ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಒಪ್ಪಿಗೆಯಾದರೆ, ರಾಜ್ಯಲೋಕಸಭಾ ಕ್ಷೇತ್ರ 28ರಿಂದ 42ಕ್ಕೆ ಏರಿಕೆ? ವಿಧಾನಸಭಾ ಕ್ಷೇತ್ರ 336ಕ್ಕೆ?
Views: 0
ಕನ್ನಡ ಕರಾವಳಿ ಸುದ್ದಿ: ಕೇಂದ್ರ ಸರಕಾರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಸಂಸತ್ತಿನ ಒಪ್ಪಿಗೆ ಸಿಕ್ಕರೆ ಕರ್ನಾಟಕದ ಚಿತ್ರಣವೂ ಬದಲಾಗಲಿದೆ.
ಕೇಂದ್ರದ ಸೂತ್ರದಂತೆ ರಾಜ್ಯದ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳಲ್ಲಿ ಶೇ.50ರಷ್ಟು ಹೆಚ್ಚಳವಾಗಲಿದೆ. ಅದರಂತೆ, ಈಗಿರುವ ಲೋಕಸಭೆ ಕ್ಷೇತ್ರಗಳ ಸಂಖ್ಯೆ 28ರಿಂದ 42ಕ್ಕೆ ಏರಿಕೆಯಾಗುವ ಸಾಧ್ಯತೆಗಳಿದ್ದು, 14 ಕ್ಷೇತ್ರಗಳ ಹೆಚ್ಚಳ ಆಗುವ ಸಂಭವವಿದೆ. ಅದೇ ರೀತಿ 224 ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯೂ 336ಕ್ಕೆ ಏರಿಕೆಯಾಗುವ ಲಕ್ಷಣಗಳಿದ್ದು, ಹಾಗೊಂದು ವೇಳೆ ಆದರೆ 112 ಕ್ಷೇತ್ರಗಳು ಹೆಚ್ಚಳವಾಗಲಿವೆ.
ಇದೇ ಆಧಾರದಲ್ಲಿ ಎಸ್ಸಿ-ಎಸ್ಟಿ ಮೀಸಲು ಕ್ಷೇತ್ರಗಳ ಸಂಖ್ಯೆಯಲ್ಲೂ ಬದಲಾವಣೆ ಆಗಲಿದೆ. ಕ್ಷೇತ್ರ ಮರುವಿಂಗಡಣೆ ಕಾಯ್ದೆಯ ಜತೆಗೆ ಶೇ.33 ಮಹಿಳಾ ಮೀಸಲಾತಿಯೂ ಜಾರಿಗೆ ಬರಲಿದ್ದು, ಅದರಂತೆ 42 ಲೋಕಸಭಾ ಕ್ಷೇತ್ರಗಳ ಪೈಕಿ 14 ಹಾಗೂ 336 ವಿಧಾನಸಭಾ ಕ್ಷೇತ್ರಗಳಲ್ಲಿ 112 ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಲಿವೆ.
ಬೆಂಗಳೂರಿನಲ್ಲಿ 40ಕ್ಕೂ ಅಧಿಕ ವಿಧಾನಸಭಾ ಕ್ಷೇತ್ರ
ದೇಶದ ಒಟ್ಟು ಕ್ಷೇತ್ರಗಳಲ್ಲಿ ಕರ್ನಾಟದ ಪಾಲು ಈಗ ಶೇ.5.15 ಇದ್ದು ಕ್ಷೇತ್ರ ಮರುವಿಂಗಡಣೆ ಬಳಿಕವೂ ಇದರಲ್ಲಿ ದೊಡ್ಡ ಬದಲಾವಣೆ ಆಗುವುದಿಲ್ಲ. ಶೇ.5.14 ಆಗಲಿದೆ. ಕ್ಷೇತ್ರ ಮರುವಿಂಗಡಣೆಯಾದರೆ ರಾಜಧಾನಿ ಬೆಂಗಳೂರಿನಲ್ಲಿ ಈಗ 4 ಲೋಕಸಭಾ ಕ್ಷೇತ್ರಗಳಿದ್ದು ಮರುವಿಂಗಡಣೆಯಲ್ಲಿ ಅವುಗಳ ಸಂಖ್ಯೆ 6ರಿಂದ 7 ಆಗಬಹುದು. ವಿಧಾನಸಭೆ ಕ್ಷೇತ್ರಗಳು 28ರ ಬದಲಿಗೆ 40ಕ್ಕೂ ಅಧಿಕ ಆಗಬಹುದು. ಇದು ಒಟ್ಟು ಕ್ಷೇತ್ರಗಳ ಹೆಚ್ಚಳದಲ್ಲಿ ಶೇ.50ರ ಅಸುಪಾಸು ಆಗಲಿದೆ.
ಪ್ರಸ್ತುತ ಕರ್ನಾಟಕದ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಸರಾಸರಿ 18ರಿಂದ 22 ಲಕ್ಷ ಮತದಾರರಿದ್ದಾರೆ. ಕ್ಷೇತ್ರಗಳ ಸಂಖ್ಯೆ 42ಕ್ಕೆ ಏರಿದರೆ, ಪ್ರತಿ ಕ್ಷೇತ್ರದ ಮತದಾರರ ಸಂಖ್ಯೆ ಸರಾಸರಿ 12ರಿಂದ 15 ಲಕ್ಷಕ್ಕೆ ಇಳಿಯಲಿದೆ. ಇದು ಅಭ್ಯರ್ಥಿಗಳಿಗೆ ಮತದಾರನನ್ನು ತಲುಪಲು ಮತ್ತು ಬೂತ್ ಮಟ್ಟದ ಸಂಘಟನೆ ಬಲಪಡಿಸಲು ನೆರವಾಗುತ್ತದೆ.
ನವೆಂಬರ್ 30ರಿಂದ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಾಗಿದ್ದು, ಅಧಿವೇಶನಕ್ಕೆ ತಪ್ಪದೆ ಹಾಜರಾಗುವಂತೆ ತನ್ನ ಲೋಕಸಭಾ ಮತ್ತು ರಾಜ್ಯಸಭಾ ಸಂಸದರಿಗೆ ಬಿಜೆಪಿ ವಿಪ್ ಜಾರಿ ಮಾಡಿದೆ.






