ಭೀಕರ ಅಪಘಾತ: ಜಾರ್ಖಂಡ್ ಸಚಿವೆಯ ಪುತ್ರಿ ಸೇರಿ ನಾಲ್ವರು ಸ್ಥಳದಲ್ಲೇ ಸಾವು
Views: 15
ಕನ್ನಡ ಕರಾವಳಿ ಸುದ್ದಿ : ಜಾರ್ಖಂಡ್ ನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ದೀಪಿಕಾ ಪಾಂಡೆ ಸಿಂಗ್ ಅವರ ಪುತ್ರಿ ತ್ರಿಶಾ ಸಿಂಗ್ ಸೇರಿದಂತೆ ನಾಲ್ವರು ಗುರುವಾರ ಜಂಶೆಡ್‌ಪುರದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋನಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಮರೈನ್ ಡ್ರೈವ್ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಮೃತಪಟ್ಟ ಇತರರನ್ನು ಸಾರ್ಥಕ್ ಅಗರ್ವಾಲ್, ನಮನ್ ಗುಪ್ತಾ ಮತ್ತು ವಂಶಿಕಾ ಖಂಡೇಲ್ವಾಲ್ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಲಾರಿ ಕೆಟ್ಟುಹೋಗಿದ್ದರಿಂದ ಡಿವೈಡರ್ ಸಮೀಪದ ನಾಲ್ಕು ಪಥದ ರಸ್ತೆಯ ಬಲಭಾಗದಲ್ಲಿ ನಿಲ್ಲಿಸಲಾಗಿತ್ತು. ಲಾರಿ ನಿಂತಿರುವುದನ್ನು ಸೂಚಿಸಲು ಹಿಂಭಾಗದಲ್ಲಿ ಸಣ್ಣ ಮರದ ಕೊಂಬೆಯೊಂದನ್ನು ಇಡಲಾಗಿತ್ತು. ಆದರೆ, ಸ್ಥಳದಲ್ಲಿ ಯಾವುದೇ ರಿಪ್ಲೆಕ್ಟರ್ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಘಟನೆ ಕುರಿತು ಜಾರ್ಖಂಡ್ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್, ಮುಖ್ಯಮಂತ್ರಿ ಹೇಮಂತ್ ಸೊರೆನ್, ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.






