗಿ ಕೆಲಸ ಮಾಡುತ್ತಿದ್ದೇನೆ ಎಂಬುದಾಗಿ ಬಿಂಬಿಸಿಕೊಂಡಿದ್ದರು. ನಕಲಿ ಗುರುತಿನ ಚೀಟಿ ಮಾಡಿಕೊಂಡು ಹಲವರಿಗೆ ಬೆದರಿಕೆ ಹಾಕಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

Related Articles

Back to top button
error: Content is protected !!