ಸುಜ್ಞಾನ ಪಿಯು ಕಾಲೇಜಿನಲ್ಲಿ ವಾರ್ಷಿಕೋತ್ಸವದ ಸಂಭ್ರಮ
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಕ್ತಿ ಶಿಕ್ಷಣಕ್ಕಿದೆ: ಕನಸು ದೊಡ್ಡದಾಗಿರಲಿ, ಸಾಧನೆಗೆ ಪರಿಶ್ರಮ ನಿರಂತರವಾಗಿರಲಿ – ಪಿಎಸ್ಐ ನಂಜಾ ನಾಯ್ಕ್
Views: 12
ಕನ್ನಡ ಕರಾವಳಿ ಸುದ್ದಿ: ಅಂಕಗಳೇ ಶಿಕ್ಷಣವಲ್ಲ, ಬದಲಾಗಿ ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುವುದೇ ನಿಜವಾದ ಶಿಕ್ಷಣ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಕ್ತಿ ಶಿಕ್ಷಣಕ್ಕಿದ್ದು, ನಿಮ್ಮ ಕನಸುಗಳು ದೊಡ್ಡದಾಗಿರಲಿ ಮತ್ತು ಆ ಸಾಧನೆಗೆ ಪರಿಶ್ರಮ ನಿರಂತರವಾಗಿರಲಿ ಎಂದು ಕುಂದಾಪುರ ಪೊಲೀಸ್ ಉಪನಿರೀಕ್ಷಕ (ಪಿಎಸ್ಐ) ನಂಜಾ ನಾಯ್ಕ್ ಹೇಳಿದರು.
ಕುಂದಾಪುರದ ಸುಜ್ಞಾನ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ಅದ್ಧೂರಿಯಾಗಿ ನಡೆದ ಕಾಲೇಜು ವಾರ್ಷಿಕೋತ್ಸವ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
“ಶಿಕ್ಷಣವನ್ನು ಪ್ರೀತಿಸಿ, ಅದು ನಿಮ್ಮನ್ನು ಜೀವನದಲ್ಲಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಗುರಿಯ ಬಗ್ಗೆ ಸ್ಪಷ್ಟತೆ ಮತ್ತು ದೃಢವಾದ ಉದ್ದೇಶವಿದ್ದರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಪೋಷಕರು ನಿಮ್ಮ ಮೇಲೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡು ಈ ಸಂಸ್ಥೆಗೆ ಕಳುಹಿಸಿದ್ದಾರೆ; ಅವರ ನಿರೀಕ್ಷೆಗಳನ್ನು ಎಂದಿಗೂ ಹುಸಿಗೊಳಿಸಬೇಡಿ,” ಎಂದು ಕಿವಿಮಾತು ಹೇಳಿದರು.
ಸುಜ್ಞಾನ ಕಾಲೇಜಿನ ಶಿಸ್ತು ಮತ್ತು ಶೈಕ್ಷಣಿಕ ಗುಣಮಟ್ಟವನ್ನು ಶ್ಲಾಘಿಸಿದ ಅವರು, “ನನ್ನ ಸೋದರ ಸಂಬಂಧಿಯೊಬ್ಬ ಎಸ್ಎಸ್ಎಲ್ಸಿಯಲ್ಲಿ ಶೇ. 74 ಅಂಕ ಗಳಿಸಿ ಈ ಕಾಲೇಜಿಗೆ ಸೇರಿದ್ದ. ಕಲ್ಲನ್ನು ಸುಂದರ ಶಿಲೆಯನ್ನಾಗಿಸುವಂತೆ ಈ ಸಂಸ್ಥೆ ಅವನನ್ನು ತಿದ್ದಿ ತೀಡಿ ಪಿಯುಸಿಯಲ್ಲಿ ಶೇ. 95 ಅಂಕ ಗಳಿಸುವಂತೆ ಮಾಡಿತು. ಇಂದು ಆತ ರಾಜ್ಯಕ್ಕೆ 2ನೇ ಹಾಗೂ ರಾಷ್ಟ್ರಮಟ್ಟದಲ್ಲಿ 4ನೇ ಸ್ಥಾನದೊಂದಿಗೆ ಮೈಸೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಬಿ.