ವಿಚ್ಛೇದನ ನೀಡಲು ನಿರಾಕರಿಸಿದ ಪತಿಯನ್ನೇ ಕೊಲೆ ಮಾಡಿದ ಪತ್ನಿ
Views: 95
ಕನ್ನಡ ಕರಾವಳಿ ಸುದ್ದಿ: ವಿಚ್ಛೇದನ ನೀಡಲು ನಿರಾಕರಿಸಿದ ಪತಿಯನ್ನು ಪತ್ನಿಯೇ ಕೊಲೆ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಆರೋಪಿ ಪತ್ನಿ ಮತ್ತು ಕೊಲೆ ಮಾಡಿದ ಆಕೆಯ ಸಹೋದರ ಹಾಗೂ ಗೆಳೆಯರನ್ನು ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಶಿರಗುಪ್ಪ ಮೂಲದ ತಿಪ್ಪಣ್ಣ ಕೊಲೆಯಾದವರು. ಇವರ ಪತ್ನಿ ಮಹಾರಾಷ್ಟ್ರದ ಕಲ್ಯಾಣ್ ಮೂಲದ ಹಸೀನಾ ಮೆಹಬೂಬ್ ಶೇಖ್. ಕೌಟುಂಬಿಕ ಕಲಹದಿಂದ ಇಬ್ಬರ ಮಧ್ಯೆ ಜಗಳವಾಗಿದ್ದು, ಪ್ರತ್ಯೇಕವಾಗಿ ವಾಸವಾಗಿದ್ದರು. ಇದರಿಂದ ಪತ್ನಿ ವಿಚ್ಛೇದನ ಪಡೆಯಲು ನಿರ್ಧರಿಸಿದ್ದರು. ಆದರೆ ವಿಚ್ಛೇದನ ಕೊಡಲು ಪತಿ ಒಪ್ಪಿರಲಿಲ್ಲ. ಇದರಿಂದ ಪತಿಯ ಕೊಲೆ ಸಂಚು ರೂಪಿಸಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊಲೆ ಪ್ರಕರಣ ಭೇದಿಸಿದ ಮಹಾ ಪೊಲೀಸರು: ಆರೋಪಿ ಮಹಿಳೆಯ ಸಂಚಿನಂತೆ ಆಕೆಯ ಸಹೋದರ ಮತ್ತು ಆತನ ಸ್ನೇಹಿತರು ತಿಪ್ಪಣ್ಣನ ಕೊಲೆ ಮಾಡಿದ್ದಾರೆ. ಕಲ್ಯಾಣ ಮೂಲದ ರಿಕ್ಷಾ ಚಾಲಕ ಫೈಯಾಜ್, ಸಿಕಂದರ್ ಬಾದ್‌ಶಾ ಮುಜಾವರ್ ಮತ್ತು ಗುಲಾಮ್ ಅಕ್ಬರ್ ಇಖ್ತಿಯಾರ್ ಮೌಲ್ವಿ ಕೊಲೆ ಮಾಡಿದ ಆರೋಪಿಗಳು.
ನವೆಂಬರ್ 17ರಂದು ಆರೋಪಿಗಳು ಸುಳ್ಳು ಹೇಳಿ ತಿಪ್ಪಣ್ಣನನ್ನು ಆಟೋದಲ್ಲಿ ಕೂರಿಸಿಕೊಂಡು ಶಹಾಪುರದ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದರು. ಬಳಿಕ ಕೊಲೆ ಮಾಡಿ, ಯಾರಿಗೂ ಗೊತ್ತಾಗಬಾರದೆಂದು ಡಿಸೇಲ್ನಿಂದ ಮೃತ ದೇಹವನ್ನು ಭಾಗಶಃ ಸುಟ್ಟಿದ್ದರು. ಬಳಿಕ ಮುಂಬೈ – ನಾಸಿಕ್ ಹೆದ್ದಾರಿಯ ಕಾಡಿನಲ್ಲಿ ಎಸೆದು ಪರಾರಿಯಾಗಿದ್ದರು.
ಬಳಿಕ ನವೆಂಬರ್ 25ರಂದು, ಚೆರ್ಪೋಲಿ ಗ್ರಾಮದ ಮುಂಬೈ-ನಾಸಿಕ್ ಹೆದ್ದಾರಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಈ ಸಂಬಂಧ, ಮಹಾರಾಷ್ಟ್ರದ ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡು, ಖಚಿತ ಮಾಹಿತಿ ಮೇರೆಗೆ ಮೂವರನ್ನು ಬಂಧಿಸಿದಾಗ ಸತ್ಯಾಂಶ ಹೊರಬಂದಿದೆ.
ನನ್ನ ಸಹೋದರಿ ಹಸೀನಾ ಮೆಹಬೂಬ್ ಶೇಖ್ ಅವರ ಸೂಚನೆಯ ಮೇರೆಗೆ ನನ್ನ ಇಬ್ಬರು ಸ್ನೇಹಿತರೆ ಜೊತೆ ತಿಪ್ಪಣ್ಣನನ್ನು ಕಾಡಿಗೆ ಕರೆದೊಯ್ದು ಕೊಂದಿದ್ದೇವೆ ಎಂದು ಪೊಲೀಸರ ಮುಂದೆ ಆರೋಪಿ ಫಯಾಜ್ ಶೇಖ್ ತಪ್ಪೊಪ್ಪಿಕೊಂಡಿದ್ದಾನೆ ಥಾಣೆ ಗ್ರಾಮೀಣ ಅಪರಾಧ ವಿಭಾಗದ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸಂದೀಪ್ ತಿಳಿಸಿದ್ದಾರೆ. ಶಹಾಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮುಖೇಶ್ ಈ ಅಪರಾಧದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.






