ಇತರೆ

ಕಡಿಮೆ ಬೆಲೆಗೆ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ನಂಬಿಸಿ; ಕೊರಳಿನಲ್ಲಿದ್ದ ಚಿನ್ನದ ಸರ ಕದ್ದು ಪರಾರಿಯಾದ ಕಳ್ಳರು

Views: 4

ಕನ್ನಡ ಕರಾವಳಿ ಸುದ್ದಿ: ಹಳೆಯ ಕಾಲದ ಚಿನ್ನದ ನಾಣ್ಯಗಳನ್ನು ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿ 12.50 ಲಕ್ಷ ಹಣ ಪಡೆದು ವಂಚಿಸುವಾಗ ಹಣ ನೀಡಿದ ವ್ಯಕ್ತಿಯ ಕುತ್ತಿಗೆಯಲ್ಲಿದ್ದ 23 ಗ್ರಾಂ. ಚಿನ್ನದ ಸರವನ್ನು ಆರೋಪಿಗಳು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ಮಂಜುನಾಥಗೆ ಶಿವಮೊಗ್ಗದ ಹಾಡೋನಹಳ್ಳಿ ಗ್ರಾಮದ ಸಂತೋಷ ಎಂಬಾತನ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿ ತಮ್ಮ ಊರಿನ ಹಿರಿಯ ವ್ಯಕ್ತಿಯೊಬ್ಬರ ಮನೆಯ ಪಾಯ ತೆಗೆಯುವ ಸಂದರ್ಭದಲ್ಲಿ ಹಳೆಯ ಕಾಲದ ಚಿನ್ನದ ನಾಣ್ಯಗಳು ದೊರೆತಿವೆ. ಅವುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವುದಾಗಿ ಹೇಳಿ ಮಂಜುನಾಥ್‌ನನ್ನು ಶಿವಮೊಗ್ಗಕ್ಕೆ ಕರೆಸಿ ಒಂದು ನಾಣ್ಯವನ್ನು ಕೊಟ್ಟು ಪರೀಕ್ಷಿಸಿಕೊಳ್ಳುವಂತೆ ತಿಳಿಸಿದ್ದಾರೆ.

ಆರೋಪಿ ಕೊಟ್ಟ ನಾಣ್ಯ ಅಸಲಿಯಾಗಿದ್ದು ಅಂಕೋಲಾದ ಮಂಜುನಾಥ್ ಖರೀದಿಗೆ ಮುಂದಾಗಿ ತಮ್ಮ ಸ್ನೇಹಿತರ ಬಳಿ ಕೈಗಡ ಸಾಲ ಪಡೆದು 12.50 ಲಕ್ಷ ರೂ. ಹಣ ಸಂಗ್ರಹಿಸಿಕೊಂಡು ಜು.13ರಂದು ಆರೋಪಿಗಳು ತಿಳಿಸಿದಂತೆ ಭದ್ರಾವತಿ ತಾಲೂಕಿನ ಆನವೇರಿ ಗ್ರಾಮದ ಮಾವುರದಮ್ಮ ದೇವಸ್ಥಾನದ ಸಮೀಪ ಹಣ ನೀಡಿ ಸುಮಾರು ಅರ್ಧ ಕೆಜಿಯಷ್ಟು ಬಂಗಾರದ ನಾಣ್ಯ ಪಡೆದಿದ್ದಾರೆ. ಆಭರಣದ ಚೀಲ ನೀಡಿದ ವ್ಯಕ್ತಿ ಮಂಜುನಾಥ್‌ಗೆ ಹಿಗ್ಗಾಮುಗ್ಗಾ ಥಳಿಸಿ ಮಂಜುನಾಥ್ ಕೊರಳಿನಲ್ಲಿದ್ದ ಬಂಗಾರದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಗಂಟು ಬಿಚ್ಚಿ ನೋಡಿದಾದ ನಕಲಿ ನಾಣ್ಯ ಪತ್ತೆಯಾಗಿವೆ. ನಗದು 12.50 ಲಕ್ಷ ಹಾಗೂ ಅಂದಾಜು 2 ಲಕ್ಷರೂ. ಮೌಲ್ಯದ 23 ಗ್ರಾಂ. ಚಿನ್ನದ ಸರ ಸೇರಿದಂತೆ ಒಟ್ಟು 14.50 ಲಕ್ಷಮೌಲ್ಯದ ಸ್ವತ್ತು ಕಳೆದು ಹೋಗಿರುವುದಾಗಿ ಅಂಕೋಲಾದ ಮಂಜುನಾಥ್ ಹೊಳೆಹೊನ್ನೂರು ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!