ಕುಂದಾಪುರ: ನೇರಳಕಟ್ಟೆಯಲ್ಲಿ ಮನೆಕಳ್ಳತನ ಪ್ರಕರಣ; ಆರೋಪಿಗಳಿಂದ 11ಲಕ್ಷ ರೂ.ಮೌಲ್ಯದ ಚಿನ್ನ-ಬೆಳ್ಳಿ ವಶಕ್ಕೆ
Views: 761
ಕನ್ನಡ ಕರಾವಳಿ ಸುದ್ದಿ : ಕರ್ಕುಂಜೆ ಗ್ರಾಮದ ನೇರಳಕಟ್ಟೆಯ ಮನೆಯಲ್ಲಿ ನಡೆದಿದ್ದ ಮನೆಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಮೇ 23ರಂದು ನಿರಂಜನ್ ಭಟ್ ಅವರ ಮನೆಯ ಬಾಗಿಲಿನ ಬೀಗ ಒಡೆದು ಕಳ್ಳರು ಚಿನ್ನ, ಬೆಳ್ಳಿ ಹಾಗೂ ನಗದು ಕಳವು ಮಾಡಿದ್ದರು. ಈ ಸಂಬಂಧ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಹಾಗೂ ವೃತ್ತ ನಿರೀಕ್ಷಕ ಸಂತೋಷ್ ಎ. ಕಾಯ್ಕಿಣಿ ನೇತೃತ್ವದ ತಂಡ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬ್ರಹ್ಮಾವರ ತಾಲೂಕಿನ ತಂತ್ರಾಡಿ ಬಾಯರಬೆಟ್ಟು ನಿವಾಸಿ ವಿಜಯ ಶೆಟ್ಟಿ(32) ಹಾಗೂ ಕಾರ್ಕಳ ತಾಲೂಕಿನ ಇಂದಾರು ನಿವಾಸಿ ಅರ್ಜುನ ಪೂಜಾರಿ(29) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳಿಂದ ಒಟ್ಟು ಸುಮಾರು 11 ಲಕ್ಷ ರೂಪಾಯಿ ಮೌಲ್ಯದ 84 ಗ್ರಾಂಕ್ಕೂ ಅಧಿಕ ಚಿನ್ನ ಹಾಗೂ 175 ಗ್ರಾಂ ಬೆಳ್ಳಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಅಶ್ರಫ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.






