ಶಿಕ್ಷಣ

ಭಾರಿ ಮಳೆಯ ಹಿನ್ನೆಲೆಯಲ್ಲಿ ರಜೆ ಆದೇಶ ಪಾಲಿಸದೆ ತರಗತಿ ನಡೆಸಿದ್ರೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಡಿಸಿ

Views: 24

ಕನ್ನಡ ಕರಾವಳಿ ಸುದ್ದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ರಜೆ ಘೋಷಿಸಿದ ಬಳಿಕವೂ ಕೆಲವು ಖಾಸಗಿ ಶಾಲೆಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳು ತರಗತಿಗಳನ್ನು ನಡೆಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹರಿದಾಡುತ್ತಿರುವುದು ಹಾಗೂ ಸಾರ್ವಜನಿಕರಿಂದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ದರ್ಶನ್ ಹೆಚ್.ವಿ. ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘಿಸಿ ತರಗತಿಗಳನ್ನು ನಡೆಸಿರುವುದು ಕಂಡುಬಂದರೆ ವಿಪತ್ತು ನಿರ್ವಹಣಾ ಕಾಯ್ದೆ-2005ರಡಿ ಸಂಬಂಧಿತ ಶಾಲೆ-ಕಾಲೇಜುಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರ ಕಚೇರಿಯಿಂದ ಸಾರ್ವಜನಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಡಿಯೋ ಸಂದೇಶವನ್ನೂ ಬಿಡುಗಡೆ ಮಾಡಲಾಗಿದೆ. ಭಾರಿ ಮಳೆಯಂತಹ ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ಜಿಲ್ಲಾಡಳಿತ ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಜೊತೆಗೆ ರಜೆ ಘೋಷಣೆಯ ಉದ್ದೇಶವನ್ನು ವಿವರಿಸಲಾಗಿದೆ.

ಜಿಲ್ಲಾಧಿಕಾರಿಗಳ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯ ಸಾಧ್ಯತೆ ಇರುವ ಸಂದರ್ಭದಲ್ಲಿ ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಂಗಳೂರು ನೀಡುವ ಮುನ್ಸೂಚನೆಗಳ ಆಧಾರದ ಮೇಲೆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು, 12ನೇ ತರಗತಿವರೆಗಿನ ಶಿಕ್ಷಣ ಸಂಸ್ಥೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗುತ್ತದೆ.

ಆದರೆ, ಕೆಲವು ಖಾಸಗಿ ಶಾಲೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ರಜೆ ಆದೇಶವನ್ನು ಪಾಲಿಸದೆ ತರಗತಿಗಳನ್ನು ನಡೆಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹರಿದಾಡುತ್ತಿದೆ. ಅಲ್ಲದೆ ಸಾರ್ವಜನಿಕರು ಹಾಗೂ ಪೋಷಕರು ದೂರವಾಣಿ ಮೂಲಕವೂ ಜಿಲ್ಲಾಡಳಿತದ ಗಮನಕ್ಕೆ ಈ ವಿಷಯವನ್ನು ತಂದಿದ್ದಾರೆ. ಮತ್ತೊಂದೆಡೆ, ಕೆಲ ಪೋಷಕರು “ರಜೆ ಘೋಷಿಸಿದ ದಿನ ಮಳೆ ಬಂದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿರುವುದನ್ನೂ ಜಿಲ್ಲಾಧಿಕಾರಿ ಉಲ್ಲೇಖಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ., “ಮಕ್ಕಳ ಜೀವ ಮತ್ತು ಸುರಕ್ಷತೆಯೇ ಜಿಲ್ಲಾಡಳಿತದ ಮೊದಲ ಆದ್ಯತೆ. ಹವಾಮಾನ ಮುನ್ಸೂಚನೆಗಳು ಭವಿಷ್ಯದ ಅಪಾಯವನ್ನು ಗಮನದಲ್ಲಿಟ್ಟುಕೊಂಡೇ ನೀಡಲಾಗುತ್ತವೆ. ಮಳೆ ಬಿದ್ದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ ಮುಂಚಿತವಾಗಿ ಸುರಕ್ಷತಾ ಕ್ರಮ ಜರುಗಿಸುವುದೇ ವಿಪತ್ತು ನಿರ್ವಹಣೆಯ ಉದ್ದೇಶವಾಗಿದೆ. ಆದ್ದರಿಂದ ರಜೆ ಘೋಷಣೆ ಕೇವಲ ಮಳೆಯ ಪ್ರಮಾಣವನ್ನು ನೋಡಿ ಮಾಡುವುದಲ್ಲ; ಸಂಭವನೀಯ ಅಪಾಯಗಳನ್ನು ಪರಿಗಣಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಘೋಷಿಸಲಾಗುತ್ತದೆ,” ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘಿಸಿ ಯಾವುದೇ ಶಾಲೆ ಅಥವಾ ಕಾಲೇಜು ತರಗತಿಗಳನ್ನು ನಡೆಸಿರುವುದು ದೃಢಪಟ್ಟರೆ ವಿಪತ್ತು ನಿರ್ವಹಣಾ ಕಾಯ್ದೆ-2005ರಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ವಿದ್ಯಾರ್ಥಿಗಳ ಸುರಕ್ಷತೆಗೆ ಧಕ್ಕೆಯಾದರೆ ಅದರ ಸಂಪೂರ್ಣ ಹೊಣೆಗಾರಿಕೆ ಸಂಬಂಧಿತ ಶಿಕ್ಷಣ ಸಂಸ್ಥೆಗಳ ಮೇಲೇ ಇರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

 

Related Articles

Back to top button
error: Content is protected !!