ಶಿಕ್ಷಣ

ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ಜನಾಕರ್ಷಣೆಯ ಸಂಭ್ರಮ ಜನತಾ ಆವಿಷ್ಕಾರ್- 2026

Views: 24

ಕನ್ನಡ ಕರಾವಳಿ ಸುದ್ದಿ: ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನವನ್ನು ಬೆಳೆಸುವ ಉದ್ದೇಶದಿಂದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ನವೆಂಬರ್ 5ರಂದು ವಿಜ್ಞಾನ, ವ್ಯವಹಾರ, ಸಾಂಸ್ಕೃತಿಕ, ಜನತಾ ಆವಿಷ್ಕಾರ್- 2026 ಅದ್ದೂರಿ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ್ ಸಿ. ಕುಂದರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಹೆಮ್ಮಾಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದೊಂದಿಗೆ ಬಾವಿ ಪ್ರಜೆಯನ್ನಾಗಿ ರೂಪಿಸಲು ಜನತಾ ವಿದ್ಯಾ ಸಂಸ್ಥೆ ರಾಜ್ಯಮಟ್ಟದಲ್ಲಿ ರ್‍ಯಾಂಕ್ ಗಳಿಸುವುದರೊಂದಿಗೆ ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯ, ನೈತಿಕ, ಸಾಮಾಜಿಕ ಸಾಂಸ್ಕೃತಿಕವಾಗಿ ಉತ್ತಮ ನಡಾವಳಿಕೆಯನ್ನು ರೂಪಿಸುವ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ಉದಾತ್ತ ಗೊಳಿಸಿದ್ದಾರೆ ಎಂದರು.

ಹೆಮ್ಮಾಡಿ ವಿವಿವಿ ಮಂಡಳಿಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಗೋಪಾಲ ಪೂಜಾರಿ ವ್ಯವಹಾರದ ಮಳಿಗೆಯನ್ನು ಉದ್ಘಾಟಿಸಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಂಕಗಳನ್ನು ಗಳಿಸುವ ಶಿಕ್ಷಣಕ್ಕಿಂತ ಜೀವನದಲ್ಲಿ ಸ್ವತಂತ್ರವಾಗಿ ಬದುಕಲು ಕಲಿಸುವ ಶಿಕ್ಷಣದ ಮೂಲಕ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸಿದ್ದಾರೆ ಎಂದರು.

ಗಿಳಿಯಾರ್ ಜನ ಸೇವಾ ಟ್ರಸ್ಟ್( ರಿ.) ಅಧ್ಯಕ್ಷ ವಸಂತ ಗಿಳಿಯಾರ್ ಮಾತನಾಡಿ, ಪಿಯುಸಿ ಶಿಕ್ಷಣ ಮುಗಿದ ನಂತರ ಮುಂದೇನು ಮಾಡಬೇಕು ಎಂಬ ಗೊಂದಲದ ನಡುವೆಯೂ ಹೊಸ ದಾರಿಯನ್ನು ಕಂಡುಕೊಳ್ಳಲು ಇಂತಹ ಕಾರ್ಯಕ್ರಮ ಪ್ರಮುಖ ಮಾರ್ಗವಾಗಿದೆ ಎಂದರು.

ಹೆಮ್ಮಾಡಿ ವಿವಿವಿ ಮಂಡಳಿಯ ಉಪಾಧ್ಯಕ್ಷ ರಾಜು ಪೂಜಾರಿ ಅವರು ಮಾತನಾಡಿ, ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜ್ಞಾನ ಮತ್ತು ಬದುಕುವ ಶಿಕ್ಷಣ ಈ ಮೂಲಕ ಪಡೆಯಬೇಕು ಎಂದರು.

ಜನತಾ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಮತ್ತು ಪ್ರಾಂಶುಪಾಲರಾದ ಗಣೇಶ ಮೊಗವೀರ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಕೇವಲ ಅಕ್ಷರ ಕಲಿಯುದಾಗಲಿ ಅಥವಾ ಜ್ಞಾನಗಳಿಸುವುದಕಷ್ಟೇ ಸೀಮಿತವಾಗಿಲ್ಲ ಅದು ಇಡೀ ಸಮಾಜದ ಅಭಿವೃದ್ಧಿಯ ಮೂಲ ಶಕ್ತಿಯಾಗಿದೆ. ಆ ನಿಟ್ಟಿನಲ್ಲಿ ಇದೀಗ ನಾವು ಆಚರಿಸುತ್ತಿರುವ ಕಾರ್ಯಕ್ರಮ ಇಡೀ ಉಡುಪಿ ಜಿಲ್ಲೆಯಲ್ಲಿಯೇ ಅತ್ಯಂತ ದೊಡ್ಡ ಅವಿಷ್ಕಾರ ಸಂಭ್ರಮವಾಗಿದೆ. 5ನೇ ವರ್ಷಾಚರಣೆಯಲ್ಲಿ ನಾವು ಆಚರಿಸುತ್ತಿರುವ ಕಾರ್ಯಕ್ರಮ ಮಕ್ಕಳನ್ನು ಸ್ವಾವಲಂಬಿಯನ್ನಾಗಿಸಿ, ಅವರು ತಮ್ಮ ಕಾಲ ಮೇಲೆ ನಿಂತು ಬದುಕು ನಡೆಸಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಉತ್ತಮ ಅತ್ಯಾಧುನಿಕ ಹಾಸ್ಟೆಲ್ ನೀಡಿದ್ದೇವೆ, ಈ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿಯೇ 15 ರಿಂದ 20 ವಿದ್ಯಾರ್ಥಿಗಳನ್ನು ಡಾಕ್ಟರ್ ಮಾಡಿ ಈ ಸಮಾಜಕ್ಕೆ ಅರ್ಪಿಸಬೇಕು ಎಂಬ ಕನಸನ್ನು ಕಂಡಿದ್ದೇವೆ ಎಂದಿದ್ದಾರೆ. 

