ಧಾರ್ಮಿಕ

ಮಹಾಭಾರತದ ‘ಭೀಮ’ ಪಾತ್ರಧಾರಿ ಅರೆಸ್ಟ್: ಏನಿದು ಪ್ರಕರಣ?

Views: 0

ಕನ್ನಡ ಕರಾವಳಿ ಸುದ್ದಿ :ಕಿರುತೆರೆ ‘ಮಹಾಭಾರತದಲ್ಲಿ ಭೀಮನ ಪಾತ್ರದ ಮೂಲಕ ಮನೆಮಾತಾಗಿದ್ದ ನಟ ಕುಸ್ತಿಪಟು ಸೌರವ್ ಗುರ್ಜರ್ ರನ್ನು ಪೊಲೀಸರು ಬಂಧಿಸಿದ್ದಾರೆ. ಕುಸ್ತಿಪಟುವಾಗಿರುವ ಗುರ್ಜರ್ ಖಾಸಗಿ ವಾಹಿನಿಯ ಜನಪ್ರಿಯ ‘ಮಹಾಭಾರತ’ ಧಾರಾವಾಹಿಯಲ್ಲಿ ‘ಭೀಮ’ನ ಪಾತ್ರ ನಿರ್ವಹಿಸುವ ಮೂಲಕ ಭಾರಿ ಜನಪ್ರಿಯತೆ ಪಡೆದಿದ್ದರು.

ಸೌರವ್ ಗುರ್ಜರ್ ತಮ್ಮನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಮದುವೆಯಾದ ಬಳಿಕ ಪತ್ನಿಗೆ ಸಿಗುವ ಗೌರವ ಮತ್ತು ಹಕ್ಕುಗಳನ್ನು ನೀಡುವುದಾಗಿ ಹೇಳಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಈ ಭರವಸೆಯನ್ನು ನಂಬಿ ಅಮೆರಿಕದಲ್ಲಿದ್ದ ಉದ್ಯೋಗವನ್ನು ತೊರೆದು ಭಾರತಕ್ಕೆ ಮರಳಿದ್ದಾಗಿ ತಿಳಿಸಿದ್ದಾರೆ.

ಲೈಂಗಿಕ ದೌರ್ಜನ್ಯ ಮತ್ತು ವಂಚನೆ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರು ಸೌರವ್ ಗುರ್ಜರ್ ನನ್ನು ಬಂಧಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ.

29 ವರ್ಷದ ಯುವತಿಯೊಬ್ಬರು ನೀಡಿದ ದೂರಿನನ್ವಯ ಹೈದರಾಬಾದ್‌ನ ಗಚಿಬೌಲಿ ಠಾಣಾ ಪೊಲೀಸರು ಸೌರವ್ ಗುರ್ಜರ್ ಅವರನ್ನು ಬಂಧಿಸಿದ್ದಾರೆ.

ಪ್ರಕರಣ ದಾಖಲಾದ ಬೆನ್ನಲ್ಲೇ ಸೌರವ್ ಗುರ್ಜರ್ ವಿರುದ್ಧ ಪೊಲೀಸರು ಲುಕ್ ಔಟ್ ನೋಟಿಸ್ (LOC) ಜಾರಿ ಮಾಡಿದ್ದರು. ಸೆಪ್ಟೆಂಬರ್ 17ರಂದು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದೇಶ ಬಿಟ್ಟು ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ, ವಲಸೆ ಅಧಿಕಾರಿಗಳು ಹಾಗೂ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಬಳಿಕ ಆರೋಪಿಯನ್ನು ಮುಂಬೈನಿಂದ ಹೈದರಾಬಾದ್‌ಗೆ ಕರೆತರಲಾಯಿತು.

ವಿಚಾರಣೆ ನಡೆಸಿದ ಪೊಲೀಸರು, ಸೆಪ್ಟೆಂಬರ್ 20 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಸದ್ಯ ಸೌರವ್ ಜೈಲು ಪಾಲಾಗಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಸೌರವ್ ಗುರ್ಜರ್ ಎಂದಾಕ್ಷಣ ‘ಮಹಾಭಾರತ’ ಧಾರಾವಾಹಿಯ ಭೀಮನ ಪಾತ್ರ ಬಹುತೇಕರ ನೆನಪಿಗೆ ಬರುತ್ತದೆ. ತಮ್ಮ ಗಂಭೀರ ನೋಟ, ಬಲಿಷ್ಠ ದೇಹ ಹಾಗೂ ಅಭಿನಯದ ಮೂಲಕ ಸೌರವ್ ಈ ಪಾತ್ರಕ್ಕೆ ವಿಶೇಷ ಮೆರುಗು ನೀಡಿದ್ದರು. ಇದಲ್ಲದೆ, ರಣಬೀರ್ ಕಪೂರ್ ಅಭಿನಯದ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿನ ‘ಜೋರ್’ ಪಾತ್ರದ ಮೂಲಕವೂ ಅವರು ಗಮನ ಸೆಳೆದಿದ್ದರು. ಆದರೆ ಇದೀಗ ಅವರ ವೃತ್ತಿಜೀವನದ ಸುದ್ದಿಗಳಿಗಿಂತ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಆರೋಪವೊಂದು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

 

Related Articles

Back to top button
error: Content is protected !!