ವಸತಿ ಶಾಲಾ ಶಿಕ್ಷಕನ ಮೊಬೈಲ್‌ನಲ್ಲಿ ವಿದ್ಯಾರ್ಥಿನಿಯರ 5 ಸಾವಿರ ನಗ್ನ ಫೋಟೋ ಪತ್ತೆ!

Views: 230
ಕೋಲಾರ ವಸತಿ ಶಾಲೆಯೊಂದಲ್ಲಿ ವಿದ್ಯಾರ್ಥಿಗಳಿಂದಲೇ ಶೌಚಗುಂಡಿ ಸ್ವಚ್ಛಗೊಳಿಸಿ ವಿವಾದಕ್ಕೀಡಾಗಿದ್ದ ಪ್ರಕರಣ ರಾಜ್ಯದಲ್ಲಿ ಅದೇ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವ ಮುನಿಯಪ್ಪ ವಸತಿ ಶಾಲೆಯ ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವ ಫೋಟೋ ಮತ್ತು ವಿಡಿಯೋಗಳನ್ನು ಗೊತ್ತಿಲ್ಲದಂತೆ ಶೂಟ್ ಮಾಡಿದ್ದು ಬೆಳಕಿಗೆ ಬಂದಿದೆ.
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮಾಸ್ತಿ ಗಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕ ಮುನಿಯಪ್ಪನ ಮೊಬೈಲ್ನಲ್ಲಿ ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವ ಸುಮಾರು ಐದು ಸಾವಿರ ನಗ್ನ ಫೋಟೋ ಮತ್ತು ವಿಡಿಯೋಗಳು ಪತ್ತೆಯಾಗಿವೆ.
2023 ಡಿಸೆಂಬರ್ 17ರಂದು ಶಾಲೆಯ ಶೌಚಗುಂಡಿಯನ್ನು ವಿದ್ಯಾರ್ಥಿಗಳು ಸ್ವಚ್ಛಗೊಳಿಸಿದ್ದ ಪ್ರಕರಣ ಬಯಲಿಗೆ ಬಂದಿತ್ತು. ಆಗ ಸರ್ಕಾರ ತನಿಖೆಗೆ ಆದೇಶಿಸಿತ್ತು. ಆ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿಗಳು ಶಾಲೆಗೆ ಆಗಮಿಸಿ ತನಿಖೆ ಆರಂಭಿಸಿದ್ದರು. ಆ ಸಂದರ್ಭದಲ್ಲಿ, ಅಲ್ಲಿದ್ದ ಎಲ್ಲ ಶಿಕ್ಷಕರ ಮೊಬೈಲ್ ಗಳನ್ನು ಸೀಜ್ ಮಾಡಲಾಗಿತ್ತು. ಆಗ ಮುನಿಯಪ್ಪನವರ ಮೊಬೈಲ್ ಕೂಡ ಸೀಜ್ ಆಗಿತ್ತು.
ಆನಂತರದಲ್ಲಿ ಸೀಜ್ ಮಾಡಲಾಗಿದ್ದ ಮೊಬೈಲ್ ಗಳಲ್ಲಿರುವ ದತ್ತಾಂಶಗಳನ್ನು ಪರಿಶೀಲಿಸುವಾಗ ಮುನಿಯಪ್ಪನವರ ಮೊಬೈಲ್ ನಲ್ಲಿ ಬಾಲಕಿಯರ ನಗ್ನ ಫೋಟೋಗಳು, ಬಟ್ಟೆ ಬದಲಿಸುವಾಗ ತೆಗೆದಿರಬಹುದಾದ ಫೋಟೋಗಳು ಸಿಕ್ಕಿವೆ. ಇಂಥದ್ದೇ ಕೆಲವು ವಿಡಿಯೋಗಳೂ ಕೂಡ ಸಿಕ್ಕಿವೆ.
ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಮುನಿಯಪ್ಪನವರನ್ನು ಬಂಧಿಸಿದ್ದರು. ತಮ್ಮ ಬಂಧನದ ವಿರುದ್ಧ ಕೆಳ ಹಂತದ ನ್ಯಾಯಲಯದ ಮೊರೆ ಹೋಗಿದ್ದ. ಅಲ್ಲಿ ಆತನಿಗೆ ವ್ಯತಿರಿಕ್ತ ತೀರ್ಪು ಬಂದಿತ್ತು.
ತನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಶಿಕ್ಷಕ ತನ್ನ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದ. ಇದೀಗ ಈ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್ ಪೋಕ್ಸೋ ಕೇಸ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರದ್ದುಗೊಳಿಸಿದೆ.
ತನ್ನ ಮೊಬೈಲ್‌ನಲ್ಲಿ ಹೆಣ್ಣು ಮಕ್ಕಳ 5000ಕ್ಕೂ ಹೆಚ್ಚು ನಗ್ನ ವಿಡಿಯೋ, ಫೋಟೋಗಳನ್ನು ಇಟ್ಟುಕೊಂಡಿರುವುದು ಮತ್ತು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಶಿಕ್ಷಕ ಮುನಿಯಪ್ಪನಿಗೆ ಹೈಕೋರ್ಟ್ ಈ ಮೂಲಕ ಚಾಟಿ ಬೀಸಿದೆ.