ಇತರೆ

ಧರ್ಮಸ್ಥಳದಲ್ಲಿ ಭಕ್ತರ ಸೋಗಿನಲ್ಲಿ ಚಿನ್ನಾಭರಣ ಕಳವು:ತಾಯಿ-ಮಗಳ ಬಂಧನ

Views: 200

ಕನ್ನಡ ಕರಾವಳಿ ಸುದ್ದಿ: ಭಕ್ತರ ಸೋಗಿನಲ್ಲಿ ಚಿನ್ನಾಭರಣ  ಕಳ್ಳತನ ಮಾಡಿದ ಹುಬ್ಬಳ್ಳಿ ಮೂಲದ ತಾಯಿ-ಮಗಳನ್ನು ಧರ್ಮಸ್ಥಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಬ್ಬಳಿ ನಗರದ ಸಟಲೆಂಟ್ 2ನೇ ಕ್ರಾಸ್ ಗಂಗಾಧರ ನಗರ ನಿವಾಸಿ ಬೀಬಿ ಜಾನ್ (59) ಹಾಗೂ ಮಗಳು ಮಸಾಭಿ ಯಾನೆ ಆರತಿ (34) ಬಂಧಿತರು.

ಧರ್ಮಸ್ಥಳ ಠಾಣಾ ಪಿಎಸ್‌ಐ ತಂಡ ಕಳೆದ 5 ತಿಂಗಳಿನಿಂದ ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದು, ಆರೋಪಿಗಳಿಬ್ಬರು ವಿವಿಧ ಕಡೆ ಪ್ರಯಾಣ ಮಾಡುತ್ತ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದರು ಅವರು ನ. 23ರಂದು ಮತ್ತೆ ಧರ್ಮಸ್ಥಳಕ್ಕೆ ಕಳ್ಳತನ ಮಾಡಲು ಆಗಮಿಸುತ್ತಿರುವ ಕುರಿತು ಬಂದ ಖಚಿತ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತರನ್ನು ಪೊಲೀಸರು ನ್ಯಾಯಾಧೀಶರ ಮುಂದೆ ‘ಹಾಜರುಪಡಿಸಿ ಹೆಚ್ಚಿನ ವಿಚಾರಣೆಯ ದೃಷ್ಟಿಯಿಂದ 5 ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದರು. ಜತೆಗೆ ಆರೋಪಿಗಳು ಕಳ್ಳತನ ಮಾಡಿದ 5.32 ಲಕ್ಷರೂ. ಮೌಲ್ಯದ 76 ಗ್ರಾಂ ಚಿನ್ನಾಭರಣಗಳನ್ನು ಅವರ ಹುಬ್ಬಳಿಯ ಮನೆಯಿಂದ ವಶಪಡಿಸಿಕೊಂಡಿದ್ದಾರೆ. ಆರೋಪಿಗಳಿಬ್ಬರ ‘ಮೇಲೆ ಈ ಹಿಂದೆಯೂ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿರುವುದು ತನಿಖೆಯ ವೇಳೆ ತಿಳಿದುಬಂದಿದೆ. ದೇವಸ್ಥಾನಗಳಿಗೆ ಭಕ್ತರ ಸೋಗಿನಲ್ಲಿ ನುಗ್ಗಿ ಇತರ ಭಕ್ತರನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಬಳಿಕ ಪೊಲೀಸ್ ಕಸ್ಟಡಿ ಮುಗಿದ ಆರೋಪಿಗಳನ್ನು ಬುಧವಾರ ಸಂಜೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಿದೆ.

ಆಂಧ್ರಪ್ರದೇಶದ ನೆಲ್ಲೂರಿನ ಜೆ. ಲತಾ ಹಾಗೂ ಮನೆಯವರು ಮೇ 3ರಂದು ಧರ್ಮಸ್ಥಳ ದೇವಸ್ಥಾನಕ್ಕೆ ಆಗಮಿಸಿದ್ದರು. ಈ ವೇಳೆ ಅವರ ಚೀಲದಲ್ಲಿ 6.79 ಲಕ್ಷ ರೂ. ಮೌಲ್ಯದ 97 ಗ್ರಾಂ ಚಿನ್ನಾಭರಣವಿತ್ತು. ಅವರು ದೇವರ ದರ್ಶನ ಮುಗಿಸಿ ಉಡುಪಿ ಕಡೆಗೆ ತೆರಳಿದ್ದು, ಈ ವೇಳೆ ಅವರಿಗೆ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿತ್ತು. ಬಳಿಕ ಮತ್ತೆ ಧರ್ಮಸ್ಥಳಕ್ಕೆ ಆಗಮಿಸಿ ಕಳ್ಳತನ ಕುರಿತು ದೂರು ನೀಡಿದ್ದು, ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

 

Related Articles

Back to top button
error: Content is protected !!