ಉಡುಪಿ: ಅಗ್ರಿಗೋಲ್ಡ್ ಠೇವಣಿ ವಾಪಸ್ ಪಡೆಯಲು ಟೋಕನ್ಗಾಗಿ ಬೆಳಿಗ್ಗೆ 4 ಗಂಟೆಯಿಂದಲೇ ಸರತಿ ಸಾಲು!
Views: 0
ಕನ್ನಡ ಕರಾವಳಿ ಸುದ್ದಿ: ಅಗ್ರಿಗೋಲ್ಡ್ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾದ ಠೇವಣಿದಾರರಿಗೆ ಹಣ ಮರಳಿಸುವ ಪ್ರಕ್ರಿಯೆಯ ಭಾಗವಾಗಿ ಬಾಂಡ್ ಹಾಗೂ ದಾಖಲೆಗಳ ಪರಿಶೀಲನೆ ಆರಂಭವಾಗಿದ್ದು, ಟೋಕನ್ ಪಡೆಯಲು ನೂರಾರು ಮಂದಿ ಮುಂಜಾನೆ 4 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.
ಆದರೆ ದಿನಕ್ಕೆ ಕೇವಲ 150 ಟೋಕನ್ಗಳನ್ನು ಮಾತ್ರ ವಿತರಿಸುತ್ತಿರುವುದರಿಂದ, ನೂರಾರು ಮಂದಿ ಟೋಕನ್ ಸಿಗದೆ ಬರಿಗೈಯಲ್ಲಿ ಹಿಂತಿರುಗುವಂತಾಗಿದೆ. ಉಡುಪಿ ನಗರದ ಚಂದು ಮೈದಾನದ ಒಳಾಂಗಣ ಕ್ರೀಡಾಂಗಣದಲ್ಲಿ ದಾಖಲೆ ಪರಿಶೀಲನಾ ಕೇಂದ್ರ ತೆರೆಯಲಾಗಿದ್ದು, ಗ್ರಾಮ ಪಂಚಾಯತಿವಾರು ಪರಿಶೀಲನೆ ನಡೆಸಲಾಗುತ್ತಿದೆ.
ಪ್ರತಿ ಗ್ರಾಮ ಪಂಚಾಯಿತಿಗೆ ನಿರ್ದಿಷ್ಟ ದಿನ ನಿಗದಿಪಡಿಸಿ, ಅಂದು ಸಂಬಂಧಪಟ್ಟ ಠೇವಣಿದಾರರು ಹಾಜರಾಗುವಂತೆ ಸೂಚಿಸಲಾಗಿದೆ. ಆದರೆ ನಿಗದಿತ ದಿನದಂದು ಮುನ್ನೂರಕ್ಕೂ ಅಧಿಕ ಮಂದಿ ಕೇಂದ್ರಕ್ಕೆ ಆಗಮಿಸುತ್ತಿರುವುದರಿಂದ ಟೋಕನ್ ಪಡೆಯಲು ಪೈಪೋಟಿ ಏರ್ಪಡುತ್ತಿದೆ.
ಬುಧವಾರ ಉದ್ಯಾವರ ಹಾಗೂ ಮಣಿಪುರ ಭಾಗದ ಠೇವಣಿದಾರರು ಸೇರಿದಂತೆ 300ಕ್ಕೂ ಹೆಚ್ಚು ಮಂದಿ ಟೋಕನ್ಗಾಗಿ ಮುಂಜಾನೆಯಿಂದಲೇ ಜಮಾಯಿಸಿದ್ದರು. ವಿಶೇಷವಾಗಿ ಹಿರಿಯ ನಾಗರಿಕರು ಟೋಕನ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಪ್ರಕ್ರಿಯೆ ಬೇಗ ಮುಗಿಸಿಕೊಳ್ಳುವ ಉದ್ದೇಶದಿಂದ ಕೆಲವರು ಮುಂಜಾನೆ ನಾಲ್ಕು ಗಂಟೆಗೆ ಕೇಂದ್ರಕ್ಕೆ ಬರುತ್ತಿದ್ದಾರೆ.
ಮಕ್ಕಳು, ಯುವಕ-ಯುವತಿಯರು ಹಾಗೂ ವೃದ್ಧರು ಸೇರಿದಂತೆ ಹಲವು ಮಂದಿ ಇಡೀ ದಿನ ಸರತಿ ಸಾಲಿನಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಟೋಕನ್ ಪಡೆಯುವುದೇ ದೊಡ್ಡ ಸವಾಲಾಗಿದ್ದು, ದಿನದ ಟೋಕನ್ಗಳ ಸಂಖ್ಯೆಯನ್ನು ಹೆಚ್ಚಿಸಿ ಎಲ್ಲರಿಗೂ ದಾಖಲೆ ಪರಿಶೀಲನೆಗೆ ಅವಕಾಶ ಕಲ್ಪಿಸಬೇಕು ಎಂಬುದು ಸಂತ್ರಸ್ತರ ಒತ್ತಾಯವಾಗಿದೆ.






