ಉಡುಪಿ ಜಿಲ್ಲಾಧಿಕಾರಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಅನಾಥೆಗೆ ಕನ್ಯಾದಾನ

Views: 264
ಉಡುಪಿ: ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಪಡೆದುಕೊಂಡಿದ್ದ ಖುಷ್ಬು ಕಳೆದ 15 ವರ್ಷಗಳಿಂದ ಅನಾಥೆಯಾಗಿ ನಿಟ್ಟೂರಿನ ಸುಮೇರಾ (21) ಅವರಿಗೆ ಶುಕ್ರವಾರ ಕಂಕಣ ಭಾಗ್ಯ ನೆರವೇರಿದೆ.
ಜಿಲ್ಲಾಡಳಿತದ ನೇತೃತ್ವದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಮಹಿಳಾ ನಿಲಯದ ಸಹಯೋಗದಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಗಣ್ಯರು ಹಾಗೂ ಮಹಿಳಾ ನಿಲಯದ ಸಹ ನಿವಾಸಿನಿಯರ ಸಮ್ಮುಖದಲ್ಲಿ ಖುಷ್ಬು ಸುಮೇರಾ ಅವರು ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ
ರಾಜಸ್ತಾನದ ಜೋದ್‌ಪುರದವರೆನ್ನಲಾದ ಖುಷ್ಬು ಸುಮೇರಾ ಅನಾಥೆಯಾಗಿ ಆರು ವರ್ಷವಿರುವಾಗ ಬಾಲಮಂದಿರ ಸೇರಿದ್ದು, ಕಳೆದ ಮೂರು ವರ್ಷಗಳಿಂದ ಮಹಿಳಾ ನಿಲಯದಲ್ಲಿ ವಾಸವಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಅಂಬುತೀರ್ಥದ ದಿನೇಶ್ ಎ.ಪಿ. ಅವರ ಪುತ್ರ ಕೃಷಿಕ ಹಾಗೂ ಕೇಟರಿಂಗ್ ಉದ್ಯಮ ನಡೆಸುವ ಮಧುರಾಜ್ ಎ.ಡಿ. (29) ಅವರು ಸಂಪ್ರದಾಯ ರೀತಿಯಲ್ಲಿ ಖುಷ್ಭು ಸುಮೇರಾ ಅವರನ್ನು ವಿವಾಹವಾದರು.
ನಿಟ್ಟೂರಿನಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ವಿವಾಹ ಕಾರ್ಯಕ್ರಮ ನಡೆದಿದ್ದು, ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರು ಶುಭಮುಹೂರ್ತದಲ್ಲಿ ಮುಂದೆ ನಿಂತು ಶಾಸ್ತ್ರೋಕ್ತವಾಗಿ ಕನ್ಯಾದಾನ ಮಾಡಿದರು.
ಎಎಸ್ಪಿ ಟಿ.ಸಿದ್ಧಲಿಂಗಪ್ಪ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುರುಷೋತ್ತಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ಅಧಿಕಾರಿ ವೀಣಾ ವಿವೇಕಾನಂದ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ, ಜಿಲ್ಲಾ ನಿರೂಪಣಾಧಿಕಾರಿ ಅನುರಾಧ ಹಾದಿಮನೆ, ಮಹಿಳಾ ನಿಲಯದ ಅಧೀಕ್ಷಕಿ ಪುಷ್ಪಾರಾಣಿ, ವಿವಿಧ ಮಹಿಳಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಮಾಜ ಸೇವಕರು ಸೇರಿದಂತೆ ನೂರಾರು ಮಂದಿ ನವ ಜೋಡಿಯನ್ನು ಆಶೀರ್ವದಿಸಿದರು.