ಇತರೆ

ಅಧಿಕ ಮಾಸದ ಲೆಕ್ಕಾಚಾರ   

Views: 84

ಭೂಮಿಯು ತನ್ನ ಅಕ್ಷದ ಸುತ್ತ ಚಲಿಸುತ್ತ ಸೂರ್ಯನ ಸುತ್ತ ಸುತ್ತುತ್ತಿರುತ್ತದೆ. ಚಂದ್ರನು ಭೂಮಿಯ ಸುತ್ತ ಸುತ್ತುತ್ತಾನೆ. ಭೂಮಿ ಮತ್ತು ಚಂದ್ರ ಇಬ್ಬರೂ ಸೂರ್ಯನ ಸುತ್ತ ಸುತ್ತು ಬರುತ್ತಿರುತ್ತಾರೆ. ಭೂಮಿ ಚಂದ್ರರ ಚಲನವಲನ ಹಗಲು, ರಾತ್ರಿ, ವಾರ, ಪಕ್ಷ, ಮಾಸ, ವರ್ಷ ಮೊದಲಾದ ಕಾಲಮಾನಗಳಿಗೆ ಕಾರಣವಾಗುತ್ತದೆ. ಈ ಚಲನೆಯ ಸಂಕೀರ್ಣತೆಯಿಂದ ಪರಿಣಮಿಸುವ ಕ್ಲಿಷ್ಟವೆನಿಸುವ ಕಾಲಗಣನೆಯ ಸಮಸ್ಯೆಗಳಿಗೂ ಸರಳ ಪರಿಹಾರಗಳನ್ನು ಕಂಡುಕೊಳ್ಳುವ ಗರಿಮೆ ನಮ್ಮ ಹಿರಿಯರದು.

ಭೂಮಿಯು ಸೂರ್ಯನ ಒಂದು ಸುತ್ತು ಬರುವುದಕ್ಕೆ ತೆಗೆದುಕೊಳ್ಳುವ ಸಮಯ ಒಂದು ವರ್ಷ ಅಥವಾ 365 ದಿವಸಗಳು. ವಾಸ್ತವವಾಗಿ ಇದು ಒಂದು ವರ್ಷಕ್ಕಿಂತಲೂ ಸ್ವಲ್ಪ ಹೆಚ್ಚು. ಅದು 365 ದಿವಸ, 5 ಗಂಟೆ, 48 ನಿಮಿಷ ಮತ್ತು 45 ಸೆಕೆಂಡುಗಳು ಅಥವಾ 365.242188 ದಿವಸಗಳು. ಪ್ರತಿವರ್ಷ ಕಡಿಮೆ ಬೀಳುವ 0.242188 ದಿನವನ್ನು ಸರಿತೂಗಿಸಿಕೊಳ್ಳುವ ಉದ್ದೇಶದಿಂದ 4 ವರ್ಷಗಳ ಕೊನೆಯ ವರ್ಷವನ್ನು 366 ದಿನಗಳನ್ನಾಗಿ ಮಾಡಿ ‘ಅಧಿಕ ವರ್ಷ’ವೆಂದು ಕರೆದು ಆ ವರ್ಷದ ಫೆಬ್ರವರಿ ತಿಂಗಳನ್ನು 29 ದಿನಗಳನ್ನಾಗಿ ಮಾಡಲಾಯಿತು. ಹೀಗೆ 4 ರಿಂದ ಭಾಗಿಸಲ್ಪಡುವ ವರ್ಷಗಳು ಅಧಿಕ ವರ್ಷಗಳಾದವು. ಆದರೆ 4 ವರ್ಷಗಳಿಗೊಮ್ಮೆ ಒಂದು ಇಡೀ ದಿವಸವನ್ನು ಹೆಚ್ಚುವರಿಯಾಗಿ ತೆಗೆದುಕೊಂಡರೂ, ನಿಜವಾಗಿ ಅದು ಒಂದು ಇಡೀ ದಿವಸಕ್ಕಿಂತ ಸ್ವಲ್ಪ ಕಡಿಮೆಯಿರುತ್ತದೆ. ಈ ವ್ಯತ್ಯಾಸವನ್ನು ಸರಿದೂಗಿಸಲು 100 ವರ್ಷಗಳಿಗೊಮ್ಮೆ ಒಂದು ದಿವಸ ಕಡಿಮೆ ಮಾಡಲಾಗುತ್ತದೆ. ಇಲ್ಲಿಯೂ ಉಂಟಾಗುವ ವ್ಯತ್ಯಾಸದ ಕೊರತೆಯನ್ನು ಹೊಂದಾಣಿಕೆ ಮಾಡಿಕೊಳ್ಳಲು 400 ವರ್ಷಗಳಿಗೊಮ್ಮೆ ಒಂದು ದಿವಸ ಸೇರಿಸಿಕೊಳ್ಳಲಾಗುತ್ತದೆ. ಹೀಗೆ 4 ರಿಂದ ನಿಶ್ಶೇಷವಾಗಿ ವಿಭಜಿಸಲ್ಪಡುವ ವರ್ಷಗಳು (ಉದಾ: 4, 8, 12, 2004, 2008 ಇತ್ಯಾದಿ) ಅಧಿಕ ವರ್ಷಗಳಾದರೆ 100 ರಿಂದ ಭಾಗಿಸಲ್ಪಡುವ ವರ್ಷಗಳು (ಉದಾ: 100, 200, 300, 1900, 2100 ಇತ್ಯಾದಿ) ಅಧಿಕ ವರ್ಷಗಳಲ್ಲ. ಆದರೆ 400 ರಿಂದ ವಿಭಜಿತವಾಗುವ ವರ್ಷಗಳು (ಉದಾ: 400, 800, 1200, 1600, 2000 ಇತ್ಯಾದಿ) ಮತ್ತೆ ಅಧಿಕ ವರ್ಷಗಳು.

ಚಾಂದ್ರಮಾನ ಪದ್ಧತಿಯಲ್ಲಿ ಒಂದು ಅಮಾವಾಸ್ಯೆಯಿಂದ ಇನ್ನೊಂದು ಅಮಾವಾಸ್ಯೆಯ ವರೆಗೆ ಒಂದು ತಿಂಗಳು ಅಥವಾ ಮಾಸ ಎಂದು ಪರಿಗಣಿಸಲಾಗುತ್ತದೆ. ಒಂದು ಅಮಾವಾಸ್ಯೆಯಿಂದ ಇನ್ನೊಂದು ಅಮಾವಾಸ್ಯೆಗೆ ಬರಲು ಚಂದ್ರನಿಗೆ 29.53 ದಿನಗಳು ಬೇಕಾಗುತ್ತವೆ. ಈ ಲೆಕ್ಕದಲ್ಲಿ 12 ಮಾಸಗಳ ವರ್ಷಕ್ಕೆ 354.36 ದಿನಗಳಾಗುತ್ತವೆ. ಸೌರಮಾನದ 12 ತಿಂಗಳುಗಳಿಗೆ (ರಾಶಿಗಳಿಗೆ) 365 ದಿನಗಳಿರುತ್ತವೆ. ಅಂದರೆ ಚಾಂದ್ರಮಾನದ ವರ್ಷದಲ್ಲಿ 11 ದಿನಗಳ ಕೊರತೆ ಕಂಡು ಬರುತ್ತದೆ. ಮೂರು ವರ್ಷಗಳಲ್ಲಿ ಈ ಕೊರತೆ 33 ದಿನಗಳು ಅಥವಾ ಸುಮಾರು ಒಂದು ಮಾಸ ಆಗುತ್ತದೆ. ಸಾಮಾನ್ಯವಾಗಿ ಅಧಿಕ ಮಾಸವು 32 ತಿಂಗಳು, 16 ದಿನ, 4 ಘಳಿಗೆ ಕಳೆದ ಮೇಲೆ ಬರುತ್ತದೆ (1 ಘಳಿಗೆ = 24 ನಿಮಿಷ). ಸೌರಮಾನ ಮತ್ತು ಚಾಂದ್ರಮಾನ ವರ್ಷಗಳಲ್ಲಿ ಹೊಂದಾಣಿಕೆ ಮಾಡಲು ಮೂರು ವರ್ಷಗಳಿಗೊಮ್ಮೆ ಒಂದು ಮಾಸವನ್ನು ಸೇರಿಸಿಕೊಳ್ಳಬೇಕಾಗುತ್ತದೆ. ಹೀಗೆ ಹೆಚ್ಚುವರಿಯಾಗಿ ಸೇರಿಕೊಳ್ಳುವ ಮಾಸವೇ ‘ಅಧಿಕ ಮಾಸ’. ಅಧಿಕ ಮಾಸವನ್ನು ಮಲ ಮಾಸ ಅಥವಾ ಪುರುಷೋತ್ತಮ ಮಾಸ ಎಂದೂ ಕರೆಯುತ್ತಾರೆ.

