ಮಗನ ಕಾಯಿಲೆ ಗುಣಪಡಿಸಲು ತನ್ನ 13 ವರ್ಷದ ಮಗಳನ್ನೇ ಬಲಿ ಕೊಟ್ಟ ಹೆತ್ತ ತಾಯಿ
Views: 93
ಕನ್ನಡ ಕರಾವಳಿ ಸುದ್ದಿ: ತನ್ನ ಮಗನ ಕಾಯಿಲೆಯನ್ನು ಗುಣಪಡಿಸಲು ಹೆತ್ತ ತಾಯಿಯೇ ಮಗಳನ್ನೇ ಬಲಿ ಕೊಟ್ಟಿರುವ ಅಮಾನವೀಯ ಘಟನೆ ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯ ಕುಸುಂಭ ಗ್ರಾಮದಲ್ಲಿ ನಡೆದಿದೆ.
ಮಾರ್ಚ್ 24, 2026ರಂದು ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ 13 ವರ್ಷದ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದಳು. ಮರುದಿನ ಬೆಳಗ್ಗೆ ಸ್ಥಳೀಯ ಶಾಲೆಯ ಹಿಂಭಾಗದ ಬಿದಿರಿನ ಪೊದೆಯ ಬಳಿ ಆಕೆಯ ಮೃತದೇಹ ಭೀಕರ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಾಲಕಿಯ ತಲೆಗೆ ಕಲ್ಲಿನಿಂದ ಜಜ್ಜಲಾಗಿತ್ತು ಮತ್ತು ದೇಹದ ಮೇಲೆ ಗಂಭೀರ ಗಾಯಗಳಾಗಿದ್ದವು.
ಪೊಲೀಸ್ ತನಿಖೆಯಲ್ಲಿ ಹೊರಬಂದ ಸತ್ಯ ಕೇಳಿ ಇಡೀ ರಾಜ್ಯವೇ ನಡುಗಿಹೋಗಿದೆ. ಬಾಲಕಿಯ ತಾಯಿ ರೇಶ್ಮಿ ದೇವಿಗೆ ತನ್ನ ಕಿರಿಯ ಮಗನಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು. ಅದು ವಾಸಿ ಆಗಿರಲಿಲ್ಲ. ಇದರಿಂದ ಕುಟುಂಬದ ಸಮಸ್ಯೆಗಳೂ ಹೆಚ್ಚಾಗಿದ್ದವು. ಈ ಹಿನ್ನೆಲೆಯಲ್ಲಿ ಶಾಂತಿ ದೇವಿ (ಮಂತ್ರವಾದಿ ಮಹಿಳೆ) ಬಳಿ ಹೋಗಿದ್ದಳು. ಅಲ್ಲಿ ಪ್ರಶ್ನೆ ಮಾಡಿದಾಗ ಒಬ್ಬ ಕನ್ಯಾ ಹುಡುಗಿಯನ್ನು ಬಲಿ ಕೊಟ್ಟರೆ ಮಾತ್ರ ನಿನ್ನ ಮಗನ ಕಾಯಿಲೆ ವಾಸಿಯಾಗುತ್ತದೆ. ಸಮಸ್ಯೆಗಳೆಲ್ಲವೂ ದೂರ ಆಗಲಿದೆ ಎಂದು ನಂಬಿಸಿದ್ದಳು. ಇದನ್ನು ನಂಬಿದ ತಾಯಿ ರೇಶ್ಮಿ ದೇವಿ, ತನ್ನ ಲವರ್ ಭೀಮ್ ರಾಮ್ ಮತ್ತು ತಾಂತ್ರಿಕ ಮಹಿಳೆ ಶಾಂತಿ ದೇವಿ ಜೊತೆ ಸೇರಿ ಸ್ವಂತ ಮಗಳನ್ನೇ ಬಲಿ ಕೊಡಲು ಸಂಚು ರೂಪಿಸಿದ್ದಳು.
