ಇತರೆ
ಕುಂದಾಪುರ: ಅಸೋಡು ವಾರಾಹಿ ಕಾಲುವೆಗೆ ಬಿದ್ದ ಬೃಹತ್ ಗಾತ್ರದ ಕಾಡುಕೋಣ ರಕ್ಷಣೆ
Views: 100
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಅಸೋಡು ಶ್ರೀ ಕುಮಾರ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ವಾರಾಹಿ ಕಾಲುವೆಗೆ ಬಿದ್ದಿದ್ದ ಭಾರೀ ಗಾತ್ರದ ಕಾಡುಕೋಣವನ್ನು ಸ್ಥಳೀಯರ ಸಹಕಾರದಿಂದ ಅರಣ್ಯ ಇಲಾಖೆ ಸಿಬಂದಿ ರಕ್ಷಿಸಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ನೀರು ಮತ್ತು ಆಹಾರ ಅರಸಿ ಸಮೀಪದ ಅರಣ್ಯ ಪ್ರದೇಶದಿಂದ ಜನವಸತಿ ಪ್ರದೇಶಕ್ಕೆ ಬಂದಿದ್ದ ಕಾಡುಕೋಣ ಶುಕ್ರವಾರ ಆಕಸ್ಮಿಕವಾಗಿ ಅಸೋಡಿನ ವಾರಾಹಿ ಕಾಲುವೆಗೆ ಬಿದ್ದಿತ್ತು. 20 ತಾಸುಗಳ ಕಾಲ ಕಾಲುವೆಯಲ್ಲಿದ್ದ ಅದು ಕಾಲುವೆಯಿಂದ ಮೇಲಕ್ಕೆ ಬರಲು ಹರಸಾಹಸ ಮಾಡಿದ್ದರೂ ಸಾಧ್ಯವಾಗಿರಲಿಲ್ಲ. ಮಾಹಿತಿ ಪಡೆದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿ, ಸ್ಥಳೀಯರ ಸಹಕಾರದಿಂದ ಶನಿವಾರ ಬೆಳಿಗ್ಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು.


ಕಾಳಾವರ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಮಾರ್ಗದರ್ಶನದಲ್ಲಿ ಉಪ ಅರಣ್ಯಾಧಿಕಾರಿಗಳಾದ ವಿನಯ್, ಗುರುನಾಯ್ಕ, ಸಿಬಂದಿ ಮಾಲತಿ, ರಂಜಿತ್, ಸುನೀಲ್ ಮತ್ತು ಅಶೋಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.