ವೇದಿಕೆಯಲ್ಲಿ ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲ್ಯಾನ್, ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಶೈಕ್ಷಣಿಕ ಸಲಹೆಗಾರರಾದ ಚಿತ್ರಾ ಕಾರಂತ್, ಕಿರಿಮಂಜೇಶ್ವರ ಜನತಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಪ್ರಾಂಶುಪಾಲೆ ದೀಪಿಕಾ ಆಚಾರ್ಯ, ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಗದೀಶ್ ಶೆಟ್ಟಿ, ಎಡಮೊಗೆ ಗುರೂಜಿ ರಾಜಾರಾಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ರೈತ ಮಿತ್ರರನ್ನು, ಆನಂದ್ ಸಿ ಕುಂದರ್, ಮಾಜಿ ಶಾಸಕ ಗೋಪಾಲ್ ಪೂಜಾರಿ, ವಸಂತ ಗಿಳಿಯಾರ್, ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಸಿಎನ್ ಬಿಲ್ಲವ, ಅಶೋಕ್ ತೆಕ್ಕಟ್ಟೆ, ಮುಂತಾದವರನ್ನು ಸನ್ಮಾನಿಸಲಾಯಿತು.

ಜನಾಕರ್ಷಣೆಗೊಂಡ ವ್ಯವಹಾರ ಮಳಿಗೆ 

ಜನತಾ ಕಾಲೇಜಿನ ಆವರಣದಲ್ಲಿ 135ಕ್ಕೂ ಹೆಚ್ಚು ವ್ಯವಹಾರದ ಮೇಳದ ಮಳಿಗೆಯಲ್ಲಿ ವಿದ್ಯಾರ್ಥಿಗಳಿಂದ ತಯಾರಿಸಿದ ತಿಂಡಿ- ತಿನಿಸು, ಆಟಿಕೆ ವಸ್ತುಗಳು, ಫ್ಯಾನ್ಸಿ, ತಂಪು ಪಾನೀಯ, ಫಾಸ್ಟ್ ಫುಡ್ ಮಳಿಗೆ, ಹಣ್ಣು ಮಳಿಗೆಗಳಲ್ಲಿ ವಿದ್ಯಾರ್ಥಿಗಳು ಭರ್ಜರಿ ವ್ಯಾಪಾರ ನಡೆಸಿದರು. ಬಹುತೇಕ ಮಳಿಗೆಗಳಲ್ಲಿ ಗ್ರಾಹಕರು ಖರೀದಿಗೆ ಮುಗಿ ಬಿದ್ದರು. ಬೇರೆ ಬೇರೆ ಶಾಲೆಯಿಂದ ಬಂದ ವಿದ್ಯಾರ್ಥಿಗಳು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ವೈವಿಧ್ಯಮಯ ಸಾಂಸ್ಕೃತಿಕ ವೈಭವ

ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಾಮೂಹಿಕ ನೃತ್ಯ, ಚಿತ್ರಕಲೆ, ರಸಪ್ರಶ್ನೆ, ವಿಜ್ಞಾನ ಮೇಳೆ, ಕಿರು ಪ್ರಹಸನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಲಾ ತಂಡಗಳಿಂದ ಹೋಳಿ ಕುಣಿತ, ಹೌಂದೇರಾಯನ ವಾಲಗ, ಹುಲಿ ಹೆಜ್ಜೆ ವೈವಿಧ್ಯಮಯ ನೃತ್ಯ ಪ್ರದರ್ಶನ, ಅಂತರಾಷ್ಟ್ರೀಯ ಜಾದುಗಾರ ಸತೀಶ್ ಹೆಮ್ಮಾಡಿ ತಂಡದವರಿಂದ ಜಾದೂ ವಿಸ್ಮಯ ಪ್ರದರ್ಶನಗೊಂಡಿತು.

ವೈಭವದ ಸಾಂಸ್ಕೃತಿಕ ಕಾರ್ಯಕ್ರಮದ ತೀರ್ಪುಗಾರರನ್ನು ಗೌರವಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ರಮೇಶ್ ಪೂಜಾರಿ ಸ್ವಾಗತಿಸಿದರು. ಉಪನ್ಯಾಸಕ ಉದಯ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಅಶ್ವಿನಿ ವಂದಿಸಿದರು.

Related Articles

Back to top button
error: Content is protected !!