ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆ ವಾರ್ಷಿಕೋತ್ಸವ ಸಂಭ್ರಮ-ಬಿಂಬ 2k24 ಸಂಪನ್ನ

Views: 200
ಕುಂದಾಪುರ: ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಾರ್ಷಿಕ ಸಂಭ್ರಮ-ಬಿಂಬ 2k24 ಶನಿವಾರ ವಿಜೃಂಭಣೆಯಿಂದ ಸಂಪನ್ನಗೊಂಡಿದೆ.
ಶಾಲೆಯ ಸಂಚಾಲಕರಾದ ಸಂತೋಷ್ ಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಗಳಿಸಿದ ಜ್ಞಾನವನ್ನು ಉಪಯುಕ್ತ ರೀತಿಯಲ್ಲಿ ಬಳಸಿಕೊಂಡು ಸಮಾಜದ ಒಳಿತಿಗಾಗಿ ವ್ಯಯಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಶಾಸಕರು ಹಾಗೂ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಮಾತನಾಡಿ, “ಶಿಕ್ಷಣವೆಂದರೆ ತರಗತಿಯೊಳಗೆ ಮಾತ್ರವಲ್ಲ ಜೀವನದ ಸರ್ವಾಂಗೀಣ ವ್ಯಕ್ತಿತ್ವ ವಿಕಸನ ಪೂರಕ ಪ್ರಕ್ರಿಯೆಯಲ್ಲಿ ಶಾಲಾ ಶಿಕ್ಷಣದಲ್ಲಿ ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳ ನಡುವೆ ಸಮತೋಲನ ಸಾಧ್ಯವಾಗುತ್ತದೆ.” ಪರಿಸರದಲ್ಲಿ ಉತ್ತಮ ವಿದ್ಯಾ ಸಂಸ್ಥೆಯನ್ನಾಗಿ ರೂಪಿಸಿದ್ದಕ್ಕೆ ಸಹಕರಿಸಿದ ಪೋಷಕರನ್ನು ಅಭಿನಂದಿಸಿದರು. ಶ್ರೇಷ್ಠ ಗುಣಮಟ್ಟದ ಮಾದರಿ ಶಿಕ್ಷಣ ಸಂಸ್ಥೆಯಾಗಿ ರೂಪುಗೊಂಡು ಬೆಳೆಯಲಿ ಎಂದು ಶುಭ ಹಾರೈಸಿದರು.
ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಸಂಸ್ಥಾಪಕ ಡಾ.ಸುಧಾಕರ್ ಶೆಟ್ಟಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದೊಂದು ಅದ್ಭುತ ಪ್ರತಿಭೆ ಅಡಕವಾಗಿರುತ್ತದೆ. ಶಿಕ್ಷಣ ಸಂಸ್ಥೆಗಳ ಮೂಲಕ ಅವರಲ್ಲಿರುವ ಅತ್ಯುತ್ತಮ ಪ್ರತಿಭೆಯನ್ನು ಹೊರಕ್ಕೆ ತರಬಹುದಾಗಿದೆ. ಮಕ್ಕಳಿಗೆ ಆಸ್ತಿ ಮಾಡಬೇಡಿ ಅವರಿಗೆ ಒಳ್ಳೆಯ ಶಿಕ್ಷಣ ನೀಡಿ. ಹೊಟ್ಟೆ ಹೊರೆಯುವ ಮತ್ತು ಸದ್ಭಾವ ಸದ್ಗುಣ ಸಂಸ್ಕಾರ ನೀಡುವ ಶಿಕ್ಷಣ ಸಂಸ್ಥೆಗಳು ದೇವಾಲಯ ಇದ್ದಂತೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಪ್ಪಣ್ಣ ಹೆಗ್ಡೆ, ಡಾ.ಸುಧಾಕರ ಶೆಟ್ಟಿ, ಯಕ್ಷಗಾನ ಕಲಾವಿದ ಮಹಮ್ಮದ್ ಗೌಸ್ ಅವರನ್ನು ಸನ್ಮಾನಿಸಲಾಯಿತು.
ಶೈಕ್ಷಣಿಕ ವರ್ಷದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಚಾರ್ಟೆಡ್ ಅಕೌಂಟ್ ಮೊಳಹಳ್ಳಿ ಗಣೇಶ್ ಶೆಟ್ಟಿ, ಆಡಳಿತಾಧಿಕಾರಿ ಶ್ರೀಮತಿ ಆಶಾ ಸಂತೋಷ್ ಕುಮಾರ್ ಶೆಟ್ಟಿ, ಟ್ರಸ್ಟ್ ಕಾರ್ಯದರ್ಶಿ ಮಹೇಶ್ ಶೆಟ್ಟಿ, ಕೋಶಾಧಿಕಾರಿ ಸುಧೀರ್ ಶೆಟ್ಟಿ, ಸದಸ್ಯರಾದ ಮಂಜುನಾಥ್ ಶೆಟ್ಟಿ, ಯತಿರಾಜ್ ಶೆಟ್ಟಿ, ವಿದ್ಯಾರ್ಥಿ ನಾಯಕಿ ಸಚಿತ ಶೆಟ್ಟಿ ಉಪಸ್ಥಿತರಿದ್ದರು.
ಶಿಕ್ಷಕಿ ಪ್ರಿಯಾ ಸ್ವಾಗತಿಸಿದರು. ಶೈಕ್ಷಣಿಕ ನಿರ್ದೇಶಕರಾದ ಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಮುಖ್ಯ ಶಿಕ್ಷಕಿ ಮಮತಾ ಪೂಜಾರಿ ವರದಿ ವಾಚಿಸಿದರು. ಶ್ರೀರಾಣಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.ಶಿಕ್ಷಕಿಯರಾದ ಅನಿತಾ, ವನಿತಾ ಕಾರ್ಯಕ್ರಮ ನಿರೂಪಿಸಿದರು. ರುಜಿಯಾ ವಂದಿಸಿದರು.ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು.