ಸಾಮಾಜಿಕ

ವರದಕ್ಷಿಣೆ ಕಿರುಕುಳ: ಇಬ್ಬರು ಮಕ್ಕಳನ್ನು ತುಂಗಭದ್ರಾ ಕಾಲುವೆಗೆ ತಳ್ಳಿ ತಾಯಿ ಆತ್ಮಹತ್ಯೆ

Views: 16

ಕನ್ನಡ ಕರಾವಳಿ ಸುದ್ದಿ: ತಾಯಿ ಹಾಗೂ ಇಬ್ಬರು ಪುಟ್ಟ ಮಕ್ಕಳು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಕಾಲುವೆಯಲ್ಲಿ ತಾಯಿ ಮತ್ತು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ. ತಾಯಿ ಹಾಗೂ ಮಕ್ಕಳ ಸಾವು ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಮೃತರನ್ನು ಮಿಲ್ಲರ್ ಪೇಟೆ ನಿವಾಸಿ ಲತೀಪಾ ಸಿಮ್ರಾನ್ (29) ಹಾಗೂ ಮಕ್ಕಳಾದ ಮಹಮ್ಮದ್ ಅಯಾನ್ (3) ಮತ್ತು ಆಯಿಷಾ ಫಾತಿಮಾ (2) ಎಂದು ಗುರುತಿಸಲಾಗಿದೆ. ಮಹಿಳೆಯ ಸಾವಿಗೆ ಪತಿಯ ಕಿರುಕುಳವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ ಘಟನೆ ಬಳ್ಳಾರಿ ನಗರದ ಅಲ್ಲಿಪುರದಲ್ಲಿ ಸಂಭವಿಸಿದೆ.

ಮಾಹಿತಿಯ ಪ್ರಕಾರ, ಲತೀಪಾ ಸಿಮ್ರಾನ್ ಸಂಜೆ ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕಾಲುವೆ ಬಳಿ ತೆರಳಿದ್ದರು. ಮೊದಲು ಮಕ್ಕಳನ್ನು ಕಾಲುವೆಗೆ ತಳ್ಳಿ ಬಳಿಕ ತಾವೂ ಕಾಲುವೆಗೆ ಹಾರಿದ್ದಾರೆ ಎನ್ನಲಾಗಿದೆ. ಬೆಳಗ್ಗೆ ಲತೀಪಾ ಅವರ ಮೃತದೇಹ ಪತ್ತೆಯಾಗಿದ್ದು, ನಂತರ ಕರ್ನಾಟಕದ ಗಡಿಭಾಗದ ನಾಗಲಾಪುರದ ಬಳಿ ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ.

ಲತೀಪಾ ಅವರ ಸಾವಿನ ಹಿಂದೆ ವರದಕ್ಷಿಣೆ ಕಿರುಕುಳವಿದೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಪತಿ ಸದ್ದಾಂ ಹುಸೇನ್ ವರದಕ್ಷಿಣೆ ತರುವಂತೆ ಒತ್ತಾಯಿಸುತ್ತಿದ್ದರು. ಜೊತೆಗೆ ನಿತ್ಯ ಹಲ್ಲೆ ನಡೆಸಿ, ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ದೂರಿದ್ದಾರೆ.

ಮಕ್ಕಳ ಭವಿಷ್ಯದ ಬಗ್ಗೆಯೂ ಲತೀಪಾ ಆತಂಕದಲ್ಲಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ, ಘಟನೆಗೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಬೇಕಿದೆ.

ಈ ಸಂಬಂಧ ಲತೀಪಾ ಅವರ ಪತಿ ಸದ್ದಾಂ ಹುಸೇನ್ ಸೇರಿದಂತೆ ಆರು ಜನರ ವಿರುದ್ಧ ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದು, ಕುಟುಂಬಸ್ಥರು ಮಾಡಿರುವ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ.

Related Articles

Back to top button
error: Content is protected !!