ವಕ್ವಾಡಿ: ತಾಲೂಕು ಮಟ್ಟದ ಬಾಲಕ- ಬಾಲಕಿಯರ ಕ್ರೀಡಾಕೂಟದ ಸಮಾರೋಪ, ಬಹುಮಾನ ವಿತರಣಾ ಸಮಾರಂಭ
Views: 256
ಕನ್ನಡ ಕರಾವಳಿ ಸುದ್ದಿ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ಹಾಗೂ ಸರಕಾರಿ ಪ್ರೌಢಶಾಲೆ ವಕ್ವಾಡಿ ಇವರ ಆಶ್ರಯದಲ್ಲಿ ಕುಂದಾಪುರ ತಾಲೂಕು ಮಟ್ಟದ 14 ಮತ್ತು 17ರ ಬಾಲಕ ಬಾಲಕಿಯರ ಕ್ರೀಡಾಕೂಟದ ಸಮಾರೋಪ ಸಮಾರಂಭ ಅ.31ರಂದು ವಕ್ವಾಡಿ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಸಭಾ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಉತ್ತಮ ಸಂಘಟನೆಯಿಂದ ಕ್ರೀಡಾಕೂಟ ಯಶಸ್ವಿಯಾಗಿದೆ. ಆ ಮೂಲಕ ಊರಿಗೆ ಒಳ್ಳೆಯ ಮೂಲಭೂತ ಸೌಕರ್ಯ ಸಿಕ್ಕಿದಂತಾಗಿದೆೆ. ಕ್ರೀಡಾಕೂಟದ ಯಶಸ್ವಿಗಾಗಿ ಶ್ರಮಿಸಿದವರನ್ನು ಶ್ಲಾಘಿಸಿ, ಅಭಿನಂದಿಸಿದರು.
ಕ್ರೀಡಾಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ದುಬೈ ಫಾರ್ಚುನ್ ಗ್ರೂಫ್ ಆಪ್ ಹೋಟೆಲ್ಸ್ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಕುಮಾರ್ ಶೆಟ್ಟಿ ಮಾತನಾಡಿ, ಊರಿನವರ ಒಗ್ಗಟ್ಟಿನ ಹೋರಾಟದ ಫಲವಾಗಿ ಕ್ರೀಡಾಕೂಟ ಅತ್ಯಂತ ಯಶಸ್ವಿನೊಂದಿಗೆ ಊರಿಗೆ ಹೆಮ್ಮೆ ತಂದಿದೆ, ಈ ಮೂಲಕ ಸುಂದರವಾದ ಕ್ರೀಡಾಂಗಣ ನಿರ್ಮಾಣವಾಗಿದೆ. ಇಂತಹ ಒಳ್ಳೆಯ ಕೆಲಸ ಮಾಡುವಾಗ ಎಲ್ಲರೂ ಕೈಜೋಡಿಸಿದಾಗ ಮಾತ್ರ ಈ ಊರಿನ ಸಮಗ್ರ ಅಭಿವೃದ್ಧಿಯಾಗುತ್ತದೆ.
ದೇವಸ್ಥಾನ, ಶಾಲೆ, ರಸ್ತೆ, ನೀರು, ಆರೋಗ್ಯ, ಊರಿನ ಸಮಗ್ರ ಅಭಿವೃದ್ಧಿ ಮತ್ತು ಮಾದರಿ ಗ್ರಾಮವನ್ನಾಗಿಸಲು ಸದಾ ನಿಮ್ಮೊಂದಿಗೆ ಕೈಜೋಡಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆಗೈದ ನಂದಿನಿ ಜಿ ಮತ್ತು ಕ್ರೀಡಾಕೂಟದ ಯಶಸ್ವಿಗಾಗಿ ಶ್ರಮಿಸಿದ ಕ್ರೀಡಾಕೂಟ ಸಮಿತಿಯ ಅಧ್ಯಕ್ಷ ವಕ್ವಾಡಿ ಸಣಗಲ್ ಮನೆ ಪ್ರವೀಣ್ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಕೋಟೇಶ್ವರ ಕೆಪಿಎಸ್ ಶಾಲಾ ಉಪ ಪ್ರಾಂಶುಪಾಲ ಚಂದ್ರಶೇಖರ್ ಶೆಟ್ಟಿ, ಉದ್ಯಮಿಗಳಾದ ಪ್ರವೀರ್ ಕುಮಾರ್ ಶೆಟ್ಟಿ, ಗಜೇಂದ್ರ ಶೆಟ್ಟಿ, ಅಶೋಕ್ ಪೂಜಾರಿ, ನಿವೃತ್ತ ಮುಖ್ಯ ಶಿಕ್ಷಕ ವೇಣುಗೋಪಾಲ ಹೆಗ್ಡೆ, ಕೆದೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ಗೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ ರವಿರಾಜ ಶೆಟ್ಟಿ, ಕ್ರೀಡಾಕೂಟದ ಕಾರ್ಯದರ್ಶಿ ಸತೀಶ್ ಪೂಜಾರಿ, ಕ್ರೀಡಾಕೂಟದ ಖಜಾಂಚಿ ವಿ ಕೆ ಶೆಟ್ಟಿ, ಸುಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಂಜನ್ ಶೆಟ್ಟಿ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಚಂದ್ರ ನಾಯ್ಕ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸತ್ಯನಾರಾಯಣ.ಜಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕಿಶನ್ ರಾಜ್ ಶೆಟ್ಟಿ, ರಾಘವೇಂದ್ರ ದೇವಾಡಿಗ, ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಜಾತ ಬಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಮತ್ತು ತಾಲೂಕು ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ ಬಹುಮಾನ ವಿಜೇತರ ಪಟ್ಟಿ ವಾಚಿಸಿ, ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದವರನ್ನು, ದಾನಿಗಳನ್ನು ಅಭಿನಂದಿಸಿ, ವಂದಿಸಿದರು.













