ಸಾಸ್ತಾನ ಬಳಿ ಭೀಕರ ಅಪಘಾತ: ರಿಕ್ಷಾಕ್ಕೆ ಡಿಕ್ಕಿ ಹೊಡೆದ ಕಾರು ಕಮರಿಗೆ ಉರಳಿ ಬೆಂಕಿಗಾಹುತಿ
Views: 47
ಕನ್ನಡ ಕರಾವಳಿ ಸುದ್ದಿ: ಬ್ರಹ್ಮಾವರ ತಾಲೂಕು ಗುಂಡ್ಮಿ ಅಂಬಾಗಿಲು ಬಳಿ ಸಾಸ್ತಾನ ಟೋಲ್ ಪ್ಲಾಝಾದಿಂದ ಅನತಿ ದೂರದಲ್ಲಿ ಸ್ಕೋಡಾ ಕಾರೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದು ಕಮರಿಗೆ ಉರುಳಿ ಬೆಂಕಿಗಾಹುತಿಯಾದ ಘಟನೆ ನ.28ರಂದು ನಡೆದಿದೆ.
ರಿಕ್ಷಾಕ್ಕೆ ಡಿಕ್ಕಿ ಹೊಡೆದ ಬಳಿಕ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಕಮರಿಗೆ ಹಾರಿದೆ. ಅಪಘಾತದ ತೀವ್ರತೆಗೆ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಸಂಪೂರ್ಣ ಕಾರು ಸುಟ್ಟು ಭಸ್ಮವಾಗಿದೆ. ಕಾರಿನ ಡಿಕ್ಕಿಯಿಂದ ರಿಕ್ಷಾದಲ್ಲಿದ್ದ ಮಹಿಳೆಯೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಚಿಕಿತ್ಸೆಗೆ ಕರೆದೊಯ್ಯಲಾಗಿದೆ.
ಘಟನಾ ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸಿದರು. ಅಪಘಾತಕ್ಕೆ ಕಾರು ಚಾಲಕನ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎನ್ನಲಾಗಿದೆ. ನಿಯಂತ್ರಣಕ್ಕೂ ಮೀರಿದ ರೀತಿಯಲ್ಲಿ ಕಾರು ಚಲಾಯಿಸಿದ ಪರಿಣಾಮ ರಿಕ್ಷಾಕ್ಕೆ ಕಾರು ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.






