ಬಂಡೀಪುರದಲ್ಲಿ ಆನೆ, ಹುಲಿ ಬೇಟೆ, ಉರುಳಲ್ಲಿ ದಂತ ನಾಪತ್ತೆ, ಬವಾರಿಯಾ ಗ್ಯಾಂಗ್ ಕೈವಾಡ ಶಂಕೆ?
Views: 16
ಕನ್ನಡ ಕರಾವಳಿ ಸುದ್ದಿ: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಮದ್ದೂರು ವಲಯದಲ್ಲಿ ಹುಲಿಯೊಂದು ಉರುಳಿಗೆ ಸಿಲುಕಿ ಮೃತಪಟ್ಟಿದ್ದು, ದಂತ ನಾಪತ್ತೆಯಾದ ಸ್ಥಿತಿಯಲ್ಲಿ ಕಾಡಾನೆಯ ಕಳೇಬರ ಪತ್ತೆಯಾಗಿದೆ.
ಇವೆರಡೂ ಘಟನೆಗಳು ತಡವಾಗಿ ಬೆಳಕಿಗೆ ಬಂದಿದ್ದು ಎರಡೂ ವನ್ಯಜೀವಿಗಳ ಕಳೇಬರ ಕೂಡ ಕೊಳೆತು ಹೋದ ಸ್ಥಿತಿಯಲ್ಲಿದ್ದವು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಎರಡೂ ಪ್ರಕರಣಗಳು ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪು ರದ ಮದ್ದೂರು ವನ್ಯಜೀವಿ ವಲಯದಲ್ಲಿ ನಡೆದಿವೆ. ಕಾಡಾನೆಯ ಶವ ಸಿಕ್ಕಿದ ಕರಡಿಗಲ್ಲು ಬೆಟ್ಟದ ಸಮೀಪ ಪ್ರಾಣಿಗಳನ್ನು ಹಿಡಿಯಲು ಬಳಸುವ ಬಲೆ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಎರಡೂ ಪ್ರಾಣಿಗಳು ಬೇಟೆಗಾರರಿಗೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಉತ್ತರ ಭಾರತದ ಕುಖ್ಯಾತ ಬವಾರಿಯಾ ಈ ಗ್ಯಾಂಗ್ ಈ ಪ್ರಕರಣಗಳಲ್ಲಿ ಭಾಗಿಯಾಗಿದೆಯೇ ಎಂಬ ಅನುಮಾನ ಮೂಡಿದ್ದು, ವಿವಿಧ ಆಯಾಮಗಳ ಮೇಲೆ ಅರಣ್ಯಾಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಮದ್ದೂರು ವನ್ಯಜೀವಿ ವಲಯದ ಹೊಂಗಳ್ಳಿ ಬೀಟ್ ನಲ್ಲಿ ಕಳ್ಳಬೇಟೆಗಾರರು ಹಾಕಿದ್ದ ಉರುಳಿಗೆ ಸಿಲುಕಿ ಸುಮಾರು ಎರಡು ವರ್ಷ ವಯಸ್ಸಿನ ಹುಲಿ ಸಾವಿಗೀಡಾಗಿದೆ. ತೀರಾ ಕೊಳೆತು ಹೋದ ಪರಿಣಾಮ ಇದು ಹೆಣ್ಣೆ ಅಥವಾ ಗಂಡೋ ಎಂಬುದು ಇನ್ನೂ ದೃಢಪಟ್ಟಿಲ್ಲ.
ಬವಾರಿಯಾ ಗ್ಯಾಂಗ್ ಕೈವಾಡ ಶಂಕೆ ?
ಬವಾರಿಯಾ ಗ್ಯಾಂಗ್, ಉತ್ತರ ಭಾರತ ಮೂಲದ, ಮುಖ್ಯವಾಗಿ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಹರಿಯಾಣ ಭಾಗದ ಅಲೆಮಾರಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಕುಖ್ಯಾತ ಅಪರಾಧ ಗುಂಪು. ಹೆದ್ದಾರಿ ದರೋಡೆಗೆ ಕುಖ್ಯಾತವಾಗಿರುವ ಈ ಗುಂಪು, 1995 ರಿಂದ 2005ರ ಅವಧಿಯಲ್ಲಿ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಸರಣಿ ದರೋಡೆ ಮತ್ತು ಕೊಲೆಗಳನ್ನು ಎಸಗಿತ್ತು. 2005ರಲ್ಲಿ ನಡೆದ ಎಡಿಎಂಕೆ ಶಾಸಕ ಕೆ. ಸುದರ್ಶನಂ ಅವರ ಹತ್ಯೆ ಪ್ರಕರಣದಲ್ಲಿ ಈ ಗ್ಯಾಂಗ್ನ ಕೈವಾಡವಿತ್ತು. ಈ ಗುಂಪು ಉರುಳು ಹಾಕಿ ಪ್ರಾಣಿಗಳನ್ನು ಬೇಟೆಯಾಡುವುದರಲ್ಲೂ ಕುಖ್ಯಾತವಾಗಿದೆ. ಇದೀಗ ಬಂಡೀಪುರ, ಮಧುಮಲೈ ಅರಣ್ಯದಲ್ಲಿ ಭವಾರಿಯಾ ಗ್ಯಾಂಗ್ ಸಕ್ರಿಯವಾಗಿರುವ ಶಂಕೆ ಇದೆ. 2021ರಲ್ಲಿ ಸರಗಳ್ಳತನ ಮತ್ತು ದರೋಡೆ ಪ್ರಕರಣಗಳಲ್ಲಿ ತೊಡಗಿದ್ದ ಬವಾರಿಯಾ ಗ್ಯಾಂಗ್ನ ಸದಸ್ಯರನ್ನು ಬೆಂಗಳೂರು ಪೊಲೀಸರು ಬಂಧಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದರು.