ಎಸ್ಸಿ (ಹಾರ್ಟಿಕಲ್ಚರ್) ಸೀಟು ಪಡೆದಿದ್ದಾನೆ. ಈ ಸಾಧನೆಯ ಸಂಪೂರ್ಣ ಶ್ರೇಯಸ್ಸು ಸುಜ್ಞಾನ ಸಂಸ್ಥೆ ಮತ್ತು ಡಾ. ರಮೇಶ್ ಶೆಟ್ಟಿ ಅವರಿಗೆ ಸಲ್ಲುತ್ತದೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ನ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ, “ವಿದ್ಯಾರ್ಥಿಗಳು ಸಾಧಕರ ವ್ಯಕ್ತಿತ್ವ ಮತ್ತು ಅನುಭವಗಳಿಂದ ಪ್ರೇರಣೆ ಪಡೆದು ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕು ಎಂಬ ಸದುದ್ದೇಶದಿಂದ ನಮ್ಮ ಸಂಸ್ಥೆಗೆ ನಿರಂತರವಾಗಿ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸುತ್ತೇವೆ. ನಮ್ಮ ಕಾಲೇಜಿನಲ್ಲಿ ಯಾವುದೇ ಸಾಂಸ್ಕೃತಿಕ ಅಥವಾ ಪಠ್ಯೇತರ ಕಾರ್ಯಕ್ರಮಗಳನ್ನು ಆಯೋಜಿಸಿದರೂ, ವಿದ್ಯಾರ್ಥಿಗಳ ದೈನಂದಿನ ತರಗತಿಗಳಿಗೆ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಚ್ಚುಕಟ್ಟಾಗಿ ಯೋಜಿಸಲಾಗುತ್ತದೆ,” ಎಂದರು.
ಟ್ರಸ್ಟ್ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ, “ಪಿಯುಸಿಯ ಎರಡು ವರ್ಷಗಳು ವಿದ್ಯಾರ್ಥಿಗಳ ಜೀವನದ ಅತ್ಯಂತ ಮಹತ್ವದ ಘಟ್ಟವಾಗಿದೆ. ಈ ಅವಧಿಯಲ್ಲಿ ನೀವು ಹಾಕುವ ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗಲಿದೆ. ನಿಮ್ಮ ಗುರಿಯನ್ನು ಅರಿತು ಶ್ರದ್ಧೆಯಿಂದ ಅಧ್ಯಯನ ಮಾಡಿ,” ಎಂದು ಹಾರೈಸಿದರು.
ಖಜಾಂಚಿ ಭರತ್ ಶೆಟ್ಟಿ ಮಾತನಾಡಿ, “ನೃತ್ಯ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ನೀವು ತೋರುವ ಅದೇ ಉತ್ಸಾಹ ಮತ್ತು ಜೋಶ್ ಅನ್ನು ನಿಮ್ಮ ವಿದ್ಯಾಭ್ಯಾಸಕ್ಕೂ ನೀಡಿ. ಓದಿಗೆ ನೀವು ನೀಡುವ ಗೌರವ ಮತ್ತು ಸಮರ್ಪಣಾ ಮನೋಭಾವ ನಿಮ್ಮನ್ನು ಉನ್ನತ ಹಂತಕ್ಕೆ ಕೊಂಡೊಯ್ಯುತ್ತದೆ. ನಿಮ್ಮ ಹೆತ್ತವರ ಕಣ್ಣಲ್ಲಿ ಆನಂದಭಾಷ್ಪ ಹರಿಯುವಂತೆ, ಗುರುಗಳು ಹೆಮ್ಮೆ ಪಡುವಂತೆ ಹಾಗೂ ಕಾಲೇಜು ಕೊಂಡಾಡುವಂತೆ ಸಾಧನೆ ಮಾಡಿ,” ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.
ಕಾಲೇಜಿನ ಪ್ರಾಂಶುಪಾಲ ರಂಜನ್ ಬಿ.ಶೆಟ್ಟಿ ವಾರ್ಷಿಕ ವರದಿಯನ್ನು ವಾಚಿಸಿದರು.ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ಉಪನ್ಯಾಸಕಿ ಚರಿಷ್ಮಾ ಕಾರ್ಯಕ್ರಮ ನಿರೂಪಿಸಿದರು, ಇಂಗ್ಲಿಷ್ ಉಪನ್ಯಾಸಕಿ ಅನಿಶಾ ವಂದಿಸಿದರು.