ಬಾಲಕಿಯನ್ನು ಬಲಿ ಪಡೆಯುವ ದಿನ ದೇವರ ಮೆರವಣಿಗೆ ಹೆಸರಲ್ಲಿ ಆಕೆ ಮಗಳನ್ನು ಮನೆಯಿಂದ ಪುಸಲಾಯಿಸಿಕೊಂಡು ಆಚೆ ಕರೆದುಕೊಂಡು ಹೋಗಿದ್ದಾಳೆ. ದೇವರ ಮೆರವಣಿಗೆ ಬಳಿಕ, ಶಾಂತಿ ದೇವಿ ಮನೆಗೆ ಕರೆದುಕೊಂಡು ಬಂದಿದ್ದಾಳೆ. ಅಲ್ಲಿ ಕೆಲವು ಮಾಂತ್ರಿಕ ವಿಧಿವಿಧಾನ ನಡೆಸಿದ್ದಾರೆ. ನಂತರ ಬಾಲಕಿಯನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಏಕಾಂತ ಸ್ಥಳದಲ್ಲಿ ಮಾಂತ್ರಿಕ ಮಂತ್ರ ಜಪಿಸಿದ್ದಾರೆ. ಅಲ್ಲಿ ಬಾಲಕಿ ಜೊತೆ ಮಲಗಲು ಹೇಳಿದ್ದಾರೆ. ಆಗ ಪ್ರೇಮಿ ಭೀಮ್ ರಾಮ್, ಬಾಲಕಿಯ ಕತ್ತು ಹಿಸುಕಿದ್ದಾನೆ. ತಾಯಿ, ಆಕೆಯ ಕೈಕಾಲುಗಳನ್ನು ಬಲವಾಗಿ ಹಿಡಿದುಕೊಂಡಿದ್ದಾಳೆ. ನಂತರ ಬಾಲಕಿಯ ರಕ್ತ ಸಂಗ್ರಹಿಸಲು ಆಕೆಯ ದೇಹಕ್ಕೆ ಚೂಪಾದ ಆಯುಧಗಳಿಂದ ಗಾಯಗೊಳಿಸಲಾಗಿದೆ ಮತ್ತು ಗುರುತು ಸಿಗದಂತೆ ತಲೆಯನ್ನು ಕಲ್ಲಿನಿಂದ ಜಜ್ಜಲಾಗಿದೆ. ವಿಪರ್ಯಾಸವೆಂದರೆ, ಇಷ್ಟೆಲ್ಲ ಮಾಡಿದ ಬಳಿಕ ತಾಯಿ ರೇಶ್ಮಿ ದೇವಿ ಏನೂ ತಿಳಿಯದವಳಂತೆ ಪೊಲೀಸರಿಗೆ ಮಗಳು ಅಪಹರಣವಾಗಿದ್ದಾಳೆ ಎಂದು ಸುಳ್ಳು ದೂರು ನೀಡಿದ್ದಳು!
ಪೊಲೀಸರು ವಿಶೇಷ ತನಿಖಾ ತಂಡ (SIT) ರಚಿಸಿ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದಾಗ ತಾಯಿಯ ಮೇಲೆಯೇ ಅನುಮಾನ ವ್ಯಕ್ತವಾಗಿತ್ತು. ತೀವ್ರ ವಿಚಾರಣೆ ನಡೆಸಿದಾಗ ರೇಶ್ಮಿ ದೇವಿ ತನ್ನ ಪಾಪದ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಸದ್ಯ ತಾಯಿ ರೇಶ್ಮಿ ದೇವಿ, ಪ್ರೇಮಿ ಭೀಮ್ ರಾಮ್ ಮತ್ತು ತಾಂತ್ರಿಕ ಮಹಿಳೆ ಶಾಂತಿ ದೇವಿಯನ್ನು ಬಂಧಿಸಲಾಗಿದೆ.






