ರೇಷನ್ ಕಾರ್ಡ್ದಾರರಿಗೆ ಗುಡ್ನ್ಯೂಸ್; ಸ್ವತಃ e-KYC ಮಾಡಲು ‘ಅನ್ನಸೇವೆ’ ಆ್ಯಪ್ ಇಂದಿನಿಂದ ಲಭ್ಯ
Views: 29
ಕನ್ನಡ ಕರಾವಳಿ ಸುದ್ದಿ: ಅನ್ನ ಭಾಗ್ಯ ಸೇರಿದಂತೆ ವಿವಿಧ ಸಾರ್ವಜನಿಕ ವಿತರಣಾ ಯೋಜನೆಗಳ ಫಲಾನುಭವಿಗಳು ಸ್ವತಃ e-KYC ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ‘ಅನ್ನ ಸೇವೆ’ ಮೊಬೈಲ್ ಆ್ಯಪ್ ಇಂದಿನಿಂದ(ಅ.14) ರಾಜ್ಯಾದ್ಯಂತ ಲಭ್ಯವಾಗಲಿದೆ.
ಈ ಮೊಬೈಲ್ ಆ್ಯಪ್ ಅನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಅಕ್ಟೋಬರ್ 1ರಂದು ಬಿಡುಗಡೆ ಮಾಡಿದ್ದರು. ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಉತ್ತರ ಕನ್ನಡ, ಬಳ್ಳಾರಿ, ಬೀದರ್ ಮತ್ತು ಕೊಪ್ಪಳ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆ್ಯಪ್ ಬಳಕೆಗೆ ಲಭ್ಯವಿತ್ತು. ಅಕ್ಟೋಬರ್ 14 ರಿಂದ ಉಳಿದ ಜಿಲ್ಲೆಗಳ ಫಲಾನುಭವಿಗಳೂ ಸಹ ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡು e-KYC ಪೂರ್ಣಗೊಳಿಸಬಹುದಾಗಿದೆ ಎಂದು ತಿಳಿಸಿದೆ.
ಫಲಾನುಭವಿಗಳು Google Play Storeನಿಂದ ‘ಅನ್ನ ಸೇವೆ’ ಆ್ಯಪ್ ಡೌನ್ಲೋಡ್ ಮಾಡಿಕೊಂಡು, UIDAI Face Authentication ಮೂಲಕ ಸ್ವಯಂ e-KYC ಪೂರ್ಣಗೊಳಿಸಬಹುದಾಗಿದೆ. ಅನ್ನ ಭಾಗ್ಯದ ಬಹುತೇಕ ಫಲಾನುಭವಿಗಳು ಕಾರ್ಮಿಕ ವರ್ಗಕ್ಕೆ ಸೇರಿದವರಾಗಿದ್ದು, ಉದ್ಯೋಗಕ್ಕಾಗಿ ನಗರ ಹಾಗೂ ಪಟ್ಟಣಗಳಿಗೆ ವಲಸೆ ಹೋಗುತ್ತಾರೆ. KYC ಪೂರ್ಣಗೊಳಿಸಲು ತಮ್ಮ ಕೆಲಸದ ಸ್ಥಳದಿಂದ ಸ್ವಗ್ರಾಮಗಳಿಗೆ ತೆರಳಿ ಕಚೇರಿಗಳಿಗೆ ಭೇಟಿ ನೀಡಬೇಕಾಗುತ್ತಿತ್ತು. ಇದಲ್ಲದೆ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ಗಂಟೆಗಟ್ಟಲೇ ಕಾಯಬೇಕಿತ್ತು. ‘ಅನ್ನ ಸೇವೆ’ ಆ್ಯಪ್ ಈ ತೊಂದರೆಗಳನ್ನು ನಿವಾರಿಸುವುದರ ಜೊತೆಗೆ, e-KYC ಪ್ರಕ್ರಿಯೆಯನ್ನು ಸರಳ ಹಾಗು ಅನುಕೂಲಕರವಾಗಿಸಲಿದೆ. ಅಕ್ಟೋಬರ್ 20 e-KYC ಮಾಡಿಸಲು ಕೊನೆಯ ದಿನ ಎಂದು ಇಲಾಖೆ ತಿಳಿಸಿದೆ.