ಸೌರಮಾನವೇ ಇರಲಿ, ಚಾಂದ್ರಮಾನವೇ ಇರಲಿ, ಅದು ಕಾಲಮಾನದ ಪದ್ಧತಿ ಅಷ್ಟೆ. ಈ ಎರಡು ಪದ್ಧತಿಗಳಿರಲಿ ಅಥವಾ ಇನ್ನೂ ಬೇರೆಯದೇ ಆದ ಪದ್ಧತಿ ಇರಲಿ, ಕಾಲ ಮಾತ್ರ ಒಂದೇ ಆಗಿರುತ್ತದೆ. ಕಾಲ ಮಾನಗಳು ಬೇರೆಯಾದರೂ ಬೇರೆ ಬೇರೆ ಕಾಲಗಳಿರುವ ಸಾಧ್ಯತೆ ಇಲ್ಲ. ಆದ್ದರಿಂದ ವಿವಿಧ ಪದ್ಧತಿಗಳ ಮಧ್ಯೆ ಸಾಮರಸ್ಯದ ಹೊಂದಾಣಿಕೆ ಮಾಡುವುದು ಅತೀ ಅಗತ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಚಂದ್ರನ ಅಮಾವಾಸ್ಯೆ, ಹುಣ್ಣಿಮೆಗಳು ಮತ್ತು ಸೂರ್ಯನ ಸಂಕ್ರಾಂತಿಗಳ ಮಧ್ಯೆ ಸಂಬಂಧ ಕಲ್ಪಿಸಲಾಗಿದೆ. ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸುವ ದಿನವೇ ಸಂಕ್ರಾಂತಿ (ಸಂಕ್ರಮಣ). ಒಂದು ಅಮಾವಾಸ್ಯೆಯಿಂದ ಇನ್ನೊಂದು ಅಮಾವಾಸ್ಯೆಯ ಮೊದಲು ಸೂರ್ಯನ ಸಂಕ್ರಾಂತಿ ಬಂದೇ ಬರುತ್ತದೆ. ಮೊದಮೊದಲು ಅಮಾವಾಸ್ಯೆಯ ಪ್ರಾರಂಭದ ದಿನಗಳಲ್ಲೇ ಸಂಕ್ರಾಂತಿ ಬಂದರೆ, ಚಾಂದ್ರಮಾನ ಮಾಸದ ದಿನಗಳ ಹೊಂದಾಣಿಕೆಯ ಪರಿಣಾಮವಾಗಿ, ತಿಂಗಳುಗಳು ಕಳೆಯುತ್ತಾ ಹೋದಂತೆ ಸಂಕ್ರಾಂತಿಯು ತಿಂಗಳ ಕೊನೆಯಲ್ಲಿ ಬರುವಂತಾಗುತ್ತದೆ. ಹೀಗೆಯೇ ಮುಂದುವರಿದು ಮೂರು ವರ್ಷಗಳ ಕೊನೆಯಲ್ಲಿ ಎರಡು ಅಮಾವಾಸ್ಯೆಗಳ ಮಧ್ಯದ ಒಂದು ಮಾಸದಲ್ಲಿ ಸಂಕ್ರಾಂತಿಯೇ ಬರುವುದಿಲ್ಲ. ಹೀಗೆ ಸಂಕ್ರಾಂತಿಯೇ ಇಲ್ಲದ ಮಾಸವನ್ನು ಅಧಿಕ ಮಾಸ ಎಂದು ಕರೆಯುತ್ತಾರೆ. ಅಧಿಕ ಮಾಸದ ಕೊನೆಯ ಅಮಾವಾಸ್ಯೆಯ ನಂತರ ‘ನಿಜ ಮಾಸ’ ಪ್ರಾರಂಭವಾಗುತ್ತದೆ. ಉದಾಹರಣೆಗೆ ಈಗ ‘ಅಧಿಕ ಶ್ರಾವಣ ಮಾಸ’ ನಡೆಯುತ್ತಿದೆ. ಮುಂದಿನ ಅಮಾವಾಸ್ಯೆಯಿಂದ ‘ನಿಜ ಶ್ರಾವಣ ಮಾಸ’ ಪ್ರಾರಂಭವಾಗುತ್ತದೆ.

ಅಧಿಕ ಮಾಸಗಳು ಬರುವಂತೆ ಅಪರೂಪಕ್ಕೊಮ್ಮೆ ‘ಕ್ಷಯ ಮಾಸ’ಗಳೂ ಬರುವುದುಂಟು. ಎರಡು ಅಮಾವಾಸ್ಯೆಗಳ ಮಧ್ಯೆ ಒಂದರ ಬದಲು ಎರಡು ಸಂಕ್ರಾಂತಿಗಳು ಬಂದರೆ ಆ ಮಾಸವು ಕ್ಷಯ ಮಾಸ ಎನಿಸಿಕೊಳ್ಳುತ್ತದೆ ಮತ್ತು ಆ ಮಾಸವನ್ನು ಮುಂದಿನ ಮಾಸದೊಂದಿಗೆ ವಿಲೀನಗೊಳಿಸಲಾಗುತ್ತದೆ. 1963-64ರ ಶೋಭಕೃತ್ ಸಂವತ್ಸರದಲ್ಲಿ ಮಾರ್ಗಶಿರ ಮಾಸವೇ ಇರಲಿಲ್ಲವಂತೆ. 1982-83ರ ದುಂದುಭಿ ಸಂವತ್ಸರದಲ್ಲೂ ಪುಷ್ಯ ಮಾಸ ಇರಲಿಲ್ಲವಂತೆ. ಮುಂದಿನ ಕ್ಷಯ ಮಾಸ ಬರುವುದು 2124ನೇ ಇಸವಿಯಲ್ಲಂತೆ

ನಾರಾಯಣ ಶೆಟ್ಟಿಗಾರ್, ಬೆಂಗಳೂರು ಮೊ. 9845660131  ಮಾಜಿ ಅಧ್ಯಕ್ಷರು ದ.ಕ.ಪದ್ಮಶಾಲಿ ಸಮಾಜ ಸೇವಾ ಕೂಟ (ರಿ) ಬೆಂಗಳೂರು

Related Articles

Back to top button
error: Content is protected !!