ಜನಮನ

ಗೋವಾ-ಮಂಗಳೂರು-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸೇವೆಗೆ ಚಾಲನೆ :ವೇಳಾಪಟ್ಟಿ, ಟಿಕೆಟ್ ದರ, ಎಲ್ಲೆಲ್ಲಿ ನಿಲುಗಡೆ 

Views: 0

ಕನ್ನಡ ಕರಾವಳಿ ಸುದ್ದಿ: ಯಶವಂತಪುರ (ಬೆಂಗಳೂರು)–ಮಂಗಳೂರು ಜಂಕ್ಷನ್–ಮಡಗಾಂವ್ (ಗೋವಾ) ನಡುವಿನ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಶುಕ್ರವಾರ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಅತ್ತ ಬೆಂಗಳೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ರೈಲು ಸೇವೆಯನ್ನು ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ರಾಜೇಶ್ ನಾಯಕ್, ಭಾಗೀರತಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಟ್ಯಾಡಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕರಾವಳಿಯ ದೀರ್ಘಕಾಲದ ಕನಸು ನನಸಾಗಿದೆ- ಸಚಿವ ಅಶ್ವಿನಿ ವೈಷ್ಣವ್: ಮಂಗಳೂರು ಜಂಕ್ಷನ್‌ನಲ್ಲಿ ಮಾತನಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, “ಕರಾವಳಿ ಕರ್ನಾಟಕವನ್ನು ರಾಜ್ಯದ ರಾಜಧಾನಿ ಬೆಂಗಳೂರಿನೊಂದಿಗೆ ಬೆಸೆಯುವ ಬಹುಕಾಲದ ಕನಸು ಇಂದು ನನಸಾಗಿದೆ. ಪಶ್ಚಿಮ ಘಟ್ಟದ ವಿದ್ಯುದ್ದೀಕರಣದಲ್ಲಿದ್ದ ಹಲವಾರು ತಾಂತ್ರಿಕ ಅಡಚಣೆಗಳನ್ನು ಮೆಟ್ಟಿನಿಂತು ಇಂದು ಯಶಸ್ವಿಯಾಗಿ ರೈಲು ಸಂಚಾರ ಆರಂಭಿಸಿದ್ದೇವೆ. ನಾನೂ ಕೂಡ ಇಂದು ಇದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದೇನೆ” ಎಂದು ಹರ್ಷ ವ್ಯಕ್ತಪಡಿಸಿದರು.

“ಕೊಂಕಣ ರೈಲ್ವೆಯನ್ನು ಜಾರ್ಜ್ ಫೆರ್ನಾಂಡಿಸ್ ಅವರು ನಿರ್ಮಿಸಿದರೆ, ಮಂಗಳೂರಿನ ರೈಲ್ವೆ ಇತಿಹಾಸದಲ್ಲಿ ಅಂತಹದ್ದೇ ಮಹತ್ವದ ನಿರ್ಧಾರ ತೆಗೆದುಕೊಂಡು ತುಳುನಾಡಿನ ಜನರ ಹೃದಯದಲ್ಲಿ ಅಶ್ವಿನಿ ವೈಷ್ಣವ್ ಅವರು ಸ್ಥಾನ ಪಡೆದಿದ್ದಾರೆ. ಅಲ್ಲದೆ, ಲೋಕಸಭೆಯಲ್ಲಿ ನಾನು ಮೊದಲ ಬಾರಿಗೆ ಮನವಿ ಮಾಡಿದ್ದ ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಪುನರಾರಂಭಕ್ಕೆ ಸಚಿವರು ಒಪ್ಪಿಗೆ ನೀಡಿದ್ದಾರೆ. ಕಡಿದಾದ ಸುಬ್ರಹ್ಮಣ್ಯ-ಸಕಲೇಶಪುರ ಘಾಟ್ ಮಾರ್ಗದ ವಿದ್ಯುದ್ದೀಕರಣ ಪೂರ್ಣಗೊಂಡಿದ್ದು, ಇಂದು ಮಂಗಳೂರಿನಿಂದ ಬೆಂಗಳೂರಿಗೆ ಕೇಸರಿ ಬಣ್ಣದ ವಂದೇ ಭಾರತ್ ರೈಲು ಸಂಚರಿಸುತ್ತಿರುವುದು ಕರಾವಳಿಗೆ ಹೆಮ್ಮೆಯ ಕ್ಷಣ” ಎಂದು ಸಂಸದರು ಅಭಿನಂದನೆ ಸಲ್ಲಿಸಿದರು.

