ಇತರೆ

ಒಂದೂವರೆ ತಿಂಗಳ ಹಸುಗೂಸನ್ನು ಚಲಿಸುತ್ತಿದ್ದ ರೈಲಿನಿಂದ ಹೊರಗೆಸೆದ ತಾಯಿ 

Views: 53

ಕನ್ನಡ ಕರಾವಳಿ ಸುದ್ದಿ: ಹೌರಾ-ಬಾರ್ಬಿಲ್ ಜನಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು, ತನ್ನ ಒಂದೂವರೆ ತಿಂಗಳ ಹಸುಗೂಸನ್ನು ಚಲಿಸುವ ರೈಲಿನ ಕಿಟಕಿಯಿಂದ ಹೊರಗೆ ಎಸೆದಿದ್ದಾರೆ. ರೈಲ್ವೆ ಹಳಿ ಮೇಲೆ ಬಿದ್ದ ಮಗು ಸ್ಥಳದಲ್ಲೇ ಮೃತಪಟ್ಟಿದೆ.

ಚಕ್ರಧರಪುರ ರೈಲ್ವೆ ವಿಭಾಗದ ರಾಜ್‌ಖರ್ಸವಾನ್ ಮತ್ತು ಮಹಲಿಮ್‌ರೂಪ್ ನಿಲ್ದಾಣಗಳ ನಡುವೆ ಘಟನೆ ಸಂಭವಿಸಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದು ರೈಲ್ವೆ ರಕ್ಷಣಾ ಪಡೆ ಮಗುವಿನ ಶವವನ್ನು ವಶಪಡಿಸಿಕೊಂಡು, ಆರೋಪಿ ತಾಯಿಯನ್ನು ವಶಕ್ಕೆ ಪಡೆದಿದೆ.

ಮೂರು ವರ್ಷದ ತನ್ನ ಇನ್ನೊಂದು ಮಗುವನ್ನೂ ಸಹ ಮಹಿಳೆ ಕಿಟಕಿಯಿಂದ ಹೊರಗೆ ಎಸೆಯಲು ಪ್ರಯತ್ನಿಸಿದ್ದಳು. ಆದರೆ, ಪ್ರಯಾಣಿಕರು ತಡೆದು ಆ ಮಗುವಿನ ಜೀವ ಉಳಿಸಿದ್ದಾರೆ. ಆದರೆ, ಕಂಕುಳಲ್ಲಿ ಮಲಗಿದ್ದ ತನ್ನ ಒಂದೂವರೆ ತಿಂಗಳ ಹಸುಗೂಸನ್ನು ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಹೊರಗೆಸೆದ ದೃಶ್ಯವನ್ನು ಕಣ್ಣಾರೆ ಕಂಡ ಪ್ರಯಾಣಿಕರು ಅರೆಕ್ಷಣ ತಬ್ಬಿಬ್ಬಾಗಿದ್ದರು.

ಹಳಿಗಳ ಪಕ್ಕದಲ್ಲಿ ಛಿದ್ರಗೊಂಡ ಮೃತದೇಹ ಪತ್ತೆ: ಸುದ್ದಿ ತಿಳಿದು ರೈಲ್ವೆ ರಕ್ಷಣಾ ಪಡೆ ಹಾಗೂ ಸಿನಿ ಪೋಸ್ಟ್‌ನ ಆರ್‌ಪಿಎಫ್ ಸಿಬ್ಬಂದಿ ಮಗುವಿಗಾಗಿ ಹಳಿಗಳ ಉದ್ದಕ್ಕೂ ಶೋಧ ನಡೆಸಿದ್ದಾರೆ. ಒಂದು ಗಂಟೆಯ ಕಾರ್ಯಾಚರಣೆಯ ಬಳಿಕ, ಪೊಲೀಸರು ನವಜಾತ ಶಿಶುವಿನ ಮೃತದೇಹ ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಹಳಿಗಳ ಪಕ್ಕದಲ್ಲಿ ಬಿದ್ದಿದ್ದ ಮಗುವಿನ ಮೃತದೇಹ ಛಿದ್ರಗೊಂಡಿತ್ತು. ಇದು ಸ್ಥಳದಲ್ಲಿದ್ದವರ ಕಣ್ಣಲ್ಲಿ ನೀರು ತರಿಸಿತು.

ಆರೋಪಿ ಮಹಿಳೆಯನ್ನು ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಮಜ್‌ಗಾಂವ್ ಪ್ರದೇಶದ ನಿವಾಸಿ ಮುದ್ರಾವತಿ ಗೋಪೆ (ಹಸೀನಾ ಬೇಗಂ) ಎಂದು ಗುರುತಿಸಲಾಗಿದೆ. ಈಕೆಯ ಪತಿಯ ಹೆಸರು ಶಹಾಬುದ್ದೀನ್. ಈತ ಪಶ್ಚಿಮ ಬಂಗಾಳದ ನಿವಾಸಿ ಎಂದು ತಿಳಿದು ಬಂದಿದೆ.

ಇದ್ದಕ್ಕಿದ್ದಂತೆ, ಮಹಿಳೆ ತನ್ನ ಸೀಟಿನಿಂದ ಎದ್ದು ಮಲಗಿದ್ದ ಮಗುವನ್ನು ಕಿಟಕಿಯಿಂದ ಹೊರಗೆಸೆದಳು. ಸಹ ಪ್ರಯಾಣಿಕರು ಪ್ರಶ್ನಿಸುತ್ತಿದ್ದಂತೆ ಇನ್ನೊಂದು ಮಗುವನ್ನೂ ಎಸೆಯಲು ಮುಂದಾಗಿದ್ದಳು. ಆದರೆ ಮಹಿಳೆಯನ್ನು ಹಿಂದಕ್ಕೆ ಎಳೆದು ಮಗುವನ್ನು ರಕ್ಷಿಸಲಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

Related Articles

Back to top button
error: Content is protected !!