ಯುವಜನ

ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರ:ಮನೆ ಎದುರು ಯುವತಿ ಧರಣಿ

Views: 0

ಕನ್ನಡ ಕರಾವಳಿ ಸುದ್ದಿ: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ, ಐದು ತಿಂಗಳ ಕಾಲ ಲಿವ್‌-ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಪ್ರಿಯಕರ ಏಕಾಏಕಿ ನಾಪತ್ತೆಯಾಗಿದ್ದಾನೆ ಎಂದು ಆರೋಪಿಸಿರುವ ಯುವತಿಯೊಬ್ಬಳು, ಆತನ ಮನೆ ಎದುರು ಧರಣಿ ಆರಂಭಿಸಿರುವ ಘಟನೆ ತಾಲ್ಲೂಕಿನ ಕಲ್ಲೆ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸೂರ್ಯ (26) ಹಾಗೂ ಕೇರಳದ ಕಾಸರಗೋಡಿನ ನಿಷ್ಠಾ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಈ ವೇಳೆ ಇಬ್ಬರ ನಡುವೆ ಪರಿಚಯವಾಗಿ, ಬಳಿಕ ಪ್ರೇಮಕ್ಕೆ ತಿರುಗಿತ್ತು. ಮದುವೆಯಾಗುವುದಾಗಿ ಭರವಸೆ ನೀಡಿದ್ದ ಸೂರ್ಯ, ಕಳೆದ ಐದು ತಿಂಗಳಿಂದ ನಿಷ್ಠಾ ಜೊತೆ ಒಂದೇ ಮನೆಯಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಇವರ ಪ್ರೀತಿಯ ವಿಚಾರ ಸೂರ್ಯನ ಮನೆಯವರಿಗೂ ತಿಳಿದಿದ್ದು, ಇಬ್ಬರ ವಿವಾಹಕ್ಕೆ ಒಪ್ಪಿಗೆ ಸೂಚಿಸಿದ್ದರು ಎಂದು ಹೇಳಲಾಗಿದೆ.

ಆದರೆ, ಸೆ. 24ರಿಂದ ಸೂರ್ಯ ಏಕಾಏಕಿ ನಾಪತ್ತೆಯಾಗಿದ್ದಾನೆ. ಇದರಿಂದ ಮನನೊಂದ ನಿಷ್ಠಾ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಪಡೆದ ಬಳಿಕ ಪ್ರಿಯಕರನನ್ನು ಹುಡುಕಿಕೊಂಡು ಆತನ ಗ್ರಾಮಕ್ಕೆ ಬಂದಿದ್ದಾಳೆ. ತನಗೆ ನ್ಯಾಯ ಸಿಗಬೇಕು ಹಾಗೂ ಸೂರ್ಯ ತನ್ನನ್ನು ಮದುವೆಯಾಗಬೇಕು ಎಂದು ಒತ್ತಾಯಿಸಿ ಮನೆ ಎದುರು ಧರಣಿ ನಡೆಸುತ್ತಿದ್ದಾಳೆ.

ಮದುವೆಯ ಭರವಸೆ ನೀಡಿ ವಂಚನೆ ಆರೋಪ

ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ನಿಷ್ಠಾ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ ಎನ್ನಲಾಗಿದೆ. ಈ ಸಂಬಂಧ ಠಾಣೆಗೆ ಬಂದಿದ್ದ ಸೂರ್ಯ, ಒಂದು ವಾರದೊಳಗೆ ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಆದರೆ, 20 ದಿನ ಕಳೆದರೂ ಆತನ ಸುಳಿವು ಸಿಗದ ಹಿನ್ನೆಲೆಯಲ್ಲಿ ಅ. 22ರಂದು ನಿಷ್ಠಾ ಕಲ್ಲೆ ಸೋಮನಹಳ್ಳಿಗೆ ಬಂದಿದ್ದಾಳೆ.

ವಿಷಯ ತಿಳಿದ ಗ್ರಾಮಾಂತರ ಪೊಲೀಸರು, ಸೂರ್ಯನನ್ನು ಕರೆಸುವ ಭರವಸೆ ನೀಡಿ ಧರಣಿ ನಡೆಸದಂತೆ ಯುವತಿಗೆ ತಿಳಿಸಿದ್ದರು. ಭಾನುವಾರದೊಳಗೆ ಮಗನನ್ನು ಕರೆಸುವುದಾಗಿ ಸೂರ್ಯನ ಪೋಷಕರೂ ಭರವಸೆ ನೀಡಿದ್ದರು ಎನ್ನಲಾಗಿದೆ.

ಆದರೆ, ಅಷ್ಟರಲ್ಲೇ ಸೂರ್ಯನ ಮನೆಯವರು ಮನೆಗೆ ಬೀಗ ಹಾಕಿಕೊಂಡು ತೆರಳಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಇದರಿಂದ ತನಗೆ ನ್ಯಾಯ ದೊರೆಯದ ಹಿನ್ನೆಲೆಯಲ್ಲಿ ಪ್ರಿಯಕರನ ಮನೆ ಎದುರೇ ಧರಣಿ ಮುಂದುವರಿಸಿದ್ದಾಳೆ.

ಇತ್ತ ಪೊಲೀಸರು ಸೂರ್ಯನ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದಾರೆ.

Related Articles

Back to top button
error: Content is protected !!