ನವೆಂಬರ್ 15ರಿಂದ ನಿಯಮಿತ ಸಂಚಾರ: ವೇಳಾಪಟ್ಟಿ ಮತ್ತು ನಿಲುಗಡೆ ವಿವರ

16 ಬೋಗಿಗಳನ್ನು (ಎಕ್ಸಿಕ್ಯೂಟಿವ್ ಚೇರ್ ಕಾರ್ ಮತ್ತು ಚೇರ್ ಕಾರ್) ಒಳಗೊಂಡಿರುವ ಈ ರೈಲಿನ ನಿಯಮಿತ ಸಂಚಾರ ನವೆಂಬರ್ 15ರಿಂದ ಆರಂಭವಾಗಲಿದೆ.

ರೈಲು ಸಂಖ್ಯೆ 26655 ಯಶವಂತಪುರ – ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬುಧವಾರ ಹೊರತುಪಡಿಸಿ ವಾರದ ಆರು ದಿನ ಸಂಚರಿಸಲಿದೆ. ಈ ರೈಲು ಬೆಳಿಗ್ಗೆ 7.35ಕ್ಕೆ ಯಶವಂತಪುರದಿಂದ ಹೊರಟು, ಮಧ್ಯಾಹ್ನ 3.05ಕ್ಕೆ ಮಂಗಳೂರು ಜಂಕ್ಷನ್‌ಗೆ ತಲುಪಿ 3.15ಕ್ಕೆ ನಿರ್ಗಮಿಸಲಿದೆ ಹಾಗೂ ರಾತ್ರಿ 8.55ಕ್ಕೆ ಮಡಗಾಂವ್ ತಲುಪಲಿದೆ.

ರೈಲು ಸಂಖ್ಯೆ 26656 ಮಡಗಾಂವ್ – ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗುರುವಾರ ಹೊರತುಪಡಿಸಿ ವಾರದ ಆರು ದಿನ ಸಂಚರಿಸಲಿದೆ. ಈ ರೈಲು ಬೆಳಿಗ್ಗೆ 08:20ಕ್ಕೆ ಮಡಗಾಂವ್‌ನಿಂದ ಹೊರಟು, ಮಧ್ಯಾಹ್ನ 1.50ಕ್ಕೆ ಮಂಗಳೂರು ಜಂಕ್ಷನ್‌ಗೆ ಆಗಮಿಸಿ 2 ಗಂಟೆಗೆ ಹೊರಡಲಿದ್ದು, ರಾತ್ರಿ 9.15ಕ್ಕೆ ಯಶವಂತಪುರ ತಲುಪಲಿದೆ.

ಪ್ರಮುಖ ನಿಲುಗಡೆಗಳು: ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಮಂಗಳೂರು ಜಂಕ್ಷನ್, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಮುರ್ಡೇಶ್ವರ, ಗೋಕರ್ಣ ರೋಡ್ ಮತ್ತು ಕಾರವಾರ.

ಬೆಂಗಳೂರು–ಮಂಗಳೂರು ಪ್ರಯಾಣ ದರದ ವಿವರ:

ನೂತನ ವಂದೇ ಭಾರತ್ ರೈಲಿನಲ್ಲಿ ಪ್ರಯಾಣದ ಅವಧಿ ಸುಮಾರು 7 ಗಂಟೆ 15 ನಿಮಿಷದಿಂದ 7 ಗಂಟೆ 30 ನಿಮಿಷ ಇರಲಿದ್ದು, ಟಿಕೆಟ್ ದರಗಳು ಈ ಕೆಳಗಿನಂತಿವೆ:

ಯಶವಂತಪುರದಿಂದ ಮಂಗಳೂರು ಜಂಕ್ಷನ್ (26655):

ಚೇರ್ ಕಾರ್ (CC): ₹1,315

ಎಕ್ಸಿಕ್ಯೂಟಿವ್ ಚೇರ್ ಕಾರ್ (EC): ₹2,305

ಮಂಗಳೂರು ಜಂಕ್ಷನ್‌ನಿಂದ ಯಶವಂತಪುರ (26656):

ಚೇರ್ ಕಾರ್ (CC): ₹1,480

ಎಕ್ಸಿಕ್ಯೂಟಿವ್ ಚೇರ್ ಕಾರ್ (EC): ₹2,500

Related Articles

Back to top button
error: Content is protected !!