ಕುಂದಾಪುರದ ವ್ಯಕ್ತಿ ಶಾರ್ಜಾದಲ್ಲಿ ಭೀಕರ ಕೊಲೆ, ಪತ್ನಿ ನಿಗೂಢ ಪರಾರಿ?
Views: 169
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ನಗರದ ಪಾರಿಜಾತ ಸಮೀಪದ ಹೊನ್ನನಕೇರಿ ನಿವಾಸಿ ಶಾರ್ಜಾದಲ್ಲಿ ಭೀಕರವಾಗಿ ಕೊಲೆಯಾಗಿದೆ. ಪ್ರಕರಣದ ಬಳಿಕ ನಾಪತ್ತೆಯಾಗಿರುವ ಮೃತರ ಪತ್ನಿ ಹಾಗೂ ಪುತ್ರನಿಗಾಗಿ ಶೋಧ ಮುಂದುವರಿದಿದೆ.

ಆಲ್ವಿನ್ ಪ್ರಕಾಶ್ ಕುಂದರ್ (50) ಕೊಲೆಯಾದ ವ್ಯಕ್ತಿ. ಕಳೆದ 14 ವರ್ಷಗಳಿಂದ ಶಾರ್ಜಾದ ಖಾಸಗಿ ವಿಮಾನ ಕಂಪೆನಿಯಲ್ಲಿ ಟರ್ಮಿನಲ್ ಎರಡರಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಇವರು ತನ್ನ ಹಿರಿಯ ಸಹೋದರ ಕುಂದಾಪುರದ ಅನಿಲ್ ಪ್ರಶಾಂತ್ ಕುಂದರ್‌ಅವರ ಜತೆ ಕರೆ ಅಥವಾ ವಾಟ್ಸಪ್ ವಾಯ್ಸ ಸಂದೇಶದ ಮೂಲಕ ಮಾತ್ರ ಸಂವಹನ ನಡೆಸುತ್ತಿದ್ದರು.
ಜು.20ರಿಂದ ಆಲ್ವಿನ್ ಪ್ರಕಾಶ್ ನಾಪತ್ತೆಯಾಗಿದ್ದು, ಕುಟುಂಬಸ್ಥರ ಸಂಪರ್ಕಕ್ಕೂ ಸಿಗುತ್ತಿರಲಿಲ್ಲ. ಎಂದಿನಂತೆ ವಾಯ್ಸ ಮೆಸೇಜ್ ಮಾಡುವ ಬದಲು ನಾನು ಹುಷಾರಿದ್ದೇನೆ ಎಂದು ಕೇವಲ ಟೆಕ್ಟ್ ಮೆಸೇಜ್ ಮಾತ್ರ ಇವರ ಮೊಬೈಲ್‌ನಿಂದ ಬರುತ್ತಿತ್ತು. ಒಂದು ವಾರದ ಬಳಿಕ ಅರ್ಧಂಬರ್ಧ ಹಳೆ ಮೆಸೇಜ್‌ಗಳೇ ಮೊಬೈಲ್ ಮೂಲಕ ಬಂದಾಗ ಅಸಮಾಧಾನಗೊಂಡ ಹಿರಿಯ ಸಹೋದರ ಐದು ನಿಮಿಷ ಸಹ ಪುರುಸೊತ್ತಿಲ್ಲವೇ ಎಂದು ಜೋರು ಮಾಡಿ ವಾಯ್ಸ್ ಮೆಸೇಜ್ ಹಾಕಿದ್ದರು.ಅಂದಿನಿಂದ ಯಾವುದೇ ಉತ್ತರ ಬಂದಿರಲಿಲ್ಲ.
