ಇತರೆ

ಧರ್ಮಸ್ಥಳದ ಸೌಜನ್ಯಾ ಕೊಲೆ ಪ್ರಕರಣದ ಮರು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಎಸ್‌ಐಟಿ ರಚನೆ

Views: 13

ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿ, ಗುರುವಾರ ರಾತ್ರಿ ಆದೇಶ ಹೊರಡಿಸಿದೆ.

ಎಸ್‌ಐಟಿ ಮುಖ್ಯಸ್ಥರಾಗಿ ಪೊಲೀಸ್ ಮಹಾನಿರೀಕ್ಷಕ ಎನ್‌.ಶಶಿಕುಮಾರ್ ಅವರನ್ನು ನೇಮಿಸಲಾಗಿದೆ. ಸದಸ್ಯರಾಗಿ ಮಂಗಳೂರು ನಗರ ಪೊಲೀಸ್ ಕಮಿಷನರ್‌ ಸಿ.ಎಚ್‌.ಸುಧೀರ್‌ ಕುಮಾರ್ ರೆಡ್ಡಿ, ರಾಜ್ಯ ಗುಪ್ತದಳದ ಎಸ್‌.ಪಿ ನಿಶಾ ಜೇಮ್ಸ್‌, ಸಿಐಡಿ ಎಸ್‌.ಪಿ ಲೋಕೇಶ್‌ ಜಗಲಸಾರ್‌, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ವೆಂಕಟೇಶ್ ಪ್ರಸನ್ನ ಅವರನ್ನು ನೇಮಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 2012ರಲ್ಲಿ ದಾಖಲಾಗಿದ್ದ ಪ್ರಕರಣ ಹಾಗೂ ಚೆನ್ನೈನ ಸಿಬಿಐ ಅಧಿಕಾರಿಗಳು ಮರು ನೋಂದಣಿ ಮಾಡಿದ್ದ ಎಫ್‌ಐಆರ್‌ ಕುರಿತು ಸಮಗ್ರ ತನಿಖೆಗೆ ಎಸ್‌ಐಟಿ ರಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸೌಜನ್ಯಾ ತಾಯಿ ಕುಸುಮಾವತಿ ಗೌಡ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಮೂರು ತಿಂಗಳೊಳಗೆ ಮರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಅದಕ್ಕಾಗಿ ಎಸ್‌ಐಟಿ ರಚಿಸುವಂತೆಯೂ ಆದೇಶಿಸಿತ್ತು.

ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಪ್ರಕರಣದ ತನಿಖೆಯನ್ನು ಬೆಳ್ತಂಗಡಿ ಠಾಣಾ ಪೊಲೀಸರು ಪ್ರಾಥಮಿಕವಾಗಿ ತನಿಖೆ ನಡೆಸಿದ್ದರು. ಬಳಿಕ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. 2012ರ ನವೆಂಬರ್ 6ರಂದು ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಕಾರ್ಕಳದ ಸಂತೋಷ್ ರಾವ್ ಆರೋಪಿ ಎಂದು ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಸಂತೋಷ್‌ ರಾವ್‌ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯ 2023ರ ಜುಲೈ 16ರಂದು ಖುಲಾಸೆಗೊಳಿಸಿತ್ತು.

 

Related Articles

Back to top button
error: Content is protected !!