ಕುಂದಾಪುರದಿಂದ ಶಿವಮೊಗ್ಗ ಮಾರ್ಗವಾಗಿ ಸಂಚರಿಸುತ್ತಿದ್ದ ಖಾಸಗಿ ಬಸ್ ಬಾಳೆಬರೇ ಘಾಟಿಯಲ್ಲಿ ಬೆಂಕಿಗೆ ಆಹುತಿ
Views: 183
ಕನ್ನಡ ಕರಾವಳಿ ಸುದ್ದಿ: ಕುಂದಾಪುರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ವೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಇಡೀ ಬಸ್ ಸಂಪೂರ್ಣ ಭಸ್ಮವಾಗಿರುವ ಘಟನೆ ಹುಲಿಕಲ್ ಬಾಳೆಬರೇ ಘಾಟಿಯ ಫಾಲ್ಸ್ ಸಮೀಪ ಇಂದು ನಡೆದಿದೆ.
ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಸಮಯಪ್ರಜ್ಞೆಯಿಂದ ಕೆಳಗಿಳಿದಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ.
ಕುಂದಾಪುರದಿಂದ ಶಿವಮೊಗ್ಗ ಮಾರ್ಗವಾಗಿ ಸಂಚರಿಸುತ್ತಿದ್ದ ದುರ್ಗಾಂಬಾ ಖಾಸಗಿ ಬಸ್. ಘಾಟ್ ರಸ್ತೆಯ ಫಾಲ್ಸ್ ಹತ್ತಿರ ಮುಖ್ಯ ರಸ್ತೆಯಲ್ಲಿ ವಿಪರೀತ ತಿರುವುಗಳಿರುವ ಜಾಗದಲ್ಲಿ ಘಟನೆ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಚಲಿಸುತ್ತಿದ್ದ ಬಸ್ಸಿನ ಇಂಜಿನ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಅಥವಾ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ಬಸ್ಸಿಗೆ ವ್ಯಾಪಿಸಿದ್ದು, ನೋಡನೋಡುತ್ತಿದ್ದಂತೆಯೇ ಬಸ್ ಬೆಂಕಿಯ ಹತ್ತಿಕೊಂಡಿದೆ.
ಘಟನೆ ನಡೆದ ವೇಳೆ ಬಸ್ಸಿನಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಇಂಜಿನ್‌ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಚಾಲಕ ಕೂಡಲೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಯಲು ಸೂಚಿಸಿದ್ದಾರೆ. ಇದರಿಂದಾಗಿ ಎಲ್ಲರೂ ಸುರಕ್ಷಿತವಾಗಿ ಹೊರಬಂದಿದ್ದಾರೆ.
ಸ್ಥಳಕ್ಕೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಾಟ್ ರಸ್ತೆಯಲ್ಲಿ ಬಸ್ ಸುಟ್ಟು ಹೋಗಿರುವುದರಿಂದ ಕೆಲಕಾಲ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.