ದುಬೈನ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿ ಪ್ರಕಾಶ್ ಕುಂದರ್ ರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜುಲೈ ಜು.20ಕ್ಕೂ ಮುನ್ನವೇ ಕೊಲೆಯಾಗಿರುವ ಅಂದಾಜಿದ್ದು, ಮೃತನನ್ನು 9 ತುಂಡುಗಳಾಗಿ ಕತ್ತರಿಸಿ, ಅವರದ್ದೇ ಕಾರಿನ ಡಿಕ್ಕಿಯಲ್ಲಿ ಇಟ್ಟಿದ್ದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಘಟನೆಯ ಆಸುಪಾಸಿನಲ್ಲೇ ಕುಂದರ್ ಪತ್ನಿ ಟೀನಾ, ಅಪ್ರಾಪ್ತ ವಯಸ್ಕ ಪುತ್ರ ಭಾರತಕ್ಕೆ ಬಂದಿದ್ದಾರೆಂದು ಹೇಳಲಾಗಿದೆ. ಆದರೆ ಅವರು ನಿಖರವಾಗಿ ಎಲ್ಲಿದ್ದಾರೆಂಬ ಮಾಹಿತಿ ಸಿಕ್ಕಿಲ್ಲ. ಪ್ರಕಾಶ್ ಸಹೋದರ ಪ್ರಶಾಂತ್, ಟೀನಾ ವಿರುದ್ಧವೇ ಕೊಲೆಯ ದೂರು ದಾಖಲಿಸಿದ್ದಾರೆ.
ಜು.20ರಂದು ಪ್ರಶಾಂತ್ ಶಾರ್ಜಾದಲ್ಲಿ ದೂರು ದಾಖಲಿಸಿದ್ದಾರೆ. ಅದರ ಹಿಂದಿನ ದಿನವೇ ಕೊಲೆ ನಡೆದಿರುವ ಸಂಶಯವಿದೆ. ಸಿಸಿಟಿವಿಯಲ್ಲಿ ಓರ್ವ ಮಹಿಳೆ, ಇಬ್ಬರು ಪುರುಷರು ಚೀಲ ತರುವುದು ಸೆರೆಯಾಗಿದೆ. ಪತ್ನಿ ಟೀನಾಳಿಗೆ ಪಾಕಿಸ್ತಾನಿ ಪ್ರಜೆ ಜತೆ ಅಕ್ರಮ ಸಂಬಂಧ ಇದೆ ಎನ್ನಲಾಗಿದ್ದು, ಪಾಕಿಸ್ತಾನಿ ಪ್ರಿಯಕರನ ಜತೆ ಸೇರಿ ಕೊಲೆ ಮಾಡಿರಬಹುದು ಎಂಬ ಅನುಮಾನಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಎಲ್ಲ ದಿಕ್ಕಿನಿಂದ ಪೊಲೀಸರ ತನಿಖೆ ನಡೆಯುತ್ತಿದೆ. ಕೊಲೆಯ
ಬಳಿಕ ಟೀನಾ ಹಾಗೂ ಅಪ್ರಾಪ್ತ ವಯಸ್ಸಿನ ಪುತ್ರ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣ. ಪತ್ನಿಯೇ ಕೊಲೆ ಮಾಡಿಸಿದ್ದಾರೆಯೇ? ಅಥವಾ ಬೇರೆಯವರ ಸಹಾಯದಿಂದ ಕೃತ್ಯ ಎಸಗಲಾಗಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿವೆ.
ಕುಂದಾಪುರದ ಪ್ರಕಾಶ್ 20 ವರ್ಷಗಳ ಹಿಂದೆ ಉದ್ಯಾವರ ಮೂಲದ ಟೀನಾರನ್ನು ವರಿಸಿದ್ದರು. ಈಕೆ ವೃತ್ತಿಯಿಂದ ಶಿಕ್ಷಕಿ. ಶಾರ್ಜಾದಲ್ಲಿ ಪತ್ನಿ ಹಾಗೂ 10 ತರಗತಿ ಓದುತ್ತಿರುವ ಪುತ್ರನೊಂದಿಗೆ ವಾಸವಾಗಿದ್ದ ಪ್ರಕಾಶ್, ವಿಮಾನನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದರು.






