ಇತರೆ

ಪ್ರಿಯಕರನ ಕಾಮದಾಹಕ್ಕೆ ಸಾಥ್ ನೀಡಿದ ತಾಯಿ..ಅಪ್ರಾಪ್ತ ಮಗಳು ಗರ್ಭಿಣಿ!

Views: 27

ಕನ್ನಡ ಕರಾವಳಿ ಸುದ್ದಿ: ತನ್ನ ಅನೈತಿಕ ಸಂಬಂಧಕ್ಕಾಗಿ ಹೆತ್ತ ಮಗಳ ಜೀವನವನ್ನೇ ಬಲಿಗೊಟ್ಟ ತಾಯಿಯೊಬ್ಬಳು, ಪ್ರಿಯಕರ ನಡೆಸುತ್ತಿದ್ದ ಕಾಮದಾಹಕ್ಕೆ ಸಾಥ್ ನೀಡಿರುವ ಅಮಾನವೀಯ ಘಟನೆ ಹೈದರಾಬಾದ್‌ನ ಉಪ್ಪಲ್‌ನಲ್ಲಿ ಬೆಳಕಿಗೆ ಬಂದಿದೆ.

ಪ್ರಿಯಕರನ ಲೈಂಗಿಕ ದೌರ್ಜನ್ಯದಿಂದಾಗಿ ಅಪ್ರಾಪ್ತ ಬಾಲಕಿ ಇದೀಗ ಗರ್ಭಿಣಿಯಾಗಿದ್ದು, ಘಟನೆ ಸಂಬಂಧ ಆರೋಪಿ ಯುವಕ ಹಾಗೂ ಬಾಲಕಿಯ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ತಿಳಿಸಿರುವ ವಿವರಗಳ ಪ್ರಕಾರ, ಉಪ್ಪಲ್ ನಿವಾಸಿ ಶಾರದ ಎಂಬ ಮಹಿಳೆಗೆ ಮೇಡಿಪಲ್ಲಿ ಮೂಲದ ಮಾಲೋತ್ ರವಿ ಎಂಬಾತನೊಂದಿಗೆ ವಿವಾಹೇತರ ಸಂಬಂಧವಿತ್ತು. ಈ ಹಿನ್ನೆಲೆಯಲ್ಲಿ ಮನೆಗೆ ಬಂದು ಹೋಗುತ್ತಿದ್ದ ರವಿ, ಶಾರದಳ ಅಪ್ರಾಪ್ತ ಮಗಳ ಮೇಲೂ ಕಣ್ಣು ಹಾಕಿ ಆಕೆಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ತನ್ನ ಮಗಳ ಮೇಲೆ ಈ ಕೃತ್ಯ ನಡೆಯುತ್ತಿರುವುದು ತಿಳಿದಿದ್ದರೂ ತಾಯಿ ಶಾರದ ಆತನನ್ನು ವಿರೋಧಿಸದೆ, ಬದಲಾಗಿ ಪ್ರಿಯಕರನ ಲೈಂಗಿಕ ದೌರ್ಜನ್ಯಕ್ಕೆ ಸಂಪೂರ್ಣವಾಗಿ ಸಹಕರಿಸಿದ್ದಾಳೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಕಾಮುಕ ರವಿಯ ನಿರಂತರ ದೌರ್ಜನ್ಯದ ಪರಿಣಾಮವಾಗಿ ಅಪ್ರಾಪ್ತ ಬಾಲಕಿ ಗರ್ಭ ಧರಿಸಿದ್ದಾಳೆ. ಬಾಲಕಿಯ ದೈಹಿಕ ಬದಲಾವಣೆ ಕಂಡು ವಿಚಾರಿಸಿದಾಗ ಈ ಘೋರ ಅನ್ಯಾಯ ಬೆಳಕಿಗೆ ಬಂದಿದೆ. ತಕ್ಷಣವೇ ಈ ಕುರಿತು ಮಾಹಿತಿ ಪಡೆದ ಪೊಲೀಸರು ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.

ಪ್ರಕರಣ ಸಂಬಂಧ ತ್ವರಿತ ಕಾರ್ಯಾಚರಣೆ ನಡೆಸಿದ ಉಪ್ಪಲ್ ಠಾಣಾ ಪೊಲೀಸರು, ಲೈಂಗಿಕ ದೌರ್ಜನ್ಯ ಎಸಗಿದ ಮಾಲೋತ್ ರವಿ ಹಾಗೂ ಕೃತ್ಯಕ್ಕೆ ಕುಮ್ಮಕ್ಕು ನೀಡಿ ಸಹಕರಿಸಿದ ತಾಯಿ ಶಾರದ ಇಬ್ಬರನ್ನೂ ಬಂಧಿಸಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರ ಆದೇಶದ ಮೇರೆಗೆ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Related Articles

Back to top button
error: Content is protected !!